ಬೆಂಗಳೂರು (ಜೂ.16): ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ಕ್ವಾರಂಟೈನ್ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ಹೊರರಾಜ್ಯದಿಂದ ಬರುತ್ತಿರುವ ಪ್ರಯಾಣಿಕರಿಂದ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು ಅಂತಹ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ಆಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹಲವು ಬಿಗಿ ಕ್ರಮಗಳನ್ನ ಕೈಗೊಂಡಿದ್ರು, ಹೊರರಾಜ್ಯದ ಪ್ರಯಾಣಿಕರ ಅಗಮನದಿಂದ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಅದರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಅದ್ರಿಂದ ಈ ಮೂರು ರಾಜ್ಯಗಳಿಂದ ಅಗಮಿಸುವ ಪ್ರಯಾಣಿಕರನ್ನ ಕ್ವಾರಂಟೈನ್ಗೆ ಒಳಪಡಿಸುವ ನಿಯಮಗಳನ್ನ ಬಿಗಿಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹೊಸ ಕ್ವಾರಂಟೈನ್ ಮಾರ್ಗಸೂಚಿಗಳನ್ನ ಪ್ರಕಟಿಸಿದೆ.
ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನ ಹೊಂದಿರುವ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನ ಏಳು ದಿನ ಸಾಂಸ್ಥಿಕ ಕ್ವಾರಂಟೈನ್, ಏಳು ದಿನ ಹೋಂ ಕ್ವಾರಂಟೈನ್ ಗೆ ಒಳಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಅದೇ ರೀತಿ ದೆಹಲಿ ಮತ್ತು ತಮಿಳುನಾಡಿನಿಂದ ಬರುವ ಪ್ರಯಾಣಿಕರು ಮೂರು ದಿನ ಸಾಂಸ್ಥಿಕ ಕ್ವಾರಂಟೈನ್ ಹನ್ನೊಂದು ದಿನ ಹೋಂ ಕ್ವಾರಂಟೈನ್ ಇರಬೇಕೆಂದು ತಿಳಿಸಲಾಗಿದೆ. ಇನ್ನೂ ದೇಶದ ಇತರೆ ರಾಜ್ಯಗಳಿಂದ ಅಗಮಿಸುವ ಪ್ರಯಾಣಿಕರು ಕಡ್ಡಾಯ 14 ದಿನ ಹೋಂ ಕ್ವಾರಂಟೈನ್ ಇರಬೇಕೆಂದು ಹೊಸ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ. ಈ ಮೊದಲು ಮಹಾರಾಷ್ಟ್ರ ಪ್ರಯಾಣಿಕರಿಗೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿತ್ತು, ಅದ್ರೆ ಈಗ ದೆಹಲಿ ಮತ್ತು ತಮಿಳುನಾಡು ಪ್ರಯಾಣಿಕರಿಗು ಸಹ ಮೂರು ದಿನ ಸಾಂಸ್ಥಿಕ ಕ್ವಾರಂಟೈನ್ ಹೇರಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕೋವಿಡ್-19; ಒಂದೇ ದಿನ 1,647 ಕೇಸ್, 73 ಸಾವು, ಸೋಂಕಿತರ ಸಂಖ್ಯೆ 42,829ಕ್ಕೆ ಏರಿಕೆ
ಇನ್ನೂ ರಾಜ್ಯಕ್ಕೆ ಬರುವ ಪ್ರತಿ ಪ್ರಯಾಣಿಕರು ಸೇವಾಸಿಂದು ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರಬೇಕು. ಸರಿಯಾದ ಪೋನ್ ನಂಬರ್ ಹಾಗೂ ವಿಳಾಸ ನೀಡಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಇನ್ನೂ ಹೊರರಾಜ್ಯದ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಸೇವಾಸಿಂದು ಪೋರ್ಟಲ್ ನೋಂದಣಿ ಮಾಡುವುದು ಕಡ್ಡಾಯ ಮಾಡಲಾಗಿದೆ. ಪ್ರಯಾಣದ ವೇಳೆ ಸಾರಿಗೆ ಸಂಸ್ಥೆ ಸಿಬ್ಬಂದಿ ಪೋರ್ಟಲ್ ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ವಿಮಾನ, ರೈಲು ಹಾಗೂ ಬಸ್ ಪ್ರಯಾಣದ ವೇಳೆ ಸೇವಾಸಿಂದು ಪೋರ್ಟಲ್ ಇದ್ದವರು ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಅಲ್ದೆ ಸೇವಾಸಿಂದು ಪೋರ್ಟಲ್ ನೋಂದಣಿ ಇಲ್ಲದೆ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟರೆ ಸಾರಿಗೆ ಸಂಸ್ಥೆ ಹಾಗೂ ಪ್ರಯಾಣಿಕರ ಮೇಲೆ NDMA ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸುವ ಎಚ್ಚರಿಕೆಯನ್ನ ಸರ್ಕಾರ ನೀಡಿದೆ. ಹೊಸ ಮಾರ್ಗಸೂಚಿಗಳು ಇಂದಿನಿಂದಲೇ ಜಾರಿಗೆ ಬರಲಿದ್ದು, ಇಂದಿನಿಂದ ದೆಹಲಿ ಹಾಗೂ ತಮಿಳುನಾಡಿನಿಂದ ಅಗಮಿಸುವ ಪ್ರಯಾಣಿಕರು ಮೂರು ದಿನ ಸಾಂಸ್ಥಿಕ ಕ್ವಾರಂಟೈನ್ ಒಳಪಡುವುದು ಕಡ್ಡಾಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ