ಬೆಳಗಾವಿ(ಫೆ. 26): ಕಾಂಗ್ರೆಸ್ನ ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷ ರಾಜೀನಾಮೆ ನೀಡಿ 6 ತಿಂಗಳಾಯಿತು. ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ನೇಮಕ ಮಾಡುವ ತಾಕತ್ತು ಕಾಂಗ್ರೆಸ್ಗಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗದ ಕಾಂಗ್ರೆಸ್ನ ಮನೆಗೆ ಈಗ ಬೆಂಕಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಹೇಳಿದರಂತೆ ನನಗೆ ರಾಜಕೀಯ ಜ್ಞಾನ ಇಲ್ಲ ಅಂತಾ. ಸತ್ಯ ನಾನು ಒಪ್ಪಿಕೊಳ್ಳುತ್ತೇನೆ. ನಾನು ರಾಜಕೀಯ ಈಗ ಅಭ್ಯಾಸ ಮಾಡುತ್ತಿದ್ದೇನೆ. ರಾಜಕೀಯ ಅನುಭವಿ, ಜ್ಞಾನಿ, ರಾಜಕೀಯ ಪಂಡಿತ ಸಿದ್ದರಾಮಯ್ಯಗೆ ಡಿಕೆಶಿಯನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಿಕ್ಕೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿಯನ್ನು ಮಾಡಲಿ ಅಂತಾ ಸಿದ್ದರಾಮಯ್ಯ ಹೇಳಲಿ. ಡಿಕೆಶಿ ರಾಜ್ಯಾಧ್ಯಕ್ಷ ಆದರೆ ಸಿದ್ದರಾಮಯ್ಯ ಹೊರ ಬರ್ತಾರೆ. ಸಿದ್ದರಾಮಯ್ಯರನ್ನ ಮಾಡಿದರೆ ಪರಮೇಶ್ವರ ಹೊರಗೆ ಹೋಗ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಹೆಚ್ಚಾಗುತ್ತದೆ. ಆ ಪಕ್ಷ ಒಡೆದ ಮನೆಯಾಗುತ್ತದೆ ಎಂದು ಕಟೀಲ್ ವಿಶ್ಲೇಷಿಸಿದರು.
ಅಧಿಕಾರ ಇಲ್ಲದಿದ್ದಾಗ ಈ ದೇಶದಲ್ಲಿ ಕಾಂಗ್ರೆಸ್ ಗಲಭೆ ಸೃಷ್ಟಿಸೋದನ್ನ ಕಂಡಿದ್ದೇವೆ. ದೆಹಲಿಯಲ್ಲಿ ನಿನ್ನೆ ಕಾಂಗ್ರೆಸ್ ಗಲಭೆಯನ್ನು ಸೃಷ್ಟಿ ಮಾಡಿದೆ. ಕಳೆದ ಮೂರು ತಿಂಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆದಿತ್ತು. ಆದರೆ ನಿನ್ನೆ ಮೊನ್ನೆ ದೆಹಲಿಯಲ್ಲಿ ಏಕೆ ಗಲಭೆ ಪ್ರಾರಂಭವಾಯಿತು? ಪ್ರತಿಭಟನಾಕಾರರ ಕೈಯಲ್ಲಿ ಪಿಸ್ತೂಲ್ ಎಲ್ಲಿಂದ ಬಂತು? ದೆಹಲಿ ಗಲಭೆಯ ಮಾಸ್ಟರ್ ಮೈಂಡ್ ಕಾಂಗ್ರೆಸ್. ಅರಾಜಕತೆ, ಅಶಾಂತಿ ನಿರ್ಮಾಣ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಕಳಂಕ ತರಲು ನಡೆದಿರುವ ಷಡ್ಯಂತ್ರ ಇದು ಎಂದು ಕಾಂಗ್ರೆಸ್ ವಿರುದ್ದ ಕಟೀಲ್ ಆರೋಪ ಮಾಡಿದರು.
ಬಜೆಟ್ನಲ್ಲಿ ರೈತರ ಸಾಲಮನ್ನಾ ಬಗ್ಗೆ ಸುಳಿವು ಕೊಟ್ಟ ಕಟೀಲ್ :
ಕುಮಾರಸ್ವಾಮಿ ಕಣ್ಣೀರು ಹಾಕುವ ಸಿಎಂ; ಸಿದ್ದರಾಮಯ್ಯ ಕಣ್ಣೀರು ಹಾಕಿಸುವ ಸಿಎಂ. ಯಡಿಯೂರಪ್ಪ ಕಣ್ಣೀರು ಒರೆಸುವ ಸಿಎಂ. ಯಡಿಯೂರಪ್ಪ ಎರಡನೇ ಬಾರಿ ಸಿಎಂ ಆಗಿದ್ದಾಗ ನೇಕಾರರ ಸಾಲಮನ್ನಾ ಮಾಡಿ ಅವರ ಕಣ್ಣೀರೊರೆಸಿದರು. ಇವತ್ತು ರೈತರ ಸಾಲಮನ್ನಾ ಮಾಡಿ ವಿಶೇಷವಾದ ಬಜೆಟ್ ಘೋಷಣೆ ಮಾಡುತ್ತಾರೆ. ಹಾಗಾಗಿ ಯಡಿಯೂರಪ್ಪನವರು ಜನರ ಕಣ್ಣೀರೊರೆಸುವ ಸಿಎಂ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಬಣ್ಣಿಸಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಜನರ ಕಣ್ಣೀರು ಹಾಕಿಸಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಅವರ ಕಣ್ಣಲ್ಲಿ ನೀರು ಬಂದಿರಲಿಲ್ಲ. ಅವರಿಗೆ ಅಧಿಕಾರ ಸಿಕ್ಕಾಗ ಮನೆ ಮನೆಗೆ ಹೋಗಿ ಕಣ್ಣೀರು ಹಾಕಿದ್ದರು ಎಂದೂ ನಳೀನ್ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :
ಕನಸಲ್ಲಿ ಬಂದ ಮಾತೆ - ದಿಢೀರಾಗಿ ಬಂದು ಮಾಣಿಕೇಶ್ವರಿ ದರ್ಶನ ಪಡೆದ ಶ್ರೀರಾಮುಲು
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿ ಯಾರಿಗೂ ರಕ್ಷಣೆ ಇರಲಿಲ್ಲ. ರಕ್ಷಣೆ ಇದ್ದದ್ದು ಸ್ಯಾಂಡ್ ಮಾಫಿಯಾ ಕಳ್ಳರು, ಭೂಗಳ್ಳರಿಗೆ ಮಾತ್ರವೇ. ಹೀಗಾಗಿ ರಾಜ್ಯದ ಜನರಲ್ಲಿ ಕಣ್ಣೀರು ತರಿಸಿದವರು ಸಿದ್ದರಾಮಯ್ಯ ಎಂದು ಗುಡುಗಿದ ಅವರು, ಯಡಿಯೂರಪ್ಪ ಮುಂದಿನ ಮೂರೂವರೆ ವರ್ಷ ಸಿಎಂ ಆಗಿಯೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ