ಬೆಂಗಳೂರು (ಆ. 27) : ಗಣೇಶ ಚತುರ್ಥಿಗೆ (Ganesh Chaturthi) ಇನ್ನೇನು ದಿನಗಣನೆ ಶುರುವಾಗಿದೆ. ಎಲ್ಲೆಡೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಸಿದ್ಧತೆ ಆರಂಭವಾಗಿದೆ. ಕೋವಿಡ್‌ನಂತಹ (Covid) ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಗಣೇಶ ಹಬ್ಬದ ಸಂಭ್ರಮಾಚರಣೆ ಕಾಣಿಸುತ್ತಿದೆ. ಇದೇ ವೇಳೆ ಪರಿಸರ ಮಾಲಿನ್ಯ ತಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ನೂತನ ರೀತಿಯ ಆಚರಣೆಗೆ ನಾಂದಿಯಾಗಲು ತೀರ್ಮಾನಿಸಿದೆ. ಅದುವೇ ಅರಿಶಿಣ ಗಣೇಶ. ಅದು ಕೂಡ ಗಿನ್ನಿಸ್ ದಾಖಲೆ (Guinness World Records) ಸಂಕಲ್ಪದೊಂದಿಗೆ ಈ ಕಾರ್ಯಕ್ಕೆ ಮುಂದಾಗಿದೆ.
ಈ ಮೊದಲು ಪರಿಸರ ಸ್ನೇಹಿ ಗಣಪನ ಬಗ್ಗೆ ಹಲವಾರು ಯೋಜನೆ ರೂಪಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಅರಿಶಿಣದಿಂದ ನಿರ್ಮಿಸಿದ ಗಣೇಶನ ಪ್ರತಿಷ್ಠಾಪನೆ ಮಾಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಹೆಜ್ಜೆ ಇಟ್ಟಿದೆ. ರಾಜ್ಯಾದ್ಯಂತ ಅರಿಶಿಣದಿಂದ ಗಣಪನ ಮಾಡಿ ಆರಾಧಿಸುವ ಮೂಲಕ ಸರಳ ಹಾಗೂ ಪರಿಸರ ಸ್ನೇಹಿ ಸಂಭ್ರಮಾಚರಣೆ ಮಾಡುವಂತೆ ಜನರಿಗೆ ಮನವಿ ಮಾಡಿದೆ.
10ಲಕ್ಷ ಅರಿಶಿಣ ಗಣಪನ ಮೂರ್ತಿಗೆ ಸಂಕಲ್ಪ:
ಇಲಾಖೆ ಪ್ರತಿ ಬಾರಿಯೂ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶನ ಮೂರ್ತಿ ಪ್ರತಿಷ್ಠಾಪನೆ ಬೇಡ ಎಂದು ಜಾಹೀರಾತು ಮಾತ್ರ ನೀಡುತ್ತಿತ್ತು. ಆದರೆ ಈ ಬಾರಿ ಇದೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಸಚಿವ ಆನಂದ್ ಸಿಂಗ್ ಅರಿಶಿಣ ಗಣೇಶನ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಚರ್ಚ್‌ಸ್ಟ್ರೀಟ್‌ನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಬಾರಿಯ ಗಣೇಶ ಚತುರ್ಥಿಯ ವೇಳೆ 10ಲಕ್ಷ ಅರಿಶಿಣದಿಂದ ಮಾಡಿದ ಮೂರ್ತಿ ಮಾಡಿಸಲು ಸಂಕಲ್ಪ ಹೊಂದಿದ್ದಾರೆ. ಅದರ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ.
ಅಭಿಯಾನ ಹೇಗೆ?
ಜನರಿಂದಲೇ ಅಭಿಯಾನ ಪ್ರಾರಂಭಿಸಿ, ಅದಕ್ಕೆ ಉತ್ತೇಜನ ನೀಡಲು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ರಚಿಸಲಾಗುತ್ತದೆ. ಅರಿಶಿಣದಿಂದ ತಯಾರಿಸಿದ ಗಣಪನ ಫೋಟೋ ಅಪ್‌ಲೋಡ್ ಮಾಡಬಹುದಾಗಿದೆ. ಜೊತೆಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಕೂಡ ಫೋಟೋ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಯೋಗ ನಡೆಯುತ್ತಿದ್ದು, ಇದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನು ಓದಿ: ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಸೊಯಾಬೀನ್ ಬೆಳೆದ ರೈತ ಕಂಗಾಲು
ಅರಿಶಿಣ ಗಣಪ ಯಾಕೆ?
ಈಗಾಗಲೇ ಪಿಓಪಿ ಗಣಪನ ಬದಲಿಗೆ ಜೇಡಿ ಮಣ್ಣಿನಿಂದ ತಯಾರಿಸಿ, ಗಣಪನ ವಿಸರ್ಜನೆ ಮಾಡಿ ಎಂದು ಇಲಾಖೆಯೇ ಪ್ರಕಟಿಸುತ್ತಿತ್ತು. ಅರಿಶಿಣದಿಂದ ಗಣಪನ ಮೂರ್ತಿ ಮಾಡಿ, ಮನೆಯಲ್ಲೇ ವಿಸರ್ಜಿಸಿ ಎಂದು ಹೇಳುವ ವಿನೂತನ ಅಭಿಯಾನಕ್ಕೂ ಕಾರಣವನ್ನೂ ಆನಂದ್ ಸಿಂಗ್ ಹೇಳಿದ್ದಾರೆ. ಅರಿಶಿಣ ಔಷಧಿ ಗುಣವಳ್ಳದ್ದು, ಯಾವುದೇ ಗಾಯ ಆದರೆ ಅರಿಶಿಣ ಹಚ್ಚಿದರೆ ಗುಣಮುಖವಾಗುತ್ತದೆ. ಅರಿಶಿಣ ಮಂಗಳಕರವೂ ಹೌದು. ಅರಿಶಿಣದಿಂದ ಗಣೇಶನ ತಯಾರಿಸಿ, ಮನೆಯಲ್ಲೇ ವಿಸರ್ಜಿಸಿ, ಅದರ ನೀರನ್ನು ಮನೆಯ ಅಂಗಳಕ್ಕೆ ಸಿಂಪಡಿಸಿದರೆ ಎಲ್ಲವೂ ಶುಭಕರವಾಗುತ್ತದೆ ಎನ್ನುವುದು ಸಚಿವರ ಅಭಿಪ್ರಾಯ.
ಮುಂದಿನ ವರ್ಷದಿಂದ ಪಿಓಪಿ ಗಣೇಶ ನಿಷೇಧ:
ಇಲಾಖೆ ಎಷ್ಟೇ ಕಟ್ಟುನಿಟ್ಟಾದ ಆದೇಶ ಹೊರಡಿಸಿದರೂ ಪಿಓಪಿ ಗಣೇಶನ ನಿರ್ಮಾಣ ಹಾಗೂ ಬಳಕೆ ನಿಂತಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ಪಿಓಪಿ ವಸ್ತುವಿನಿಂದ ನಿರ್ಮಿಸಿದ ಗಣೇಶ ಮೂರ್ತಿಯನ್ನು ನಿಷೇಧಿಸಲಾಗುತ್ತದೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ. ಪಿಓಪಿ ಗಣೇಶ ಮೂರ್ತಿ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಿಂದಲೂ ತರಿಸಲಾಗುತ್ತಿದೆ. ಇದಕ್ಕೆ ಇಲಾಖೆಯೇ ಹೊಸ ಕಾನೂನು ರೂಪಿಸಲಿದೆ. ಪಿಓಪಿ ಕಲಾವಿದರನ್ನು ಕರೆದು ಮಾತನಾಡಿ, ಅವರ ಅಭಿಪ್ರಾಯ ಪಡೆದು ನಿಷೇಧಕ್ಕೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ:
ಪರಿಸರ ಮಾಲಿನ್ಯ ತಡೆಯಲು ಇರುವ ಅಧಿಕಾರಿಗಳು ಪಿಓಪಿ ಗಣೇಶನ ಮೂರ್ತಿಗೆ ಅವಕಾಶ ಮಾಡಿಕೊಟ್ಟರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆಲ ದೂರುಗಳು ಈಗಾಗಲೇ ತಿಳಿದಿವೆ. ಇನ್ನುಮುಂದೆ ಇಂತಹ ಅಶಿಸ್ತು ಸಹಿಸುವುದಿಲ್ಲ ಎಂದು ಆನಂದ್ ಸಿಂಗ್ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ