ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ದ ಪಡೆದಿರುವ ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಈ ತಿಂಗಳ ಹುಂಡಿ ಹಣ ಎಣಿಕೆಯಾಗಿದ್ದು, 83 ಲಕ್ಷ ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ತಿಂಗಳಿಗಿಂತ 15 ಲಕ್ಷ ಹಣ ಸಂಗ್ರಹದಲ್ಲಿ ಇಳಿಕೆಯಾಗಿದ್ದು, ದೇವಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಹುಂಡಿ ಹಣಕ್ಕೂ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಪ್ರತಿ ತಿಂಗಳು ಎಣಿಕೆ ಮಾಡುವ ಹುಂಡಿ ಹಣದಲ್ಲಿ ಕೊಂಚ ಕೊಂಚವೇ ಕಡಿಮೆ ಆಗುತ್ತಿದೆ. ಭಕ್ತರ ಸಂಖ್ಯೆ ಹೆಚ್ಚಾಗಿದ್ದರೂ ಹುಂಡಿ ಹಣದ ಸಂಗ್ರಹ ಕಡಿಮೆ ಮಾತ್ರ ಯಾಕೆ ಆಗುತ್ತಿದೆ ಎಂಬ ಪ್ರಶ್ನೆ ಮೂಡಿದೆ.
ಎಂದಿನಂತೆ ಕೆನರಾ ಬ್ಯಾಂಕ್ ಮತ್ತು ವಿವಿಧ ಬ್ಯಾಂಕುಗಳ ಸಿಬ್ಬಂದಿ ಮತ್ತು ಸ್ತ್ರೀಶಕ್ತಿ ಮಹಿಳಾ ಸಂಘದ ಸದಸ್ಯರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿ ಈ ತಿಂಗಳ ಎಣಿಕೆ ಕಾರ್ಯ ಮುಗಿಸಿದ್ದಾರೆ. ಈ ತಿಂಗಳು 83 ಲಕ್ಷದ 12 ಸಾವಿರದ 484 ರೂ. ಸಂಗ್ರಹವಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ 15 ಲಕ್ಷ ರೂ ಹಣ ಕಡಿಮೆ ಸಂಗ್ರಹವಾಗಿದೆ. ಕಳೆದ ತಿಂಗಳ ಸಂಗ್ರಹ 95 ಲಕ್ಷಕ್ಕೂ ಅಧಿಕವಾಗಿತ್ತು. ಈ ಬಾರಿಯೂ ನಿಷೇಧಿತ ನೋಟುಗಳು ಹುಂಡಿ ಹಣದಲ್ಲಿ ಪತ್ತೆಯಾಗಿದ್ದು, 1000 ಮುಖಬೆಲೆಯ 8 ಹಾಗೂ 500 ಮುಖಬೆಲೆಯ 55 ನೋಟುಗಳು ಪತ್ತೆಯಾಗಿವೆ. ಜೊತೆಗೆ 45.78 ಗ್ರಾಂ ಚಿನ್ನ ಹಾಗೂ 1 ಕೆ.ಜಿ.400 ಗ್ರಾಂ ಬೆಳ್ಳಿ ಸಂಗ್ರಹವಾಗಿದ್ದು ಧನುರ್ಮಾಸ ಸಂದರ್ಭದಲ್ಲಿ ಹುಂಡಿ ಹಣ ಸಂಗ್ರಹದಲ್ಲಿ ಇಳಿಕೆಯಾಗಿರೋದು ಚರ್ಚೆಗೆ ಕಾರಣವಾಗಿದೆ.
ನಂಜನಗೂಡು ದೇವಾಲಯದಲ್ಲಿ ಇತ್ತೀಚಿಗೆ ತುಲಭಾರ ಸೇವೆ ಹಣದಲ್ಲಿ ಅವ್ಯವಹಾರ ಆಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ನಂತರ ಭಕ್ತರ ಕಾಣಿಕೆ ಹಣ ಸಹ ಕಡಿಮೆಯಾಗಿರೋದು ಚರ್ಚೆಗೆ ಗ್ರಾಸವಾಗಿದೆ. ನಂಜನಗೂಡು ದೇವಾಲಯದಲ್ಲಿ ಭಕ್ತರ ಸೇವೆಯ ಹಣ ದುರುಪಯೋಗ ಆರೋಪ ಕೇಳಿಬಂದಿದ್ದು, ದೇವಾಲಯದ ಮೂವರು ಸಿಬ್ಬಂದಿ ವಿರುದ್ದ ಹಣ ದುರುಪಯೋಗದ ಆರೋಪ ಕೇಳಿಬಂದಿತ್ತು. ನಿವೃತ್ತ ಸನ್ನಿಧಿ ಕಾವಲುಗಾರ ಶ್ರೀಕಂಠಸ್ವಾಮಿ, ನಗದು ಗುಮಾಸ್ತ ಗಂಗಾಧರ್, ಕೈತಾಳ ಅಭಿಷೇಕ್ ವಿರುದ್ದ ಆರೋಪ ಕೇಳಿಬಂದಿದ್ದು, 2017-18ನೇ ಸಾಲಿನ ಲೆಕ್ಕದಲ್ಲಿ 17,44,350 ರೂ. ಹಣ ಪರಿಶೀಲನೆ ವೇಳೆಯಲ್ಲಿ ದುರುಪಯೋಗ ಆಗಿರೋದು ಸಾಬೀತಾಗಿದೆ. ಭಕ್ತರು ನೀಡುವ ತುಲಾಭಾರ ಸೇವೆಯ ಹಣ ದುರುಪಯೋಗ ಮಾಡಿರುವ ಮೂವರು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕಾರ್ಯನಿರ್ವಾಹಕ ಅಧಿಕಾರಿಗೆ ಮುಜರಾಯಿ ಇಲಾಖೆ ತಿಂಗಳ ಹಿಂದೇಯೆ ಆದೇಶ ನೀಡಿದೆ. ಆದರೆ ಅನುಮತಿ ಪತ್ರ ತಲುಪಿ ಒಂದು ತಿಂಗಳಾದರೂ ದೂರು ದಾಖಲಾಗಿಲ್ಲ. ಅಲ್ಲದೆ, ಮತ್ತೋರ್ವ ಮಹಿಳಾ ಸಿಬ್ಬಂದಿ ಸುಭಾಷಿಣಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದು, ಆರೋಪಗಳಿದ್ದರೂ ಹುದ್ದೆಯಲ್ಲಿ ಮುಂದುವರೆಯುತ್ತಿರುವ ಸಿಬ್ಬಂದಿಗಳ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ನಂಜನಗೂಡಿನ ರೈತ ಮುಖಂಡರು ದೇವಾಲಯದ ಭಕ್ತರ ಹಣ ಸೋರಿಕೆಯಾಗದಂತೆ ತಡೆಯಿರಿ ಎಂದು ಮನವಿ ಮಾಡಿದ್ದರು.
ಇದನ್ನು ಓದಿ: ಮನೆ ಮನೆಗೂ ಶೌಚಾಲಯ ಇದ್ದರೂ ಬಹಿರ್ದೆಸೆಗೆ ಬಯಲೇ ಗತಿ; ಅಧಿಕಾರಿಗಳ ಎಡವಟ್ಟಿಗೆ ಜನರ ಪಡಿಪಾಟಲು
ಇವೆಲ್ಲದರ ನಡುವೆ ತಿಂಗಳಿನಿಂದ ತಿಂಗಳಿಗೆ ಹುಂಡಿ ಹಣದಲ್ಲಿ ಇಳಿಕೆ ಕಾಣುತ್ತಿರುವುದು ಹೊಸ ಹೊಸ ಚರ್ಚೆ ಹುಟ್ಟುಹಾಕಿದೆ. ದೇವಾಲಯದ ಆಡಳಿತ ಮಂಡಳಿಯಲ್ಲಿ ಎಲ್ಲವು ಸರಿಯಿಲ್ಲ ಅನ್ನೋದು ಪದೆಪದೆ ಸಾಬೀತಾಗುತ್ತಿದ್ದು, ಜನರ ಕಾಣಿಕೆ ಹಣ ಹಾಗೂ ದೇವರ ಸೇವೆ ಹಣಗಳು ನುಂಗಣ್ಣರ ಪಾಲಾಗುತ್ತಿರುವ ಆತಂಕ ಎದುರಾಗಿದೆ. ಇನ್ಮುಂದೆಯಾದರೂ ನಂಜನಗೂಡು ದೇವಾಲಯದಲ್ಲಿ ಪಾರದರ್ಶಕ ಆಡಳಿತ ನಡೆಸಿ, ದೇವಾಲಯಕ್ಕೆ ಆದಾಯ ಹೆಚ್ಚು ಬರಲಿ ಅನ್ನೋದೆ ಭಕ್ತರ ಆಶಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ