ಮಂಗಳೂರು (ಏ. 12): ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕುಟುಂಬದ ಮನೆ ಇರುವ ಆ ಗ್ರಾಮ ಸಂಭ್ರಮ ಸಡಗರಕ್ಕೆ ಸಾಕ್ಷಿಯಾಯಿತು. ಆರುವತ್ತು ವರ್ಷದ ಬಳಿಕ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ ನಡೆಸುವ ಮೂಲಕ ದೈವಗಳ ಕೃಪೆಗೆ ಮನೆತನ ಪಾತ್ರವಾಯಿತು. ನಳಿನ್ ಕುಮಾರ್ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ ಅರುವತ್ತು ವರ್ಷದ ಬಳಿಕ ನಡೆಯಿತು. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ ನೇಮೋತ್ಸವದ ಸಂಭ್ರಮ, ಸಡಗರ ಜೋರಾಗಿತ್ತು. ಇಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಹಿಂದಿನ ತಲೆಮಾರು 60 ವರ್ಷಗಳ ಹಿಂದೆ ಇಂತಹ ಧರ್ಮನೇಮ ನಡೆಸಿತ್ತು. ಆದರೆ ಆ ಬಳಿಕ ನೇಮೋತ್ಸವ ನಡೆದಿರಲಿಲ್ಲ. ಕುಟುಂಬದ ಪ್ರಶ್ನಾ ಚಿಂತನೆಯಲ್ಲಿ ಮತ್ತೆ ಈ ಮಣ್ಣಲ್ಲಿ ಧರ್ಮನೇಮೋತ್ಸವ ನಡೆಸಲು ದೈವಗಳು ಸೂಚನೆ ನೀಡಿದ್ದವು. ಅದರಂತೆ ಉಪಚುನಾವಣೆಯ ಬ್ಯುಸಿಯ ಮಧ್ಯೆಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಕುಂಜಾಡಿ ಮನೆತನದಲ್ಲಿ ಧರ್ಮನೇಮೋತ್ಸವವನ್ನು ಕುಟುಂಬದ ಸಹಕಾರದಿಂದ ನಡೆಸಿದರು.
ಎರಡು ದಿನಗಳ ಕಾಲ ನಡೆದ ಈ ಧರ್ಮನೇಮೋತ್ಸವದಲ್ಲಿ ರಕ್ತೇಶ್ವರಿ, ಉಲ್ಲಾಕುಳು, ಗ್ರಾಮದೈವ, ಪಿಲಿಚಾಮುಂಡಿ ಸೇರಿ ಪರಿವಾರ ದೈವಗಳಿಗೆ ಅದ್ದೂರಿಯಾಗಿ ನೇಮೋತ್ಸವ ನಡೆಯಿತು. ಇಂದು ಮುಂಜಾನೆವರೆಗೂ ನೇಮೋತ್ಸವ ನಡೆದಿದ್ದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠ ದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ,ಒಡಿಯೂರು ಗುರುದೇವದತ್ತಾನಂದ ಸ್ವಾಮೀಜಿ,ಶ್ರೀರಾಮಚಂದ್ರಾಪುರ ಮಠದ ವಿಶ್ವೇಶ ತೀರ್ಥ ಭಾರತಿ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ,ಸೇರಿದಂತೆ ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಗೋಪಾಲ್ ಜೀ,ಸಚಿವರುಗಳಾದ ಸೋಮಶೇಖರ್, ಸಿ.ಪಿ ಯೋಗೇಶ್ವರ್ ಸೇರಿದಂತೆ ಸಚಿವರುಗಳು, ಸಂಸದರಾದ ಮುನಿಸ್ವಾಮಿ, ಪ್ರತಾಪ್ ಸಿಂಹ ಸೇರಿದಂತೆಗಣ್ಯರ ದಂಡೇ ಹರಿದು ಬಂದಿತ್ತು. ದೈವಗಳು ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕುಂಜಾಡಿ ಮನೆತನದ ಕುಟುಂಬಸ್ಥರಿಗೆ, ಭಕ್ತರಿಗೆ ಅಭಯವನ್ನು ನೀಡಿತು. ವಿಶೇಷವಾಗಿ ನಳಿನ್ ಕುಮಾರ್ ಕಟೀಲ್ ಅವರ ರಾಜಕೀಯ ಜೀವನ ಇನ್ನಷ್ಟು ಎತ್ತರದ ಸ್ಥಾನಕ್ಕೆ ತಲುಪಲಿ ಎಂದು ಆಶೀರ್ವಾದಿಸಿತು.
ಈ ನೇಮೋತ್ಸವದಲ್ಲಿ ಊರ ಪರವೂರಿನ ಭಕ್ತರು ಭಾಗಿಯಾದ್ರು. ಆರುವತ್ತು ವರ್ಷದ ಬಳಿಕ ನಡೆದ ಉತ್ಸವವನ್ನು ಎಲ್ಲರೂ ಕಣ್ತುಂಬಿಕೊಂಡ್ರು. ಒಟ್ಟಿನಲ್ಲಿ ಇದು ಒಂದು ಕುಟುಂಬದ ಕಾರ್ಯಕ್ರಮವಾಗಿರದೆ, ಊರಿನ ಕಾರ್ಯಕ್ರಮ ಎಂಬಂತೆ ಅಲ್ಲಿ ನೆರೆದಿದ್ದವರನ್ನು ನೋಡಿದ್ರೆ ಭಾಸವಾಗುವಂತಿತ್ತು.ನಳಿನ್ ಕುಮಾರ್ ಕಟೀಲ್ ರವರ ಮುಂದಿನ ರಾಜಕೀಯ ಜೀವನದಲ್ಲೂ ದೈವಗಳ ಕೃಪೆಯಿಂದ ಉತ್ತುಂಗದತ್ತ ಹೋಗಲು ಈ ಧರ್ಮನೇಮ ಸಹಕಾರಿ ಅಂತಾ ದೈವ ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಆತಂಕದ ನಡುವೆಯೇ ನಳಿನ್ ಕುಮಾರ್ ಎನಿಸಿದಂತೆ ದೈವ ಇಚ್ಛೆಯಂತೆ ಧರ್ಮ ನೇಮೋತ್ಸವ ಅದ್ಧೂರಿಯಾಗಿ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ