Shivamogga Subbanna: ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ

  • Share this:
ಬೆಂಗಳೂರು(ಆ,12):  ಕರ್ನಾಟಕ ಸುಗಮ ಸಂಗೀತದ (Karnataka Sugama Sangeetha) ಪ್ರಸಿದ್ದ ಗಾಯಕರಾಗಿದ್ದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿವಮೊಗ್ಗ ಸುಬ್ಬಣ್ಣ (Shivamogga Subbanna) ಹೃದಯಾಘಾತದಿಂದ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ತೀವ್ರ ಹೃದಯಾಘಾತಕ್ಕೀಡಾಗಿದ್ದ (Heart Attack) ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ. ಮಕ್ಕಳಾದ ಶ್ರೀರಂಗ ಮತ್ತು ಬಾಗೇಶ್ರೀ ಅವರನ್ನು ಅಗಲಿದ್ದಾರೆ.

ಕನ್ನಡ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಾಗಿದ್ದ ಜಿ. ಸುಬ್ರಹ್ಮಣ್ಯ ಅವರ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಪ್ರಖ್ಯಾತಿ ಪಡೆದಿತ್ತು. 1979ರಲ್ಲಿ ‘ಕಾಡು ಕುದುರೆ’ ಚಲನಚಿತ್ರಕ್ಕೆ ಕಾಡು ಕುದುರೆ ಓಡಿ ಬಂದಿತ್ತಾ ಹಾಡನ್ನು ಸುಬ್ಬಣ್ಣ ಹಾಡಿದ್ದರು. ಅವರ ಹಿನ್ನೆಲೆ ಗಾಯನಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು.

ಇದನ್ನೂ ಓದಿ:  Singer Ajay Warriar: ಡ್ರೈನ್ ಹೋಲ್​ಗೆ ಬಿದ್ದು ಕಾಲು ಮುರಿದುಕೊಂಡ ಗಾಯಕ ಅಜಯ್ ವಾರಿಯರ್

ಸುಬ್ಬಣ್ಣನವರ ಅವರ ಮೂಲ ಹೆಸರು ಜಿ. ಸುಬ್ರಮಣ್ಯ. ಶಿವಮೊಗ್ಗ ಜಿಲ್ಲೆಯ ಹೊಸನಗರ ಎಂಬ ಊರಿನಲ್ಲಿ 1938ರ ಡಿಸೆಂಬರ್ 14ರಂದು ಸುಬ್ಬಣ್ಣ ಜನಿಸಿದರು. ತಂದೆ ಗಣೇಶರಾಯರು, ತಾಯಿ ರಂಗನಾಯಕಿ. ತಾತ ಶಾಮಣ್ಣ ಸಂಗೀತದಲ್ಲಿ ಘನ ವಿದ್ವಾಂಸರು. ಆರಂಭದಲ್ಲಿ ತಾತ ನಂತರ ಎಂ. ಪ್ರಭಾಕರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಸುಬ್ಬಣ್ಣ ಕವಿಗೀತೆಗಳನ್ನು ಹಾಡುವುದರಲ್ಲಿ ಆಕರ್ಷಿತರಾದರು. ಅಲ್ಲದೇ ಕುವೆಂಪು, ಬೇಂದ್ರೆ ಹಾಗೂ ನಾಡಿನ ಇನ್ನಿತರ ಶ್ರೇಷ್ಠ ಕವಿಗಳ ಕವಿತೆಗಳನ್ನು ರಾಗ ಸಂಯೋಜಿಸಿ ಹಾಡುವ ಮೂಲಕ ಹೆಸರುವಾಸಿಯಾದರು.

ಬಿ.ಎ, ಬಿ.ಕಾಂ ಮತ್ತು ಎಲ್‌ಎಲ್‌ಬಿ ಪದವೀಧರಾದ ಶಿವಮೊಗ್ಗ ಸುಬ್ಬಣ್ಣ 1982ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ನೆಲೆಸಿದರು. ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಸೇವೆ ಸಲ್ಲಿಸಿದರು. ಬಳಿಕ 1979ರಲ್ಲಿ ‘ಕಾಡುಕುದುರೆ’ ಚಲನಚಿತ್ರದಲ್ಲಿ ಅವರು ಹಾಡಿದ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಜತ ಕಮಲ ರಾಷ್ಟ್ರಪ್ರಶಸ್ತಿ ಲಭಿಸಿತು. ಈ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾಗಿ ಗುರುತಿಸಿಕೊಂಡರು.

ಇದನ್ನೂ ಓದಿ:  ಸಾಗರದ ಸುಬ್ಬಣ್ಣ ಹೆಗಡೆ ತೋಟದಲ್ಲಿದೆ 100ಕ್ಕೂ ಹೆಚ್ಚು ವಿಧದ ಅಪ್ಪೆ ಮಿಡಿ ಮಾವಿನ ಮರಗಳು!

ಶಿವಮೊಗ್ಗ ಸುಬ್ಬಣ್ಣ ಆಕಾಶವಾಣಿ ಮತ್ತು ದೂರದರ್ಶನದ ಹಿರಿಯ ಗಾಯಕರಾಗಿದ್ದರು. ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು. ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕ, ಸಿಂಗಾಪುರ ಮೊದಲಾದ ಕಡೆ ಸುಗಮ ಸಂಗೀತದ ಕಂಪು ಹರಡಿದ್ದಾರೆ. ಎರಡು ಬಾರಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸಿರುವ ಸುಬ್ಬಣ್ಣ ಆಕಾಶವಾಣಿ ನಡೆಸುವ ವಾರ್ಷಿಕ ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲದೇ ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
Published by:Precilla Olivia Dias
First published: