HOME » NEWS » State » NATIONAL POLITICS NEEDS LEADERS LIKE SIDDARAMAIAH SAYS HD DEVEGOWDA RHHSN DBDEL

ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರಂತಹ ನಾಯಕರ ಅಗತ್ಯವಿದೆ: ಎಚ್.ಡಿ.ದೇವೇಗೌಡರ ಅಚ್ಚರಿಯ ಹೇಳಿಕೆ!

ಇದಲ್ಲದೆ ದೇವೇಗೌಡರು ಜಾತ್ಯತೀತ ವಿಷಯದಲ್ಲಿ ಯಾವತ್ತೂ ಮಾರ್ಪಾಡಾಗಲ್ಲ ಎಂದು ಪುನರುಚ್ಛರಿಸಿದರು. ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಆಗುವುದಕ್ಕೂ ಕಾಂಗ್ರೆಸ್ ನಾಯಕರೇ ಕಾರಣ. ಇವರು ಮಾತಿನಂತೆ ನಡೆದುಕೊಳ್ಳದ ಕಾರಣ ಶಾಸಕರು ಸಿಡಿದೆದ್ದು ಹೊರಟ್ಟಿಯವರನ್ನು ಬೆಂಬಲಿಸಿದ್ದಾರೆ. ಇದು ವಾಸ್ತವವಾಗಿ ನನಗೆ ಆಗಿರುವ ಹಿನ್ನಡೆ ಕೂಡ ಹೌದು ಎಂದೂ ಹೇಳಿದರು.

news18-kannada
Updated:March 1, 2021, 4:08 PM IST
ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರಂತಹ ನಾಯಕರ ಅಗತ್ಯವಿದೆ: ಎಚ್.ಡಿ.ದೇವೇಗೌಡರ ಅಚ್ಚರಿಯ ಹೇಳಿಕೆ!
ದೆಹಲಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾದ ಎಚ್.ಡಿ.ದೇವೇಗೌಡ.
  • Share this:
ನವದೆಹಲಿ (ಮಾ. 1): ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನಸಭೆಯ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂದು ಮಾಜಿ ಪ್ರಧಾನಿಗಳೂ ಆದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಮವಾರ ದೆಹಲಿಯಲ್ಲಿ ತಮ್ಮ ಮೊಮ್ಮಗ, ಸಂಸದ ಪ್ರಜ್ವಲ್ ರೇವಣ್ಣ ಅವರ ಗೃಹ ಪ್ರವೇಶ ಕಾರ್ಯಕ್ರಮದ ವೇಳೆ ದೇವಗೌಡರು ಪತ್ರಕರ್ತರೊಂದಿಗೆ ಮಾತಿಗಿಳಿದು 'ಒಂದು ಕಾಲದ ತಮ್ಮ ಕಿರಿಯ ಸ್ನೇಹಿತ' ಸಿದ್ದರಾಮಯ್ಯ ಬಗ್ಗೆ ಅಚ್ಚರಿಯ ಮಾತುಗಳನ್ನು ಹೊರ ಹಾಕಿದರು. ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಈಗ ಆ ಪಕ್ಷದ ಹಿರಿಯ ನಾಯಕರು ಬಂಡೆದ್ದಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಂ ನಭಿ ಆಜಾದ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆ ಚೆನ್ನಾಗಿದ್ದಾರೆ. ಈ ಹಿರಿಯ ನಾಯಕರು ಬದಿಗೆ ಸರಿದ ಬಳಿಕ ಕಾಂಗ್ರೆಸ್ ಅನ್ನು ಸದೃಢಗೊಳಿಸಲು ಸಿದ್ದರಾಮಯ್ಯ ಅವರಂತಹ ನಾಯಕರ ಅಗತ್ಯ ಇದೆ ಎಂದು ಹೇಳಿದರು.

ದೇವೇಗೌಡರು ದಿಢೀರನೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಗ್ಗೆ ತೋರಿದ ಕಾಳಜಿ - ಪ್ರೀತಿಗಳಿಂದ ಪತ್ರಕರ್ತರು ಕಕ್ಕಾಬಿಕ್ಕಿಯಾದದ್ದೂ ಉಂಟು. ಸಾವರಿಸಿಕೊಂಡು ಕೇಳಿದಾಗಲೂ ದೇವೇಗೌಡರು ನೀಡಿದ ಅಭಿಪ್ರಾಯ 'ರಾಹುಲ್ ಗಾಂಧಿ ಅವರ ಕೈ ಬಲಪಡಿಸಲು ಸಿದ್ದರಾಮಯ್ಯ ಅವರಂತಹ ನಾಯಕರು‌ ರಾಷ್ಟ್ರ ರಾಜಕಾರಣಕ್ಕೆ ಬರಬೇಕು' ಎಂಬುದೇ ಆಗಿತ್ತು.

ಇದೇ ವೇಳೆ ದೇವೇಗೌಡರು ಮೈಸೂರು ಮೇಯರ್ ಚುನಾವಣೆಯಲ್ಲಿ ‌ನಡೆದ ಘಟನೆ ಬಗ್ಗೆ ಮಾತನಾಡುವಾಗ ಮಾತ್ರ 'ಸಿದ್ದರಾಮಯ್ಯ ಅವರದೇ ಎಲ್ಲಾ ಪ್ರಮಾದ' ಎಂದರು.  ಅದಕ್ಕಾಗಿ 2018ರಿಂದ ಈವರೆಗೆ ಏನೇನಾಯಿತು ಎಂದು ವಿವರಿಸಿದರು. "2018ರಲ್ಲಿ ಮೈಸೂರು ಮೇಯರ್ ಪಟ್ಟ ಗಿಟ್ಟಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನ ಪಟ್ಟಿದ್ದರು. ಜೆಡಿಎಸ್ 25 ಸದಸ್ಯರನ್ನು ಗೆದ್ದಿದ್ದರೂ ಸಿದ್ದರಾಮಯ್ಯ ಅವರ ಭಾವನೆಯನ್ನು ಅರ್ಥ ಮಾಡಿಕೊಂಡು ನಾನೇ ಮೈಸೂರಿನಲ್ಲಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಿ ಎಂದು ಹೇಳಿದ್ದೆ. ಅದಾದ ಮೇಲೆ ನಮಗೆ ಬಿಟ್ಟುಕೊಟ್ಟಿದ್ದರು. ಈ ಬಾರಿ ಕೂಡ ಸಿದ್ದರಾಮಯ್ಯ ಅವರು ಹಠ ಮಾಡಿದರೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಿ ಎಂದು ನಮ್ಮ ಪಕ್ಷದ ಸ್ಥಳೀಯ ನಾಯಕರಿಗೆ ಸೂಚಿಸಿದ್ದೆ.‌ ಕಡೆಯ 2 ವರ್ಷ ನಾವು ಇಟ್ಟುಕೊಳೋಣ, ಚುನಾವಣೆಗೆ ಅಣಿಯಾಗೋಣ ಎಂದು ಕೂಡ ಹೇಳಿದ್ದೆ. ಆದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲಿಲ್ಲ" ಎಂದು ಹೇಳಿ ಮತ್ತೊಮ್ಮೆ ಅಚ್ಚರಿ ಮೂಡಿಸಿದರು.

ಇದನ್ನು ಓದಿ: ಕರಾವಳಿಯಲ್ಲಿ ಹೆಚ್ಚುತ್ತಿದೆ ಅಡಿಕೆಗೆ ಹಳದಿ ರೋಗಬಾಧೆ; ಸುಳ್ಯ ತಾಲೂಕೊಂದರಲ್ಲೇ ಸಾವಿರಾರು ಹೆಕ್ಟೇರ್​ನಲ್ಲಿ ರೋಗ ಲಕ್ಷಣ ಪತ್ತೆ

ಸಿದ್ದರಾಮಯ್ಯ ಅವರು ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದಕ್ಕಾಗಿ ಜೆಡಿಎಸ್ ಸದಸ್ಯರನ್ನು ಆಪರೇಷನ್ ಹಸ್ತ ಮಾಡುವುದಕ್ಕೂ ಪ್ರಯತ್ನಿಸಿದ್ದರು. ಅವರು 18 ಸದಸ್ಯರನ್ನು ಇಟ್ಟುಕೊಂಡು, ಜೊತೆಗೆ ನಮ್ಮವರನ್ನು ಸೆಳೆದು ಮೇಯರ್ ಸ್ಥಾನ ಪಡೆದುಕೊಳ್ಳಲು ಪ್ರಯತ್ನಿಸಿದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಆಪರೇಷನ್ ಮಾಡಲು ಭಾರೀ ಪ್ರಯತ್ನ ಮಾಡಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ ಎಂಬ ಹೊಸ ವಿಷಯಗಳನ್ನು ಹೊರ ಹಾಕಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲೇ ಉಳಿದುಕೊಂಡು ನಮ್ಮ‌ಪಕ್ಷದ ಸದಸ್ಯರು 'ಆಪರೇಷನ್ ಹಸ್ತ‌' ಆಗುವುದನ್ನು ತಡೆದರು.‌ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಕೈ ಕೊಟ್ಟ ಬಳಿಕ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು 'ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟುಕೊಡಬಾರದು ಎಂದು ಜೆಡಿಎಸ್ ಅನ್ನೇ ಬೆಂಬಲಿಸಲು ನಿರ್ಧಾರ ಮಾಡಿದ್ದಾರೆ. ಇವೆಲ್ಲವುಗಳ ಬದಲಿಗೆ ಸಿದ್ದರಾಮಯ್ಯ ಅವರೇ ನನ್ನ ಜೊತೆ ಮಾತನಾಡಬಹುದಿತ್ತು. ಕುಮಾರಸ್ವಾಮಿ ಜೊತೆ ಮಾತನಾಡಬಹುದಿತ್ತು. ಕಡೆಯ ಪಕ್ಷ ನಮ್ಮ ಸ್ಥಳೀಯ ಮುಖಂಡ ಸಾ.ರಾ. ಮಹೇಶ್ ಜೊತೆ ಮಾತನಾಡಬಹುದಿತ್ತು' ಎಂದು ಹೇಳಿದರು.
ಇದಲ್ಲದೆ 'ದೇವೇಗೌಡರು ಜಾತ್ಯತೀತ ವಿಷಯದಲ್ಲಿ ಯಾವತ್ತೂ ಮಾರ್ಪಾಡಾಗಲ್ಲ' ಎಂದು ಪುನರುಚ್ಛರಿಸಿದರು. ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಆಗುವುದಕ್ಕೂ ಕಾಂಗ್ರೆಸ್ ನಾಯಕರೇ ಕಾರಣ. ಇವರು ಮಾತಿನಂತೆ ನಡೆದುಕೊಳ್ಳದ ಕಾರಣ ಶಾಸಕರು ಸಿಡಿದೆದ್ದು ಹೊರಟ್ಟಿಯವರನ್ನು ಬೆಂಬಲಿಸಿದ್ದಾರೆ. ಇದು ವಾಸ್ತವವಾಗಿ ನನಗೆ ಆಗಿರುವ ಹಿನ್ನಡೆ ಕೂಡ ಹೌದು' ಎಂದೂ ಹೇಳಿದರು.
Published by: HR Ramesh
First published: March 1, 2021, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories