ಬೆಂಗಳೂರು (ಡಿ. 12): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಗುರುವಾರ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ 2ನೇ ದಿನವಾದ ಇಂದು ಕೂಡ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಬಸ್ಗಳು ಸಂಚಾರ ನಡೆಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ, ಕ್ಯಾಬ್ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇದೇ ಸಮಯವನ್ನು ಬಳಸಿಕೊಂಡು ಆಟೋಗಳು ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿವೆ. ಹೀಗಾಗಿ, ಪ್ರಯಾಣಿಕರ ಅನುಕೂಲಕ್ಕಾಗಿ ಇಂದು ಹೆಚ್ಚುವರಿ ರೈಲುಗಳನ್ನು ಓಡಿಸಲು ನಮ್ಮ ಮೆಟ್ರೋ ನಿಗಮ ನಿರ್ಧಾರ ಮಾಡಿದೆ.
ರಾಜ್ಯ ಸಾರಿಗೆ ನೌಕರರಿಂದ ಮುಷ್ಕರ ನಡೆಯುತ್ತಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ನಿರ್ಧಾರ ಮಾಡಿದೆ. ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳು ಇಂದು ಸಂಚರಿಸಲಿವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರು ಮೆಟ್ರೋದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ನಿನ್ನೆ ಮೆಟ್ರೋದಲ್ಲಿ ಜನದಟ್ಟಣೆ ಉಂಟಾಗಿತ್ತು. ಇಂದು ಕೂಡ ಮುಷ್ಕರ ಮುಂದುವರೆದಿರುವುದರಿಂದ ನಮ್ಮ ಮೆಟ್ರೋ ನಿಗಮದ ಬಳಿ ಇರುವ 50 ರೈಲುಗಳನ್ನು ಓಡಿಸಲು ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: New Year 2021: ಬೆಂಗಳೂರಿಗರೇ ಎಚ್ಚರ!; ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡಿದರೆ ಜೈಲೂಟ ಖಚಿತ
ಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ಗಳನ್ನು ಬಳಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋದಲ್ಲಿ ಇಂದು ಮುಂಜಾನೆಯಿಂದಲೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಕ್ಯೂನಲ್ಲಿ ನಿಂತು ಪ್ರಯಾಣಿಕರು ಮೆಟ್ರೋದಲ್ಲಿ ತೆರಳುತ್ತಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಎರಡನೇ ದಿನವೂ KSRTC ಹಾಗೂ BMTC ನೌಕರರ ಧರಣಿ ಮುಂದುವರೆದಿದೆ. ತಮ್ಮ ಬೇಡಿಕೆ ಈಡೇರದ ಕಾರಣ ಇಂದು ಸಹ ಬಸ್ ಗಳನ್ನು ಡಿಪೋಗಳಿಂದ ತೆಗೆಯದೇ ಇರಲು ನಿರ್ಧಾರ ಮಾಡಲಾಗಿದೆ. ಹೀಗಾಗಿ, ಯಶವಂತಪುರ ಡಿಪೋದಲ್ಲಿ ಸಾಲಾಗಿ ನಿಂತಿರೋ ಬಸ್ಗಳು ಇಂದು ರಸ್ತೆಗಿಳಿದಿಲ್ಲ. ಬೆಂಗಳೂರಿನ ಬಹುತೇಕ ಎಲ್ಲ ಡಿಪೋಗಳಲ್ಲೂ ಬಸ್ಗಳು ನಿಂತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ