ಮೈಸೂರು(ಜ.24): ಜೆಎನ್ಯು ಹಿಂಸಾಚಾರ ಮತ್ತು ಪೌರತ್ವ ಕಾಯ್ದೆ ವಿರೋಧಿಸಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ನಳಿನಿ ಬಾಲಕುಮಾರ್ ಎಂಬ ಯುವತಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದರು. ಆರೋಪಿ ನಳಿನಿ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಲು ಮುಂದಾದ ವಕೀಲರ ಗುಂಪಿನ ಜೊತೆಗೆ ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ ಗುರುತಿಸಿಕೊಂಡಿದ್ದರು. ಈ ಮಧ್ಯೆಯೇ ಸಂಘ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ವಕೀಲರಾದ ಮಂಜುಳ ಮಾನಸರನ್ನು ಮೈಸೂರು ವಕೀಲರ ಸಂಘ ಅಮಾನತು ಮಾಡಿದೆ. ಮಂಜುಳ ಮಾನಸರ ಅಮಾನತು ತೀರ್ಮಾನದ ಬಗ್ಗೆ ಖುದ್ದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಮೈಸೂರು ವಕೀಲರ ಸಂಘದ ಆನಂದ್ ಕುಮಾರ್, ಸಂಘ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಕಾರಣ ಮಂಜುಳ ಮಾನಸರನ್ನು ಅಮಾನತುಗೊಳಿಸಿದ್ದೇವೆ. ಮೈಸೂರು ವಕೀಲರ ಸಂಘ ಈ ನಿರ್ಧಾರ ಕೈಗೊಂಡ ಬಳಿಕವೇ ಘೋಷಣೆ ಮಾಡಿದ್ದೇವೆ ಎಂದರು.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಸಂಘದ ವಿರುದ್ಧ ಮಾತಾಡಿದ್ದಾರೆ. ವಕೀಲರ ಸಂಘದಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ನಳಿನಿ ಪರವಾಗಿ ವಾದ ಮಂಡಿಸದಿರಲು ಕೈಗೊಂಡ ತೀರ್ಮಾನದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾರ ಬೆಂಬಲಕ್ಕೋ ನಿಲ್ಲುವ ಕಾರಣಕ್ಕೆ ಹೀಗೆ ಮಾತಾಡುವುದು ಸಿದ್ದರಾಮಯ್ಯಗೆ ಶೋಭೆ ತರುವ ವಿಚಾರವಲ್ಲ. ಸಿದ್ದರಾಮಯ್ಯ ಸಂಘದ ವಿರುದ್ಧ ಮಾತಾಡುವ ಸಂದರ್ಭದಲ್ಲಿ ಮಂಜುಳ ಮಾನಸ ಕೂಡ ಜೊತೆಗಿದ್ದರು. ಹಾಗೆಯೇ ಸಂಘದ ಗೌಪ್ಯಸಭೆ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುತ್ತಿದ್ದರು. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಆನಂದ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಜಮೀರ್ ಚಿಲ್ಲರೆ ಗಿರಾಕಿ, ಗುಂಡೂರಾವ್ಗೆ ಮೆದುಳೇ ಇಲ್ಲ; ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ
ಜೆಎನ್ಯು ಹಿಂಸಾಚಾರ ಖಂಡಿಸಿ ನಡೆದ ಪ್ರತಿಭಟನೆ ವೇಳೆ
'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದ ನಳಿನಿ ಎಂಬ ಯುವತಿ ವಿರುದ್ಧ ಕೇಸು ದಾಖಲಾಗಿತ್ತು. ನಳಿನಿ ಪರವಾಗಿ ವಕಾಲತ್ತು ವಹಿಸದಿರಲು ಮೈಸೂರಿನ ವಕೀಲರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಲು ಮುಂದಾಗಿದ್ದರು. ಆದರೆ, ಮತ್ತೆ ತಮ್ಮ ನಿರ್ಧಾರ ಬದಲಾಯಿಸಿದ್ದ ಕೆಲವು ಮೈಸೂರಿನ ವಕೀಲರು ಸಂಘದ ನಿರ್ಧಾರವನ್ನು ವಿರೋಧಿಸಿ, ನಳಿನಿ ಪರ ವಕಾಲತ್ತು ವಹಿಸಲು ನಿರ್ಧರಿಸಿದ್ದರು. ಈ ಮಧ್ಯೆಯೇ ಇಂದು ಹಿರಿಯ ವಕೀಲ ದ್ವಾರಕಾನಾಥ್ ನಳಿನಿ ಪರ ವಾದ ಮಂಡಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಏನಿದು ಘಟನೆ?: ಜನವರಿ 8 ಸಂಜೆ ಮೈಸೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮೈಸೂರು ವಿವಿಯ ಹಳೆಯ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಭಾಗಿಯಾಗಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶನ ಮಾಡಿದ್ದರು. ಜನವರಿ 9ರಂದು ಇದು ದೇಶಾದ್ಯಂತ ಸುದ್ದಿಯಾಗಿ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು. ರಾಜ್ಯಪಾಲರು ಸಹ ಮಧ್ಯಪ್ರವೇಶ ಮಾಡಿ ಮೈಸೂರು ವಿವಿಯಿಂದ ವರದಿ ಕೇಳಿದ್ದರು. ಈ ಪ್ರಕರಣದ ಗಂಭೀರತೆಯನ್ನು ಅರಿತ ನಳಿನಿ ನೇರವಾಗಿ ಮೈಸೂರು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಪೃಥ್ವಿ ಕಿರಣ್ ಶೆಟ್ಟಿ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಳಿನಿ ಮನವಿ ಪುರಸ್ಕರಿಸಿದ ನ್ಯಾಯಾಲಯ 1 ಲಕ್ಷ ಶ್ಯೂರಿಟಿಯೊಂದಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ