ಗದಗದಲ್ಲಿ ಮನೆ ಮಾಡಿದ ರೊಟ್ಟಿ ಪಂಚಮಿ ಹಬ್ಬದ ಸಡಗರ..! 

ಮೊದಲ ದಿನ ರೊಟ್ಟಿ ಪಂಚಮಿ, ಎರಡನೇ ದಿನ ನಾಗರ ಕಲ್ಲಿಗೆ ಹಾಲೆರೆಯುವದು ಹಾಗೂ ಮೂರನೇ ದಿನ ಚೌತಿ ಹಬ್ಬ ಆಚರಿಸಲಾಗುತ್ತದೆ

ಹಬ್ಬದ ಆಚರಣೆ

ಹಬ್ಬದ ಆಚರಣೆ

  • Share this:
ಗದಗ (ಆ. 11) : ಹಬ್ಬಗಳು ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ತನ್ನದೇ ಆದ ಮಹತ್ವವನ್ನ ಪಡೆದಿವೆ. ಅದರಲ್ಲೂ ಶ್ರಾವಣ ಮಾಸ ಅಂತು ಹಬ್ಬಗಳ ಸಾಲು. ಈ ಶ್ರಾವಣ ಮಾದ ಮೊದಲ ಹಬ್ಬ ನಾಗರ ಪಂಚಮಿ. ನಾಗರ ಪಂಚಮಿ ಆಚರಣೆಗೆ ಈಗಾಗಲೇ ಸಾಕಷ್ಟು ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕಲ್ಲಂತೂ ಈ ಹಬ್ಬಕ್ಕೆ ವಿಶೇಷ ಮಹತ್ವ. ಕೊರೊನಾ ಅಬ್ಬರದ ನಡುವೆಯೂ ಸುರಕ್ಷಿತ ಕ್ರಮಗಳೊಂದಿಗೆ ಈಗಾಗಲೇ ಜನರು ಹಬ್ಬ ಆಚರಣೆಗೆ ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. 

ಹೌದು  ನಾಡಿಗೆ ದೊಡ್ಡದು ನಾಗರ ಪಂಚಮಿ,ಹಬ್ಬ ಬಂತವ್ವ ಸನಿಯಾಕ, ಅಣ್ಣ ಬರಲಿಲ್ಲ ಇನ್ನೂ ಕರಿಲಾಕ ಎಂಬ ಈ ಜಾನಪದ ಹಾಡು ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬದ ವೈಭವವನ್ನು ಸಾರಿ‌ ಸಾರಿ ಹೇಳುತ್ತೆ. ಪಂಚಮಿ ಹಬ್ಬದ ಮೊದಲ ದಿನವಾದ ಇಂದು ರೊಟ್ಟಿ ಪಂಚಮಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬ ಇಂದು ಕಳೆಗಟ್ಟಿತ್ತು. ಉತ್ತರ ಕರ್ನಾಟಕದ ಭಕ್ಷ್ಯ ಭೋಜನಗಳಾದ ಎಳ್ಳು ರೊಟ್ಟಿ, ಚಪಾತಿ, ಪುಂಡಿ ಸೊಪ್ಪಿನ ಪಲ್ಯ,ಕಡಲೆ‌ಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಮಡಿಕೆ ಕಾಳು ಪಲ್ಯ, ಹಿಟ್ಟಿನ ಪಲ್ಯ, ಕೋಸಂಬರಿ, ಮೆಂತೆ ಸೊಪ್ಪು, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ, ಪುಟಾಣಿ ಚಟ್ನಿ ಸೇರಿದಂತೆ ಥರಾವರಿ ಖಾದ್ಯಗಳನ್ನ ತಯಾರಿಸಲಾಗಿತ್ತು. ನಂತರ ಗೃಹಿಣಿಯರು ಅತ್ಯಂತ ಸಂಭ್ರಮದಿಂದ, ತಮ್ಮ ಅಕ್ಕಪಕ್ಕದ ಆತ್ಮೀಯರ ಮನೆಗೆ ತೆರಳಿ, ಎಲ್ಲಾ ಖಾದ್ಯಗಳ ಒಳಗೊಂಡ ರೊಟ್ಟಿ ಬುತ್ತಿ ಹಂಚಿ ಬರುತ್ತಾರೆ. ಹೀಗೆ ಅವರ ಮನೆಗೆ ಇವರು ತೆರಳಿ, ಇವರ ಮನೆಗೆ ಅವರು ಬಂದು, ರೊಟ್ಟಿ ಬುತ್ತಿ ಸಮೇತ ಹಂಚುವ ಆಚರಣೆ ನಿಜಕ್ಕೂ ವಿಶಿಷ್ಠವಾಗಿರುತ್ತೆ. ಹೀಗೆ ತಮ್ಮ ಬಂಧು‌ ಬಳಗ, ಅಕ್ಕಪಕ್ಕದ ಆತ್ಮಿಯರು ಹಾಗೂ ಸ್ನೇಹಿತರಿಗೆ ಹಂಚಿಕೊಂಡು ತಿನ್ನುವದೇ ಈ ರೊಟ್ಟಿ ಹಬ್ಬದ ವಿಭಿನ್ನ ಸಂಭ್ರಮ.

ಇದನ್ನು ಓದಿ: ಆನಂದ್​ ಸಿಂಗ್​ ಓಲೈಕೆಗೆ ಮುಂದಾದ ಸಿಎಂ; ಖಾತೆ ಮರು ಹಂಚಿಕೆ ಸಾಧ್ಯತೆ!

ಐದು ದಿನಗಳ ಪಂಚಮಿ ಹಬ್ಬದ ಮೊದಲ ದಿನವೇ ರೊಟ್ಟಿ ಪಂಚಮಿ, ಎರಡನೇ ದಿನ ನಾಗರ ಕಲ್ಲಿಗೆ ಹಾಲೆರೆಯುವದು ಹಾಗೂ ಮೂರನೇ ದಿನ ಚೌತಿ ಹಬ್ಬವನ್ನ ಆಚರಿಸಲಾಗುತ್ತದೆ. ಮನೆ ಮಂದಿಯೆಲ್ಲ ಒಂದೆಡೆ ಜಮಾಯಿಸಿ ಈ ರೊಟ್ಟಿ ಹಬ್ಬವನ್ನ ಆಚರಣೆ ಮಾಡೋದ್ರಿಂದ ಒಡಹುಟ್ಟಿದವರ ಹಬ್ಬ ಅನ್ನೋ ಪ್ರತೀತಿಯೂ ಇದೆ. ಇತ್ತೀಚಿನ ಕೊರೊನಾ ಹಾವಳಿಯಿಂದಾಗಿ ನಗರ ಪ್ರದೇಶಗಳಲ್ಲಿ ಇಂಥಹ ಹಬ್ಬಗಳು ನಿಧಾನವಾಗಿ ಮರೆಯಾಗ್ತಿವೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಈ ರೀತಿಯ ಹಬ್ಬಗಳು ಇಂದಿಗೂ, ಅದ್ಧೂರಿ ಹಾಗೂ ವಿಶಿಷ್ಠ ಸಂಪ್ರದಾಯದ ಸ್ಥಾನಮಾನ ಇಟ್ಟುಕೊಂಡಿವೆ‌.

ಒಟ್ಟಾರೆ ಪ್ರೀತಿ ವಿಶ್ವಾಸ ಗಟ್ಟಿಗೊಳಿಸುವ ಈ ಹಬ್ಬಗಳು ಪ್ರತಿವರ್ಷವೂ ಸಂಬಂಧ, ಬಾಂಧವ್ಯವನ್ನ ಹೆಚ್ಚಿಸುತ್ತಾ ಹೋಗುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೆ ಇರಲಿ ವರ್ಷಗಟ್ಟಲೆ ಕೆಲಸ ಅಂತ ಬೇರೆ ಬೇರೆ ಊರಿನಲ್ಲಿರುವವರು ಈ‌ ಹಬ್ಬದ ನೆಪದಲ್ಲಾದ್ರೂ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸೇರಿ ಭಾವೈಕ್ಯದ ಜೊತೆ ಭಾತೃತ್ವವನ್ನ ಉಳಿಸಿಕೊಳ್ಳುತ್ತಿರುವುದೇ ಸಂಭ್ರಮ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: