ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ: ನಳಿನ್​​ ಕುಮಾರ್​​ ಕಟೀಲ್​​ ಔಪಚಾರಿಕ ಆಯ್ಕೆ

ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್​​ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಚುನಾವಣಾ ವೀಕ್ಷಕರಾಗಿದ್ದ ಸಚಿವ ಸಿ.ಟಿ ರವಿ ಖುದ್ದು ನಳಿನ್ ಕುಮಾರ್ ಕಟೀಲ್​​ಗೆ ಪಕ್ಷದ ಧ್ವಜ ಹಸ್ತಾಂತರ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ.

news18-kannada
Updated:January 16, 2020, 12:14 PM IST
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ: ನಳಿನ್​​ ಕುಮಾರ್​​ ಕಟೀಲ್​​ ಔಪಚಾರಿಕ ಆಯ್ಕೆ
ಬಿ.ಎಸ್​. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖ ನಾಯಕರು.
  • Share this:
ಬೆಂಗಳೂರು(ಜ.16): ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಾಗಿ ನಡೆದ ಔಪಚಾರಿಕ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್​​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಗರದ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಔಪಚಾರಿಕ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್​​ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಚುನಾವಣಾ ವೀಕ್ಷಕರಾಗಿದ್ದ ಸಚಿವ ಸಿ.ಟಿ ರವಿ ಖುದ್ದು ನಳಿನ್ ಕುಮಾರ್ ಕಟೀಲ್​​ಗೆ ಪಕ್ಷದ ಧ್ವಜ ಹಸ್ತಾಂತರ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಸಿ.ಟಿ ರವಿ, ನಾನು ಚುನಾವಣೆ ವೀಕ್ಷಕನಾಗಿದ್ದೆ. ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ ಚುನಾವಣಾಧಿಕಾರಿ ಆಗಿದ್ದರು. ಈಗಾಗಲೇ ರಾಜ್ಯ ಬಿಜೆಪಿಯ 20 ಮಂದಿ ಜಿಲ್ಲಾಧ್ಯಕ್ಷರ ನೇಮಕವಾಗಿದೆ. ರಾಜ್ಯಾಧ್ಯಕ್ಷ ಹುದ್ದೆಗೂ ಚುನಾವಣೆ ನಡೆಸಬಹುದು ಎಂದು ರಾಷ್ಟ್ರೀಯ ಚುನಾವಣಾಧಿಕಾರಿಗಳು ಹೇಳಿದರು. ಅದರಂತೆಯೇ ನಾವು ರಾಜ್ಯಾಧ್ಯಕ್ಷ ಹುದ್ದೆ ಚುನಾವಣೆ ನಡೆಸಿದ್ದೇವೆ. ಬಿಜೆಪಿ ಸಕ್ರಿಯ ಸದಸ್ಯರು ರಾಜ್ಯಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಬಹುದಿತ್ತು. ಆದರೆ, ಈ ಹುದ್ದೆಗೆ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತು. ಸದ್ಯ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರ ಪರಿಶೀಲಿಸಿದ್ದೇವೆ. ಅದರಂತೆಯೇ ಈಗ ನಳಿನ್​​ ಕುಮಾರ್​​ ಕಟೀಲ್​​​ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಆಗಸ್ಟ್​​​ 27ನೇ ತಾರೀಕಿನಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಅವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಪಕ್ಷದ ಧ್ವಜ ಹಸ್ತಾಂತರ ಮಾಡಿ ಅಧಿಕೃತ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಷೇರುಪೇಟೆ ಝಗಮಗ; ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ

ಅಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ವೇಳೆ ಮಾತಾಡಿದ್ದ ನಳಿನ್ ಕುಮಾರ್ ಕಟೀಲ್​​, ಸಾಮಾನ್ಯ ಕಾರ್ಯಕರ್ತನೊಬ್ಬ ಪ್ರಧಾನಿಯಾಗುವುದು, ಮುಖ್ಯಮಂತ್ರಿಯಾಗುವುದು, ರಾಜ್ಯಾಧ್ಯಕ್ಷನಾಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ನಾನು ರಾಜ್ಯವನ್ನು ಪ್ರತಿನಿಧಿಸಲಿದ್ದೇನೆ. ನಾನು ವಿದ್ವಾಂಸನಲ್ಲ, ಪಂಡಿತನೂ ಅಲ್ಲ. ನಾನು ಸಂಘದ ಸಾಮಾನ್ಯ ಕಾರ್ಯಕರ್ತ. ಸಂಘದ ಕಾರ್ಯಕರ್ತರು ‌ನನ್ನ ಬೆಳೆಸಿದ್ದಾರೆ. ಕಾರ್ಯಕರ್ತರ ಅಪೇಕ್ಷೆಗೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ. ಸಿಎಂ ಮತ್ತು ತಂಡದ ಮಾರ್ಗದರ್ಶನದಂತೆ ನಡೆಯುತ್ತೇನೆ. ಈ ಜವಾಬ್ದಾರಿಯನ್ನು ನಿರ್ವಹಿಸಲು ಭಯವೂ ಇದೆ, ಆತ್ಮವಿಶ್ವಾಸವೂ ಇದೆ. ಯಡಿಯೂರಪ್ಪನವರಂಥ ನಾಯಕರ ಆಶೀರ್ವಾದ ನನ್ನ ಮೇಲಿದೆ. ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ರಂಥವರ ಪರಿಶ್ರಮದಿಂದ ಪಕ್ಷ ಬೆಳೆದುಬಂದಿದೆ. ಆ ಪಕ್ಷವನ್ನು ನಾವು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದು ಹೇಳಿದ್ದರು.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ