ಬೆಂಗಳೂರು(ಫೆ. 12): ಮೇಖ್ರಿ ಸರ್ಕಲ್ ಬಳಿ ನಡೆದಿದ್ದ ಕಾರು ಅಪಘಾತ ಪ್ರಕರಣದಲ್ಲಿ ಸಿನಿಮೀಯವೆನಿಸುವಂಥ ಘಟನೆಗಳು ನಡೆಯುತ್ತಿವೆ. ಅಪಘಾತ ಮಾಡಿದ ಕಾರನ್ನು ನಲಪಾಡ್ ಚಲಾಯಿಸುತ್ತಿದ್ದುದು ಬೆಳಕಿಗೆ ಬಂದ ಬೆನ್ನಲ್ಲೇ ಅವರ ಬಂಧನವಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಇದೀಗ ಅಚ್ಚರಿಯ ಘಟನೆಯೊಂದರಲ್ಲಿ ಅಪಘಾತದ ಗಾಯಾಳು ತನಗೆ ಏನೂ ಆಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅಪಘಾತದ ದಿನ ನಲಪಾಡ್ ಅವರ ಬೆಂಟ್ಲಿ ಕಾರು ಗುದ್ದಿ ಕಾಲಿನ ಮೂಳೆ ಮುರಿದುಕೊಂಡಿದ್ದ ಬೈಕ್ ಸವಾರ ಪ್ರಫುಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ದರು. ಇದೀಗ ನಲಪಾಡ್ ಬೆಂಬಲಿರ ಜೊತೆಯೇ ಸದಾಶಿವನಗರ ಪೊಲೀಸ್ ಠಾಣೆಗೆ ಬಂದು ತನಗೆ ಏನೂ ಆಗಿಲ್ಲ ಎಂದು ಸ್ಟೇಟ್ಮೆಂಟ್ ಕೊಟ್ಟು ಹೋಗಿದ್ಧಾರೆ.
ಸದಾಶಿವನಗರ ಪೊಲೀಸ್ ಠಾಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಪ್ರಫುಲ್ಲಾ ಹೊರಟರು. ಅವರ ಜೊತೆ ಬೆಂಗಾವಾಲಾಗಿ ನಲಪಾಡ್ ಆಪ್ತರು ಸುತ್ತುವರೆದಿದ್ದರು. ಪ್ರಫುಲ್ಲಾ ದೂರು ಕೊಡದಂತೆ ಜಾಗ್ರತೆ ಕೂಡ ವಹಿಸಿದ್ದರು. ಪ್ರಫುಲ್ಲಾನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ನಲಪಾಡ್ ಆಪ್ತರೇ ಹಿಡಿದುಕೊಂಡಿದ್ದರು.
ಇದನ್ನೂ ಓದಿ: ನಲಪಾಡ್ ಬಂಧನದ ಬೆನ್ನಲ್ಲೇ ವಿಶೇಷ ಜಾಮೀನು; ನಾನು ಬದಲಾದರೂ ಗೂಂಡಾ ಎನ್ನುತ್ತಾರೆಂದು ಗದ್ಗದಿತಗೊಂಡ ಹ್ಯಾರಿಸ್ ಮಗ
ಕಾಲು ಮೂಳೆ ಮುರಿದರೂ ಪ್ರಫುಲ್ಲಾ ಏನೂ ಆಗಿಲ್ಲ ಎಂದು ಸ್ಟೇಟ್ಮೆಂಟ್ ಕೊಟ್ಟಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಪ್ರಫುಲ್ಲಾನ ಎಲ್ಲಾ ವೈದ್ಯಕೀಯ ಖರ್ಚು ವೆಚ್ಚಗಳನ್ನ ನೋಡಿಕೊಳ್ಳುವುದಾಗಿ ನಲಪಾಡ್ ಆಪ್ತ ಹುಸೇನ್ ಎಂಬುವರು ನಿನ್ನೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಲಪಾಡ್ ಬೆಂಬಲಿಗರ ಒತ್ತಡಕ್ಕೆ ಮತ್ತು ಭರವಸೆಗೆ ಮಣಿದು ಪ್ರಫುಲ್ಲಾ ತನಗೇನೂ ಆಗಿಲ್ಲ ಎಂದು ಸ್ಟೇಟ್ಮೆಂಟ್ ಕೊಟ್ಟಿರುವ ಅನುಮಾನವಿದೆ.
ಇದೇ ವೇಳೆ, ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಇಂದು ಮಧ್ಯಾಹ್ನ ಠಾಣೆಗೆ ಆಗಮಿಸಿದರು. ಈ ವೇಳೆ, ನಲಪಾಡ್ನ ಹಿರಿಯ ವಕೀಲ ಉಸ್ಮಾನ್ ಕೂಡ ಠಾಣೆಯಲ್ಲೇ ಇದ್ದರು. ಕಾಂಗ್ರೆಸ್ ಮುಖಂಡ ಜಿ.ಎ. ಬಾವ ಕೂಡ ಜೊತೆಯಲ್ಲಿದ್ದರು. ಈ ವೇಳೆ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರನ್ನು ಬಂಧಿಸಿದ ಪೊಲೀಸರು ನಂತರ ಬಾಂಡ್ ಬರೆಸಿಕೊಂಡು ವಿಶೇಷ ಜಾಮೀನು ನೀಡಿ ಬಿಡುಗಡೆ ಮಾಡಿದರು. ತಾನು ಕಾರು ಚಲಾಯಿಸುತ್ತಿರಲಿಲ್ಲ. ಡ್ರೈವರ್ ಬಾಲು ಕಾರು ಓಡಿಸುತ್ತಿದ್ದ ಎಂದು ನಲಪಾಡ್ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು. ಹಾಗೆಯೇ, ತನ್ನನ್ನು ಸಿಕ್ಕಿಹಾಕಿಸಬೇಕೆಂದು ಕೆಲ ವ್ಯಕ್ತಿಗಳು ಸಂಚು ರೂಪಿಸಿದ್ದಾರೆಂದೂ ಅವರು ಶಂಕಿಸಿದರು.
ಇದನ್ನೂ ಓದಿ: ವಿದ್ವತ್ ಹಲ್ಲೆ ಪ್ರಕರಣ: ಮೊಹಮ್ಮದ್ ನಲಪಾಡ್ಗೆ ತಾತ್ಕಾಲಿಕ ರಿಲೀಫ್
ಗನ್ಮ್ಯಾನ್ಗೆ ಜಾಮೀನು:
ಬೆಂಟ್ಲಿ ಕಾರು ಅಪಘಾತ ಪ್ರಕರಣದಲ್ಲಿ ಕಾರನ್ನು ನಾನೇ ಚಲಾಯಿಸುತ್ತಿದ್ದು ಎಂದು ಹೇಳಿಕೊಂಡು ಪೊಲೀಸ್ ಠಾಣೆಗೆ ಶರಣಾಗಲು ಹೋಗಿದ್ದ ಗನ್ಮ್ಯಾನ್ ಬಾಲು ಸುಳ್ಳು ಹೇಳುತ್ತಿದ್ದಾರೆಂಬ ಅನುಮಾನದಲ್ಲಿ ಪೊಲೀಸರು ಆತನ ವಿರುದ್ಧ ಸಾಕ್ಷಿ ನಾಶದ ಪ್ರಕರಣ ದಾಖಲಿಸಿದ್ದರು. ಈಗ ಏಳನೇ ಎಸಿಎಂಎಂ ನ್ಯಾಯಾಲಯವು ಬಾಲುಗೆ ಜಾಮೀನು ನೀಡಿದೆ. ಮೂರು ಸಾವಿರ ರೂ ನಗದು ಹಣದ ಶೂರಿಟಿ ಮೇಲೆ ಬೇಲ್ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ