ನೆಲಮಂಗಲ (ಮಾ. 03): ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ ಮನೆಯವ ವಿರೋಧದ ನಡುವೆ ಮದುವೆಯಾಗಿ ರಕ್ಷಣೆ ಕೋರಿ ಪೊಲೀಸ್ ಠಾಣೆ ಮಟ್ಟಿಲು ಹತ್ತಿದ್ದಾರೆ. ಅಂತರ್ಜಾತಿಯ ವಿವಾಹವಾದ ಕಾರಣ ನಮ್ಮ ಮದುವೆಗೆ ಮನೆಯವರಿಂದ ವಿರೋಧವಿತ್ತು. ಆದರೆ, ನಾವು ಈಗ ಮದುವೆಯಾಗಿದ್ದು, ಈಗ ಪ್ರಾಣ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಪೊಲೀಸರ ರಕ್ಷಣೆ ಕೋರಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ದಾದಾಪೀರ್ ಲೇಔಟ್ ನಿವಾಸಿ ನಮ್ರತಾ (22) ಹಾಗೂ ಬೆಂಗಳೂರು ಉತ್ತರ ತಾಲೂಕಿನ ಬೈರೆಗೌಡನಹಳ್ಳಿ ನಿವಾಸಿ ಅಭಿಷೇಕ್ (24) ಮದುವೆಯಾದ ಜೋಡಿ. ಯುವಕನ ಮನೆಯವರಿಗೆ ಯುವತಿಯ ಪೋಷಕರು ಬೆದರಿಕೆ ಹೊಡ್ಡುತ್ತಿದ್ದು ಹತ್ಯೆ ಮಾಡುವುದಾಗಿ ಜೀವಬೆದರಿಕೆ ಇದೆ ಎಂದು ದೂರು ಸಲ್ಲಿಸಲಾಗಿದೆ.
ಫಿಟ್ನೆಸ್ ಸೆಂಟರ್ನಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇವರು ಕಳೆದ ಫೆಬ್ರವರಿ 26ರಂದು ಮನೆ ಬಿಟ್ಟು ಹೋಗಿದ್ದಾರೆ. ಹಾಸನ, ಶಿವಮೊಗ್ಗದಲ್ಲಿ ದಿನಕಳೆದು ಮಾರ್ಚ್ 1ನೇ ತಾರೀಖಂದು ಶಿರಸಿಯ ಮಾರಿಕಾಂಬ ದೇವಾಲಯದಲ್ಲಿ ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ಇದನ್ನು ಓದಿ: ಅಂಡೋತ್ಪತ್ತಿ ಎಂದರೇನು? ಗರ್ಭಧಾರಣೆಗೂ ಮುನ್ನ ಈ ಬಗ್ಗೆ ತಿಳಿಯಬೇಕಾದ ಅಂಶಗಳು
ಆದರೆ, ಹುಡುಗಿ ಮನೆಯವರು ಯುವತಿ ನಾಪತ್ತೆಯಾಗುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆಯಲ್ಲಿಯೂ ಎರಡು ಕುಟುಂಬದವರು ಹೈ ಡ್ರಾಮ ನಡೆಸಿದ್ದಾರೆ. ಕಡೆಗೆ ಪೊಲೀಸರ ಸಂಧಾನದಿಂದ ಈ ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿದೆ. ಅಲ್ಲದೇ, ನವ ಜೋಡಿಗಳಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಎರಡು ಕುಟುಂಬಕ್ಕೂ ಎಚ್ಚರಿಕೆ ನೀಡಲಾಗಿದೆ.
ಒಟ್ಟಾರೆ ಅಂತರ್ಜಾತಿಯ ವಿವಾಹವೊಂದು ಸುಖಾಂತ್ಯಗೊಂಡಿದ್ದು ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನವ ಜೋಡಿಗಳು ಎಲ್ಲರನ್ನೂ ತೊರೆದು ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ