ದಾವಣಗೆರೆ: ಬೆಂಗಳೂರಿನ ನಿರ್ಮಾಣ ಹಂತದ ಮೆಟ್ರೋ (Namma Metro Pillar) ಕಾಮಗಾರಿಗೆ ಬಲಿಯಾದ ತಾಯಿ-ಮಗುವಿನ (Mother And Son) ಅಂತ್ಯಕ್ರಿಯೆ ದಾವಣಗೆರೆಯಲ್ಲಿ ಬುಧವಾರ ನೆರೆವೇರಿದೆ. ಕುಂದವಾಡ ರಸ್ತೆಯ ಬಸವೇಶ್ವರ ನಗರದ ತೇಜಸ್ವಿನಿ ತಂದೆ ಮನೆಯಲ್ಲಿ ತಾಯಿ-ಮಗುವಿನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತಾಯಿ-ಮಗುವಿನ ಅಂತ್ಯಸಂಸ್ಕಾರವನ್ನು( ಕುಟುಂಬಸ್ಥರು ಪ್ರತ್ಯೇಕವಾಗಿ ಮಾಡಿದ್ದಾರೆ. ದಾವಣಗೆರೆಯ ಹಳೇ ಪಿಬಿ ರಸ್ತೆಯ ವೈಕುಂಠಧಾಮದಲ್ಲಿ ಅಗ್ನಿ ಸ್ಪರ್ಶದೊಂದಿಗೆ ತೇಜಸ್ವಿನಿ ಅಂತ್ಯಸಂಸ್ಕಾರ ನಡೆದರೆ ಮಗುವಿನ ಶವಸಂಸ್ಕಾರ ಬಾಟಲಿ ಬಿಲ್ಡಿಂಗ್ ಹಿಂಭಾಗದ ಸ್ಮಶಾನದಲ್ಲಿ(burying-ground) ನಡೆಯಿತು.
ಮಂಗಳವಾರ 10:30ರ ವೇಳೆಗೆ ಗದಗ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ , ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಬೆಂಗಳೂರಿನ ಹೆಚ್ಬಿಆರ್ ಲೇಔಟ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಬೈಕ್ ಮೇಲೆ ಕುಸಿದು ಬಿದ್ದಿತ್ತು. ಘಟನೆಯಲ್ಲಿ 35 ವರ್ಷದ ತೇಜಶ್ವಿನಿ ಹಾಗೂ ಮಗ ಸಾವನ್ನಪ್ಪಿದರೆ, ಲೋಹಿತ್ ಹಾಗೂ ಮಗಳು ಬದುಕುಳಿದಿದ್ದರು.
ಎಂಟು ಮಂದಿ ವಿರುದ್ಧ ಎಫ್ಐಆರ್
ತಾಯಿ ಮಗು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ. ಎ1 ಆರೋಪಿಯಾಗಿ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯ ಜೆಇ (ಎನ್ಸಿಸಿ) , ಎ2 ಆರೋಪಿಯಾಗಿ ಜೂನಿಯರ್ ಎಂಜಿನಿಯರ್ ಪ್ರಭಾಕರ್ (ಎನ್ಸಿಸಿ), ಎ3 ಎನ್ಸಿಸಿ ನಿರ್ದೇಶಕ ಚೈತನ್ಯ, ಎ4 ಎನ್ಸಿಸಿ ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಮಥಾಯಿ, ಎ5 ಪ್ರಾಜೆಕ್ಟ್ ಮ್ಯಾನೇಜರ್ ವಿಕಾಸ್ ಸಿಂಗ್, ಎ6 ಸೂಪರ್ ವೈಸರ್ ಲಕ್ಷ್ಮೀಪತಿ , ಎ7 ಮೆಟ್ರೋ ಡೆಪ್ಯುಟಿ ಚೀಫ್ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಎ8 ಮೆಟ್ರೋ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್ ಬೆಂಡೇಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:Namma Metro Tragedy: ಇಂದು ತಾಯಿ-ಮಗನ ಅಂತ್ಯಕ್ರಿಯೆ; BMRCL ಇಂಜಿನಿಯರ್ ಅಮಾನತು
ಮೂವರು ಅಧಿಕಾರಿಗಳು ವಜಾ
ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋ ಡೆಪ್ಯುಟಿ ಚೀಫ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಸೆಕ್ಷನ್ ಇಂಜಿನಿಯರ್ಗಳನ್ನ ಬಿಎಂಆರ್ಸಿಎಲ್ ಅಮಾನತು ಮಾಡಲಾಗಿದೆ. ಜೊತೆಗೆ ಘಟನೆಗೆ ಕಾರಣ ಎನು ಎಂಬುದರ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸಲು ಬಿಎಂ ಆಎಂಆರ್ಸಿಎಲ್ ಮನವಿ ಮಾಡಿದ್ದು, ಇದಕ್ಕೆ ಐಐಎಸ್ಸಿ ಒಪ್ಪಿಗೆ ಸೂಚಿಸಿದೆ ಎಂದು ಫರ್ವೇಜ್ ತಿಳಿಸಿದ್ದಾರೆ.
ಇನ್ನೂ ಬೆಂಗಳೂರು ಮೆಟ್ರೋ ನಿಗಮವು ಎನ್ಸಿಸಿ ಕಂಪನಿಗೆ ನೋಟಿಸ್ ನೀಡಿದ್ದು ಮೂರು ದಿನಗಳೊಳಗಾಗಿ ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ
ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಪ್ಪಿತಸ್ಥರ ಕ್ರಮ ತೆಗೆದುಕೊಳ್ಳುತ್ತೇವೆ. ಮಂಗಳವಾರ ರಾತ್ರಿ ಎಫ್ಐಆರ್ನಲ್ಲಿ ಯಾರ ಹೆಸರು ಇರಲಿಲ್ಲ. ಆಗ ಯಾರ ಹೆಸರೂ ಪೊಲೀಸರಿಗೆ ಗೊತ್ತಿರಲಿಲ್ಲ. ಇದೀಗ ಅವರು ಹೆಸರು ಸೂಚಿಸಿ ಎಫ್ಐಆರ್ ದಾಖಲಿಸಲಾಗಿದೆ. ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯ ಪೂಜಾ, ಚೈಥನ್ಯ, ಮೆಥಾಯಿ ವಿಕಾಸ್ ಸಿಂಗ್, ಸೂಪರ್ ವೈಸರ್ ಲಕ್ಷ್ಮೀಪತಿ, ಬಿಎಂಆರ್ಸಿಎಲ್ ಎಂಜಿನಿಯರ್ಗಳಾದ ವೆಂಕಟೇಶ್ ಶೆಟ್ಟಿ, ಮಹೇಶ್ ಬೆಂಡೆಕೇರಿ ಎಂಬುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ
ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಹಿತ್ ನೀಡಿದ ದೂರಿನ ಮೇರೆಗೆ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅವರು ಐವರ ಹೆಸರನ್ನು ನೀಡಿದ್ದಾರೆ. ಮಂಗಳವಾರ ನಡೆದ ಘಟನೆಯಲ್ಲಿ ರಸ್ತೆಯನ್ನ ಕ್ಲಿಯರ್ ಮಾಡುವುದು ಮೊದಲ ಆದ್ಯತೆ ಇತ್ತು. ಅದಕ್ಕಾಗಿ ನಾವು ಪ್ರಕರಣದಲ್ಲಿ ಯಾರ ಹೆಸರೂ ಉಲ್ಲೇಖ ಮಾಡಿರಲಿಲ್ಲ. ಈಗಾಗಲೇ ನಾವು ಅಧಿಕಾರಿಗಳ ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದೇವೆ.
ಕನ್ಸ್ಟ್ರಕ್ಷನ್ ಕಂಪನಿ, ಬಿಎಮ್ಆರ್ಸಿಎಲ್ ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದೇವೆ. ಬಿಎಮ್ಆರ್ಸಿಎಲ್ ಅಧಿಕಾರಿಗಳು ವಿಚಾರಣೆಗೆ ಬಂದಿದ್ದಾರೆ. ಏಳರಿಂದ ಎಂಟು ಜನರನ್ನ ವಿಚಾರಣೆ ಮಾಡುತ್ತೇವೆ. ಈಗಾಗಲೇ ಎಫ್ಎಸ್ಎಲ್ ಅಧಿಕಾರಿಗಳು ಸ್ಯಾಂಪಲ್ ತೆಗದುಕೊಂಡು ಹೋಗಿದ್ದಾರೆ. ತನಿಖೆ ನಡೆಯುತ್ತಿದ್ದು, ಈಗಲೇ ಯಾರದ್ದು ತಪ್ಪು ಎಂದು ಹೇಳುವುದಕ್ಕಾಗಲ್ಲ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ