‘ಓಲೆಕಾರ್​ಗೆ ಮಂತ್ರಿಸ್ಥಾನ ನೀಡದಿದ್ದರೆ ಸಿಎಂ ಹಾವೇರಿಗೆ ಕಾಲಿಡಲು ಬಿಡಲ್ಲ’

ಬೊಮ್ಮಾಯಿ ಕ್ಯಾಬಿನೆಟ್ ಸೇರಿಕೊಳ್ಳಲು ರಾಜ್ಯದ ಅನೇಕ ಬಿಜೆಪಿ ಶಾಸಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ನೆಹರೂ ಓಲೇಕಾರ್, ಪರಣ್ಣ ಮುನವಳ್ಳಿ ಮೊದಲಾದ ಮುಖಂಡರು ತಮ್ಮ ಬೆಂಬಲಿಗರ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.

ನೆಹರೂ ಓಲೇಕಾರ್ ಮತ್ತು ಪರಣ್ಣ ಮುನವಳ್ಳಿ

ನೆಹರೂ ಓಲೇಕಾರ್ ಮತ್ತು ಪರಣ್ಣ ಮುನವಳ್ಳಿ

  • Share this:
ಬೆಂಗಳೂರು: ದೆಹಲಿಯಲ್ಲಿ ಅನೇಕ ಶಾಕಸರು ಹಲವು ದಿನಗಳಿಂದ ಅಲ್ಲೇ ಬೀಡುಬಿಟ್ಟು, ಮಂತ್ರಿಗಿರಿಗಾಗಿ ಭರ್ಜರಿ ಒತ್ತಡ, ಲಾಬಿ ನಡೆಸುತ್ತಿದ್ದಾರೆ. ಇತ್ತ ರಾಜೀನಾಮೆ ಬಳಿಕವೂ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಪವರ್ ಸೆಂಟರ್ ಆಗಿ ಹೊರಹೊಮ್ಮಿದ್ದು ಇಲ್ಲಿಯೂ ಅನೇಕರು ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ಅದರಲ್ಲೂ ಹಾವೇರಿ ಶಾಸಕ ನೆಹರು ಓಲೆಕಾರ್ ಅವರ ಬೆಂಬಲಿಗರಂತೂ ನಿತ್ಯವೂ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಕಳೆದ ಮೂರು ದಿನಗಳಿಂದ ಯಡಿಯೂರಪ್ಪ ನಿವಾಸಕ್ಕೆ ಬರುತ್ತಿರುವ ನೆಹರು ಓಲೆಕಾರ್ ಅವರ ಬೆಂಬಲಿಗರು ನಿನ್ನೆ ತುಸು ಹೆಚ್ಚೇ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ನಮ್ಮ ಹಾವೇರಿ ಜಿಲ್ಲೆಯವರೇ. ಆದರೂ ನೆಹರು ಓಲೆಕಾರ್ ಅವರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಬೇಕು. ಇಲ್ಲವಾದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿಗೆ ಕಾಲಿಡಲು ಬಿಡುವುದಿಲ್ಲ. ಅವರು ಆಗಮಿಸಿದರೆ ಅಲ್ಲೇ ಘೇರಾವ್ ಹಾಕಿ ತಡೆಯುತ್ತೇವೆ ಎಂದು ಎಚ್ವರಿಕೆ ನೀಡಿದರು.

ನೆಹರು ಓಲೆಕಾರ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾತ್ರವಲ್ಲ ಎಸ್.ಸಿ ಹಾಗೂ ಎಸ್.ಟಿ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಓಲೆಕಾರ್ ಅವರಿಗೆ ಮೊದಲಿನಿಂದಲೂ ಅನ್ಯಾಯವಾಗಿದೆ. ಯಡಿಯೂರಪ್ಪ ಅವರಿಗೂ‌ ಮನವಿ ಮಾಡಿದ್ದೇವೆ. ಈ ಬಾರಿಯಾದರೂ ಸಂಪುಟಕ್ಕೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿದರು.

ಕಾವೇರಿ ನಿವಾಸದ ಮುಂದೆ ಹಠಕ್ಕೆ ಬಿದ್ದವರಂತೆ ವರ್ತಿಸಿದ ನೆಹರು ಓಲೆಕಾರ್ ಬೆಂಬಲಿಗರು, ಯಡಿಯೂರಪ್ಪ ಅವರು ಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಬೇಕು. ಅಲ್ಲಿಯವರೆಗೆ ನಾವು ಜಾಗ ಖಾಲಿ ಮಾಡುವುದಿಲ್ಲ ಎಂದು ಹಠಕ್ಕೆ ಬಿದ್ದರು. ಪ್ರತಿಭಟನೆಗೆ ಅವಕಾಶ ಇಲ್ಲವಾದ್ದರಿಂದ ಪೊಲೀಸರು ಬೆಂಬಲಿಗರನ್ನು ಯಡಿಯೂರಪ್ಪ ನಿವಾಸದ ಮುಂದಿನ ಜಾಗದಿಂದ ಖಾಲಿ ಮಾಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಭಯೋತ್ಪಾದಕರ ಪರ ನೀತಿಯನ್ನು ತೋರುತ್ತಿದೆ : ನಳಿನ್​​ ಕುಮಾರ್​ ಕಟೀಲ್​​ ಟೀಕೆ

ಪರಣ್ಣ ಮುನವಳ್ಳಿ ಪರ ಲಾಬಿ: 

ಗಂಗಾವತಿ ಶಾಸಕ‌ ಪರಣ್ಣ ಮುನವಳ್ಳಿ ಕೂಡ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು. ತಮಗೂ ಮಂತ್ರಿ ಸ್ಥಾನ ಕೊಡಿಸಬೇಕೆಂದು ಮನವಿ ಮಾಡಿ ತೆರಳಿದರು. ಮುನವಳ್ಳಿ ಯಡಿಯೂರಪ್ಪ ನಿವಾಸದಿಂದ ಹೊರಟ ಕೆಲ ಹೊತ್ತಿನಲ್ಲೇ ಅವರ ಬೆಂಬಲಿಗರು ಆಗಮಿಸಿದರು. ವೀರಶೈವ ಲಿಂಗಾಯತರಿಗೆ ಈ ಬಾರಿ ಅವಕಾಶ ಸಿಗಬೇಕು. ಗಂಗಾವತಿಗೆ ಪ್ರಾತಿನಿಧ್ಯ ಸಿಗಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದರು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಹಾಸನ ಶಾಸಕ ಪ್ರೀತಂಗೌಡ, ಸುರಪುರ ಶಾಸಕ ರಾಜುಗೌಡ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿ ಅನೇಕ ಶಾಸಕರು ಯಡಿಯೂರಪ್ಪ ನಿವಾಸಕ್ಕೆ ಎಡತಾಕುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ಇವರೆಲ್ಲ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದರು.

ಈಗಾಗಲೇ ಯಡಿಯೂರಪ್ಪ ಅವರು ತಮ್ಮ ನಿಷ್ಠ ಶಾಸಕರ ಪಟ್ಟಿಯನ್ನು ಬೊಮ್ಮಾಯಿಗೆ ನೀಡಿದ್ದಾರೆ ಎನ್ನಲಾಗಿದೆ. 18 ಶಾಸಕರನ್ನು ಮಂತ್ರಿ ಮಾಡಲು ಯಡಿಯೂರಪ್ಪ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಹೈಕಮಾಂಡ್ ಎಷ್ಟು ಜನರಿಗೆ ಅಂಕಿತ ಹಾಕುತ್ತದೆ ಎಂಬ ಕುತೂಹಲದ‌ ಮಧ್ಯೆ ಒತ್ತಡ, ಲಾಬಿ ಜೋರಾಗುತ್ತಲೇ ಇದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ದಶರಥ್ ಸಾವೂರು
Published by:Vijayasarthy SN
First published: