ಯಾದಗಿರಿ (ಅ.30): ಲಾಕ್ಡೌನ್ ಸಮಯದಲ್ಲಿ ಪಾಠ, ಓದು, ಆಟ ಎಂದು ಕಾಲಕಳೆಯಬೇಕಿದ್ದ ಮಕ್ಕಳು ಕಳೆದೆರಡು ದಿನಗಳಿಂದ ಪೊರಕೆ, ಸಲಿಕೆ ಹಿಡಿದುಕೊಂಡು ಗ್ರಾಮದ ಚರಂಡಿ ಸ್ವಚ್ಛತೆಗೆ ಇಳಿದಿದ್ದಾರೆ. ಇವರೆಲ್ಲಾ ಯಾವುದೋ ಸ್ವಯಂ ಸೇವಾ ಸಂಘಟನೆಯಿಂದಾಗಿ ಈ ಕಾರ್ಯಕ್ಕೆ ಇಳಿದಿಲ್ಲ. ತಮ್ಮೂರಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ತಾವೇ ಸ್ವತಃ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಮೂಲಕ ಶುಚಿತ್ವದ ಕಾಳಜಿ ಮೆರೆದಿದ್ದಾರೆ. ಜೊತೆಗೆ ಗ್ರಾಮದ ಪ್ರತಿನಿಧಿಗಳು, ಗ್ರಾಮಸ್ಥರಿಗೆ ನಾಚಿಕೆಯಾಗುವಂತೆ ಮಾಡಿದ್ದಾರೆ. ಅಂದಹಾಗೆ ಈ ಮಕ್ಕಳ ಈ ಪರಿಸರ ಕಾಳಜಿಗೆ ನರೇಂದ್ರ ಮೋದಿಯವರೇ ಸ್ಪೂರ್ತಿಯಂತೆ. ತಾವು ಆಟ ಆಡುವ ರಸ್ತೆಯ ಚರಂಡಿ ಗಬ್ಬು ನಾರುತ್ತಿದ್ದರೂ ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಮೋದಿ ಅವರು ಶುಚಿತ್ವದ ಕರೆಯಂತೆ ಮಕ್ಕಳೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ತಾಲೂಕಿನ ಹೆಡಗಿಮುದ್ರಾ ಗ್ರಾಮದ ಚರಂಡಿ ಹಾಗೂ ರಸ್ತೆಯು 6 ತಿಂಗಳಿಂದ ತ್ಯಾಜ್ಯ ಸಂಗ್ರಹಗೊಂಡು ದುರ್ವಾಸನೆ ಬಿರುತಿತ್ತು. ಇತ್ತೀಚೆಗೆ ಬಂದ ಮಳೆ ಹಿನ್ನೆಲೆ ಗ್ರಾಮದ ರಸ್ತೆಯು ಕೆಸರು ಗದ್ದೆಯಂತಾಗಿತ್ತು.ಗ್ರಾಮದ ಬಸ್ ನಿಲ್ದಾಣದಿಂದ ಹನುಮಾನ ಮಂದಿರದ ವರಗೆ ತೆರಳುವ ಚರಂಡಿ ಹಾಗೂ ರಸ್ತೆ ಮೇಲೆ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿತ್ತು.
ಈ ರಸ್ತೆ ಮೂಲಕವೇ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಂಚಾರ ಮಾಡಿದರೂ ಸ್ವಚ್ಛತೆಗೂ ನಮಗೂ ಸಂಬಂಧವಿಲ್ಲದಂತೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಪಂಚಾಯತ ಮಟ್ಟದ ಅಧಿಕಾರಿಗಳು ಜನರ ಆರೋಗ್ಯ ಹಿತ ದೃಷ್ಟಿಯಿಂದ ಜಾಗೃತರಾಗಿ ಸ್ವಚ್ಛತೆ ಮಾಡದೆ ಕಣ್ಮುಚ್ಚಿ ಕುಳಿತಿದ್ದರು. ಈಗ ಮಕ್ಕಳೆ ಸ್ವಚ್ಛತೆ ಮಾಡಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಸುವ ಕಾರ್ಯ ಮಾಡಿದ್ದಾರೆ.
ಶುಚಿತ್ವ ಕಾಪಾಡಲು ಮಕ್ಕಳ ತಂಡ ರಚನೆ ...!
ಮಕ್ಕಳು ಕೂಡ ನಿತ್ಯವೂ ಈ ರಸ್ತೆ ಮೂಲಕ ಸೈಕಲ್ ತೆಗೆದುಕೊಂಡು ಹೋಗುತ್ತಾರೆ. ಮಕ್ಕಳು ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು ಅದೆ ರೀತಿ ಚರಂಡಿ ನೀರು ರಸ್ತೆಯಲ್ಲಿ ಸಂಗ್ರಹವಾಗಿದ್ದನ್ನು ಅರಿತು 6 ಜನ ಮಕ್ಕಳೇ ಸ್ವಚ್ಛತೆ ಮಾಡಲು ತಂಡ ರಚನೆ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಯಲ್ಲಿ ಪೊರಕೆ ಹೀಡಿದು ಸ್ವಚ್ಛತೆ ಅಭಿಯಾನ ಮಾಡಿದ್ದು ಮಕ್ಕಳಿಗೆ ಪ್ರೇರಣೆಯಾಗಿದೆ. ಮೋದಿ ಅವರೇ ಸ್ವಚ್ಛತೆ ಮಾಡಿದ ಮೇಲೆ ನಾವ್ಯಾಕೆ ನಮ್ಮ ಊರಿನ ರಸ್ತೆ ಸ್ವಚ್ಛತೆ ಮಾಡಬಾರದೆಂದು ಚರ್ಚೆ ಮಾಡಿ ತಂಡ ರಚನೆ ಮಾಡಿ ಸ್ವಚ್ಛತೆ ಕಾಳಜಿ ಮೆರೆದಿದ್ದಾರೆ.
ಇದನ್ನು ಓದಿ: ಬಾಲ್ಯ ವಿವಾಹ ತಡೆಯಲು ಹೋದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಗ್ರಾಮಸ್ಥರು
ತಿಪ್ಪಣ್ಣ,ಸಮೀರ್ ಖಾನ್, ಸಾಗರ, ಬಸವರಾಜ, ಶಿವರಾಜ, ಶಿವಕುಮಾರ ಅವರು ಕಳೆದ ಎರಡು ದಿನಗಳಿಂದ ಚರಂಡಿ ಹಾಗೂ ರಸ್ತೆ ಸ್ವಚ್ಛತೆ ಮಾಡುತ್ತಿದ್ದಾರೆ. ಇವರ ಕೆಲಸಕ್ಕೆ ಚಿಕ್ಕ ಮಕ್ಕಳು ಕೈಜೊಡಿಸಿದ್ದಾರೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಿವರಾಜ ಮಾತನಾಡಿ, ರಸ್ತೆ ಗಲೀಜು ಆಗಿತ್ತು ನಾವು ಸೈಕಲ್ ತೆಗೆದುಕೊಂಡು ಹೋಗಬೇಕೆಂದರೂ ಕಷ್ಟವಾಗಿತ್ತು.,6 ಜನ ಗೆಳೆಯರು ಕೂಡಿಕೊಂಡು ಚರಂಡಿ ಹಾಗೂ ರಸ್ತೆ ಸ್ವಚ್ಛತೆ ಮಾಡುತ್ತಿದ್ದೇವೆ ಎಂದರು. ಠಾಣಾಗುಂದಿ ಪಂಚಾಯತ ವ್ಯಾಪ್ತಿಗೆ ಬರುವ ಹೆಡಗಿಮುದ್ರಾ ಗ್ರಾಮದ ಮಕ್ಕಳ ಕಾರ್ಯಕ್ಕೆ ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ