ಚಿಕ್ಕಬಳ್ಳಾಪುರ(ಜು.24): ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 9094 ಹೊಸ ಉದ್ಯೋಗ ಚೀಟಿ ವಿತರಣೆ ಮಾಡಲಾಗಿದೆ. ಪ್ರಸ್ತುತ ನರೇಗಾ ಯೋಜನೆಯಡಿಯಲ್ಲಿ ನಡೆಯುವ ಎಲ್ಲ ಕಾಮಗಾರಿಗಳು ರೈತರ ಪರವಾಗಿದ್ದು, ಈ ಕಾಮಗಾರಿಗಳನ್ನು ಸದುಪಯೋಗ ಪಡೆದುಕೊಳ್ಳಲು ರೈತರು, ಕೃಷಿ ಕೂಲಿ ಕಾರ್ಮಿಕರು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಈ ಸಂಬಂಧ ನ್ಯೂಸ್-18 ಕನ್ನಡ ಜೊತೆ ಮಾತನಾಡಿದ ಫೌಝಿಯ ತರನ್ನುಮ್, ಕೋವಿಡ್-19 ತುರ್ತು ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ನಿರ್ಮಾಣ, ಇಂಗುಗುಂಡಿ, ಚೆಕ್ ಡ್ಯಾಂ, ಹೂಳೆತ್ತುವುದು ಕಾಮಗಾರಿಗಳು ಕೈಗೊಳ್ಳಲಾಗಿದೆ ಎಂದರು.
ಹೀಗೆ ಮುಂದುವರಿದ ಅವರು, ಸರ್ಕಾರಿ ಶಾಲೆಗಳಿಗೆ ತಡೆಗೋಡೆ ನಿರ್ಮಾಣ, ಕುರಿ ಕೊಟ್ಟಿಗೆ, ಕೊಳವೆ ಬಾವಿ ಮರುಪೂರಣ, ಜಲ ಸಂರಕ್ಷಣೆ ಕಾಮಗಾರಿಗಳು, ರೈತರು ಮತ್ತು ವೈಯಕ್ತಿಕ ಫಲಾನುಭವಿಗಳು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿಹೊಂಡ, ರೇಷ್ಮೆ ಮರಗಡ್ಡಿ, ಬಾಳೆ ತೆಂಗು, ಗುಲಾಬಿ, ಸೀಬೆ, ಪಪ್ಪಾಯಿ ಗಿಡಗಳನ್ನು ಹಾಕಿಕೊಳ್ಳುವುದು ಸೇರಿದಂತೆ ಜಿಲ್ಲೆಯಲ್ಲಿ 16,301 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆ ಒಬ್ಬ ವೈಯಕ್ತಿಕ ಫಲಾನುಭವಿಯು ಆರ್ಥಿಕ ವರ್ಷದಲ್ಲಿ 2 ಲಕ್ಷ ರೂ. ಅನುದಾನ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ, ಕೆಲಸ ಮಾಡಲು ಗ್ರಾಮ ಪಂಚಾಯಿತಿಗೆ ಅಥವಾ ಕಾಯಕ ಬಂಧು ಆಫ್ ಮಿತ್ರದ ಮೂಲಕ ಅರ್ಜಿ ಸಲ್ಲಿಸಬಹುದು. ನರೇಗಾ ಯೋಜನೆಯಡಿ ಪುರುಷರಿಗೆ ಮಾತ್ತು ಮಹಿಳೆಯರಿಗೆ ಪ್ರತಿ ದಿನಕ್ಕೆ 275 ರೂ. ಸಮಾನ ವೇತನ ನೀಡಲಾಗುತ್ತದೆ. ಯಾವುದೇ ಮಧ್ಯವರ್ತಿ ಇಲ್ಲದೆ ಕೂಲಿ ನಿರ್ವಹಿಸಿದವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಈ ಎಲ್ಲ ಕಾಮಗಾರಿಗಳು ಕೃಷಿ ಬೆಳವಣಿಗೆಗೆ ಸಂಬಂಧಿಸಿವೆ. ಆದ್ದರಿಂದ ರೈತರು ನರೇಗಾ ಯೋಜನೆಯಡಿ ಬರುವ ಕಾಮಗಾರಿಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಸಕ್ತ ವರ್ಷದಲ್ಲಿ 88 ಲಕ್ಷ ಮಾನವ ದಿನಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಶೇ.62ರಷ್ಟು ಮಾನವ ದಿನಗಳು ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 1.93 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದ್ದು, ಇದರಲ್ಲಿ 4.89 ಲಕ್ಷ ಜನರು ನೊಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂಗನವಾಡಿ 11, ದನದ ಕೊಟ್ಟಿಗೆ 1581, ಕೊಳವೆ ಬಾವಿ ಮರುಪೂರಣ ಘಟಕ 172, ಕಾಲುವೆ ಅಭಿವೃದ್ದಿ 420, ಕೃಷಿಕೊಂಡ 2688, ಬದು ನಿರ್ಮಾಣ 6438, ಎರೆ ಹುಳು ತೊಟ್ಟಿ 61, ವಾಟರ್ ಪೂಲ್ 86, ಮಳೆ ನೀರು ಕೊಯ್ಲು 163, ಸ್ಮಶಾನ ಅಭಿವೃದ್ಧಿ 12, ರೇಷ್ಮೆ ಮರಗಡ್ಡಿ ನಾಟಿ 55 ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರದೇಶಾಭಿವೃದ್ಧಿ 3.0 ಲಕ್ಷ ಗಿಡಗಳನ್ನು ನಾಟಿ ಮಾಡಲಾಗಿದೆ ಎಂದರು.
ಪ್ರತಿ ನೊಂದಾಯಿತ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ, ವೃದ್ದರು ಮತ್ತು ವಿಕಲಚೇತನರಿಗೆ ಕೆಲಸದ ಪರಿಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 18004258666 ಸಂಪರ್ಕಿಸಬಹುದು. ಕಾಯಕ ಮಿತ್ರ ಆಪ್ ಮೂಲಕ ಕೂಲಿ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ನರೇಗಾ ನೋಡಲ್ ಅಧಿಕಾರಿ ನೋಮೇಶ್ ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ