ನಳಿನ್ ಕುಮಾರ್ ಸಂಧಾನ ವಿಫಲ; ಗಾಂಧೀಜಿ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸಲು ಅನಂತಕುಮಾರ್ ಹೆಗಡೆ ನಕಾರ

ಗಾಂಧೀಜಿ ಕುರಿತಾದ ತಮ್ಮ ವಿವಾದಿತ ಹೇಳಿಕೆಯ ಕುರಿತಾಗಿ ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಲು ಸಾಧ್ಯವೇ ಇಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದಿದ್ದಾರೆ.

ನಳಿನ್ ಕುಮಾರ್ ಕಟೀಲು- ಅನಂತಕುಮಾರ್ ಹೆಗಡೆ

ನಳಿನ್ ಕುಮಾರ್ ಕಟೀಲು- ಅನಂತಕುಮಾರ್ ಹೆಗಡೆ

  • Share this:
ನವದೆಹಲಿ (ಫೆ. 4): ಮಹಾತ್ಮ ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ್ ಹೆಗಡೆ ವಿವಾದ ಸೃಷ್ಟಿಸಿದ್ದರು. ಇಂದು ಬೆಳಗ್ಗೆ ಅವರನ್ನು ಭೇಟಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿವಾದಿತ ಹೇಳಿಕೆಯ ಕುರಿತು ಕ್ಷಮೆ ಕೇಳಲು ಸೂಚಿಸಿದ್ದರು. ಆದರೆ, ನಳಿನ್ ಕುಮಾರ್ ಪ್ರಯತ್ನ ವಿಫಲವಾಗಿದ್ದು, ಯಾವುದೇ ಕಾರಣಕ್ಕೆ ಕ್ಷಮೆ ಯಾಚಿಸುವುದಿಲ್ಲ ಎಂದು ಅನಂತಕುಮಾರ್ ಹೆಗಡೆ ಸ್ಪಷ್ಟಡಿಸಿದ್ದಾರೆ.

ದೆಹಲಿಯಲ್ಲಿ ಅನಂತಕುಮಾರ್ ಹೆಗಡೆ ಭೇಟಿಗೂ ಮೊದಲು ಮಾತನಾಡಿದ್ದ ನಳಿನ್ ಕುಮಾರ್ ಕಟೀಲು, ಈಗಾಗಲೇ ಕಾರಣ ಕೇಳಿ ಅನಂತಕುಮಾರ್​ ಹೆಗಡೆಗೆ​ ನೋಟಿಸ್​ ನೀಡಿದ್ದೇವೆ. ಈ ವಿಷಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ತಿಳಿಸಿದ್ದೇವೆ. ಪಕ್ಷದ ನಿಯಮಗಳ ಪ್ರಕಾರ ಅವರೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದರು. ಭೇಟಿಯ ನಂತರವೂ ಹೇಳಿಕೆ ನೀಡಿದ್ದ ನಳಿನ್ ಕುಮಾರ್ ಕಟೀಲು, ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ‌ ವಿಷಯ ಚರ್ಚಿಸಿದ್ದೇನೆ. ಈಗಾಗಲೇ ಅನಂತಕುಮಾರ್ ಹೆಗಡೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ವಿವರಣೆ ಕಳುಹಿಸಿ ಕೊಟ್ಟಿದ್ದಾರೆ ಎಂದಿದ್ದರು.

ಇದನ್ನೂ ಓದಿ: ಅನಂತ​ಕುಮಾರ್ ಹೆಗಡೆಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ; ಸಿದ್ದರಾಮಯ್ಯ ಆಕ್ರೋಶ

ಆದರೆ, ತಮ್ಮ ವಿವಾದಿತ ಹೇಳಿಕೆಯ ಕುರಿತಾಗಿ ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಲು ಸಾಧ್ಯವೇ ಇಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನಂತ ಕುಮಾರ್ ಹೆಗಡೆ ಮನವೊಲಿಸಲು ಪ್ರಯತ್ನಿಸಿದ್ದ ನಳಿನ್ ಕುಮಾರ್ ಕಟೀಲು ವಿಫಲರಾಗಿದ್ದಾರೆ. ಗಾಂಧೀಜಿ ಕುರಿತಾದ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದೆ, ದೆಹಲಿ ಚುನಾವಣೆ ವೇಳೆ ಈ ಬಗ್ಗೆಯೇ ಚರ್ಚೆಯಾಗುತ್ತಿದೆ. ನೀವು ಕ್ಷಮಾಪಣೆ ಕೇಳಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ದೆಹಲಿಯ ಅನಂತಕುಮಾರ್ ಹೆಗಡೆ ನಿವಾಸಕ್ಕೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದ್ದರು.

ಆದರೆ, ಕ್ಷಮೆ ಯಾಚನೆಗೆ ಒಪ್ಪದ ಅನಂತ ಕುಮಾರ್ ಹೆಗಡೆ, ಹೈಕಮಾಂಡ್ ನೀಡಿರುವ ನೋಟಿಸಿಗೆ ಉತ್ತರ ನೀಡಿದ್ದೇನೆ.ಮುಂದಿನದನ್ನು ಹೈಕಮಾಂಡ್ ನಿರ್ಧರಿಸಲಿ. ನಾನು ನನ್ನ ಹೇಳಿಕೆಗೆ ಬದ್ದವಾಗಿರುತ್ತೇನೆ ಎಂದು ಖಡಕ್ ಆಗಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಗಾಂಧೀಜಿ ವಿರುದ್ಧ ಹೆಗಡೆ ನಿಂದನೆ; ದೆಹಲಿಯಲ್ಲಿ ಅನಂತಕುಮಾರ್ ಭೇಟಿ ಮಾಡಿದ ಕಟೀಲ್

ಬೆಂಗಳೂರಿನಲ್ಲಿ ಖಾಸಗಿ ಸಮಾರಂಭವೊಂದರ ವೇದಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಮಹಾತ್ಮ ಗಾಂಧೀಜಿ ಮತ್ತು ಪ್ರಗತಿಪರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಅನಂತಕುಮಾರ್ ಹೆಗಡೆ ರಾಜ್ಯದ ಕಾಂಗ್ರೆಸ್ ನಾಯಕರ ಮತ್ತು ಎಡಪಂಥೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಗಾಂಧೀಜಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು ಬಿಜೆಪಿ ನಾಯಕರನ್ನೂ ಮುಜುಗರಕ್ಕೀಡುಮಾಡಿತ್ತು. ಹೀಗಾಗಿ, ಬಿಜೆಪಿಯ ಯಾವ ನಾಯಕರೂ ಅನಂತಕುಮಾರ್ ಹೆಗಡೆ ಹೇಳಿಕೆಗೆ ಬೆಂಬಲ ಸೂಚಿಸಿರಲಿಲ್ಲ. ಈ ಹೇಳಿಕೆಗೆ ಅಸಮಾಧಾನಗೊಂಡಿದ್ದ ಬಿಜೆಪಿ ಹೈಕಮಾಂಡ್​ ಹೆಗಡೆಗೆ ಶೋಕಾಸ್​ ನೋಟಿಸ್ ಜಾರಿ ಮಾಡಿತ್ತು.
First published: