Basavaraj Bommai: ದೆಹಲಿಯಲ್ಲಿ ಒಂದೇ ದಿನ 3 ಬಟ್ಟೆ ಬದಲಿಸಿ ಮಿಂಚಿದ ನೂತನ ಸಿಎಂ

ಮೂರು ಬಾರಿ ಬಟ್ಟೆ ಬದಲಿಸುವುದು ಅಕ್ರಮವೂ ಅಲ್ಲ, ಅಸಂವಿಧಾನಿಕವೂ ಅಲ್ಲ.‌ ಆದರೆ ಅಸೂಕ್ಷ್ಮತೆಯಂತೂ ಹೌದು.  ಜೊತೆಗೆ ಎಲ್ಲದಕ್ಕೂ ಸಂದರ್ಭ ಎಂಬುದೊಂದು ಇರುತ್ತದೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ನವದೆಹಲಿ: ರಾಜ್ಯದ ಜನ ಸಂಕಷ್ಟದಲ್ಲಿ ಇದ್ದಾರೆ. ಒಂದೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇನ್ನೊಂದೆಡೆ ಪ್ರವಾಹದ ಪರಿಸ್ಥಿತಿ ಇದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಮೂರು ದಿನ ಆದರೂ ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಮುಖ್ಯಮಂತ್ರಿ ಒಬ್ಬರೇ ಎಲ್ಲವನ್ನೂ ನೋಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ಕಷ್ಟಕ್ಕೆ ಧಾವಿಸುವ ಬದಲು ಹೈಕಮಾಂಡ್ ನಾಯಕರಿಗೆ ಧನ್ಯವಾದ ಸಮರ್ಪಿಸಲು ಇಡೀ ದಿನ ಕಳೆದಿದ್ದಾರೆ. ಇದೂ ಸಾಲದೆಂಬಂತೆ ಜನ ಕಡುಕಷ್ಟದಲ್ಲಿರುವ ಸಮಯದಲ್ಲಿ ಒಂದೇ ದಿನ ಮೂರು ಬಾರಿ ಬಟ್ಟೆ ಬದಲಿಸಿ ಗಮನ ಸೆಳೆದಿದ್ದಾರೆ.

ಮೂರು ಬಾರಿ ಬಟ್ಟೆ ಬದಲಿಸುವುದು ಅಕ್ರಮವೂ ಅಲ್ಲ, ಅಸಂವಿಧಾನಿಕವೂ ಅಲ್ಲ.‌ ಆದರೆ ಅಸೂಕ್ಷ್ಮತೆಯಂತೂ ಹೌದು.  ಜೊತೆಗೆ ಎಲ್ಲದಕ್ಕೂ ಸಂದರ್ಭ ಎಂಬುದೊಂದು ಇರುತ್ತದೆ. ಈಗ ರಾಜ್ಯದಲ್ಲಿ ಕೊವಿಡ್ ಮತ್ತು ಪ್ರವಾಹ ಇರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಆದವರು ಬೆಳಿಗ್ಗೆ, ಮಧ್ಯಾಹ್ನ, ಸಂಜೆಗೊಂದು ಬಟ್ಟೆ ಬದಲಿಸುವುದನ್ನು ಅಸಂವೇದನೆ ಎಂದು ಹೇಳಬೇಕಾಗುತ್ತದೆ.

ಮುಖ್ಯಮಂತ್ರಿ ಆದ ಬಳಿಕ ಶುಕ್ರವಾರ ಮೊದಲ ಬಾರಿಗೆ ದೆಹಲಿಗೆ ಬಂದಿದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಧರಿಸಿದ್ದು ಈ ಬಟ್ಟೆ. (ಕೆಳಗಿನ ಫೋಟೋ ನೋಡಿ).



ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲು ಹೊರಡುವ ವೇಳೆಗಾಗಲೇ ಮೊದಲಿನ‌ ಬಟ್ಟೆ ಬೇಡವೆನಿಸಿತು ಅವರಿಗೆ. ಮತ್ತೊಂದು ಬಟ್ಟೆಗೆ ಮಾರುಹೋದರು. ಅದಕ್ಕೆ ಉದಾಹರಣೆ ಈ ಕೆಳಗಿನ ಫೋಟೋ...



ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಹೊರಾಟಗ ಅವರಿಗೆ ಇನ್ನೊಂದು ಬಟ್ಟೆ ಮತ್ತು ಕೋಟು ಬೇಕಾಯಿತು. ಇದಕ್ಕೆ ಸಾಕ್ಷಿ ಈ ಫೋಟೋ...



ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ಗಂಜಿ ಕೇಂದ್ರ ತೆರೆದು ಅಲ್ಲಿ ಊಟ ಹಾಕಲಾಗುತ್ತಿದೆ. ಮೂರನೇ ಅಲೆಯ ಕೊರೋನಾ ಯಾವಾಗ ಬೇಕಾದರೂ ವಕ್ಕರಿಸಿಕೊಳ್ಳಬಹುದು ಎಂಬ ಆತಂಕ ಇದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಆದ ಬಸವರಾಜ ಬೊಮ್ಮಾಯಿ ಅವರಿಗೆ ಇಂಥ 'ಶೋಕಿ' ಬೇಕಿತ್ತಾ ಎಂಬ‌ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ‌.

ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಸಚಿವ ಸಂಪುಟದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಲಾಬಿ ಮಾಡಲೆಂದು ದೆಹಲಿ ಮತ್ತು ಬೆಂಗಳೂರಿಗೆ ಬರಬೇಡಿ. ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಹೋಗಿ ಜನರ ಕಷ್ಟಗಳಿಗೆ ಸ್ಪಂಧಿಸಿ' ಎಂದು ಶಾಸಕರಿಗೆ ಕರೆ ನೀಡಿದರು. ಅದು ಸರಿಯಾದ ಕ್ರಮವೇ. ಆದರೆ  ಮುಖ್ಯಮಂತ್ರಿ ಆದವರು ಅಥವಾ ಬೇರೆಯವರಿಗೆ ಬುದ್ದಿವಾದ ಹೇಳುವವರು ಮೊದಲು ತಾವು ಪಾಲಿಸಬೇಕಲ್ಲವೇ? ಕಡೆಯದಾಗಿ ಅದೃಷ್ಟದಿಂದ ಮುಖ್ಯಮಂತ್ರಿ ಆದ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಜನ ಅಪಾರವಾದ ನಿರೀಕ್ಷೆ ಹೊಂದಿದ್ದಾರೆ ಎಂಬುದು ಅವರಿಗೆ ಗೊತ್ತಿರಬೇಕು.
Published by:Kavya V
First published: