ಬೆಂಗಳೂರು: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ ಸುದ್ದಿ ಚರ್ಚೆಯಲ್ಲಿರುವ ಸಂದರ್ಭದಲ್ಲಿಯೇ ರಾಜಧಾನಿ ಬೆಂಗಳೂರಿನ ವಿವೇಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಾರ್ ಪೇಟೆಯ ಕಾರ್ಯಕ್ರಮದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಸೇರಿ ನಾಲ್ವರು ಗಾಯಗೊಂಡ ಘಟನೆ ಇಂದು ರಾತ್ರಿ ನಡೆದಿದೆ.
ಶಾಸಕ ಎನ್.ಎ. ಹ್ಯಾರಿಸ್ ಅವರು ಹೊನ್ನಾರ್ಪೇಟೆಯಲ್ಲಿ ತಮಿಳರು ಆಯೋಜಿಸಿದ್ದ ಎಂಜಿಆರ್ ಜನ್ಮದಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ವೇದಿಕೆ ಬಳಿ ಇದ್ದಕ್ಕಿದ್ದ ಹಾಗೆ ಸ್ಫೋಟ ಸಂಭವಿಸಿದೆ. ಘಟನೆಯಿಂದ ಶಾಸಕ ಹ್ಯಾರಿಸ್ ಕಾಲಿಗೆ ಗಾಯವಾಗಿದೆ. ಅಲ್ಲದೇ ಇತರೆ ಮೂವರು ಗಾಯಗೊಂಡಿದ್ದಾರೆ. ಶಾಸಕರು ಸೇರಿ ಗಾಯಾಳುಗಳನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳದ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಹಂದಿ ಒಡೆಯಲು ಬಳಸುವ ಮದ್ದು ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ಶಾಸಕ ಎನ್.ಎ. ಹ್ಯಾರೀಸ್ ಮಗ ನಲಪಾಡ್ ಅವರು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದು, ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಮಾಡಿದ್ದಾರೆ. ಇದು ಪೂರ್ವನಿಯೋಜಿತ ಕೆಲಸ. ಸ್ವಲ್ಪದರಲ್ಲೇ ತಂದೆಯವರು ಬಚಾವಾಗಿದ್ದಾರೆ. ಅವರ ಜೊತೆ ಮೂವರು ಕಾರ್ಯಕರ್ತರು ಗಾಯಾಳುಗಳಾಗಿದ್ದಾರೆ.
ಸೆಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. 12 ವರ್ಷದಲ್ಲಿ ಇಂತಹ ಘಟನೆ ನಡೆದಿರಲಿಲ್ಲ.ಇದೇ ಮೊದಲು ಎಂದು ಹೇಳಿದ್ದಾರೆ.
ಇದನ್ನು ಓದಿ: ಬಾಂಬ್ ಇಟ್ಟ ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂದು ನಾನು ಹೇಳಿಲ್ಲ; ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ