National Highway: ಯಮಸ್ವರೂಪಿ ಆಗಿ ಬದಲಾದ ರಾಷ್ಟ್ರೀಯ ಹೆದ್ದಾರಿ 275; 32 ಕಿ.ಮೀ ವ್ಯಾಪ್ತಿಯಲ್ಲಿಯೇ ಅಪಘಾತಗಳು

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ 22 ಪ್ರಕರಣಗಳು ದಾಖಲಾಗಿವೆ. ಇನ್ನು ಕುಶಾಲನಗರ ಮತ್ತು ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ 21 ಅಪಘಾತ ಪ್ರಕರಣಗಳು ದಾಖಲಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು : ರಾಷ್ಟ್ರೀಯ ಹೆದ್ದಾರಿ 275 (National Highway 275) ಕೊಡಗು ಜಿಲ್ಲೆಯಲ್ಲಿ ಹಾದು ಕುಶಾಲನಗರ, ಸುಂಟಿಕೊಪ್ಪ ಮತ್ತು ಮಡಿಕೇರಿ ಮಾರ್ಗವಾಗಿ ಮೈಸೂರಿನಿಂದ ಮಂಗಳೂರಿಗೆ (Mysuru – Mangaluru) ಸಂಪರ್ಕ ಕಲ್ಪಿಸುತ್ತದೆ. ಜನರ ಓಡಾಟಕ್ಕೆ, ಅಭಿವೃದ್ಧಿ ಕೆಲಸಗಳಿಗೆ ಒಂದಷ್ಟು ವೇಗ ದೊರೆಯಲಿ ಎಂದು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ಹೆದ್ದಾರಿ ಈಗ ಜನರ ಪಾಲಿಗೆ ಯಮಸ್ವರೂಪಿ ಆಗಿ ಮಾರ್ಪಟ್ಟಿದೆ ಎನ್ನುವುದು ಆತಂಕದ ವಿಚಾರ. ಹೌದು ಮೈಸೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ಅದರಲ್ಲೂ ಕುಶಾಲನಗರದಿಂದ (Kushalanagara) ಮಡಿಕೇರಿ ನಡುವಿನ ಹೆದ್ದಾರಿಯಲ್ಲಿ ನಿತ್ಯ ಅಪಘಾತಗಳು ನಡೆಯುತ್ತಿದ್ದು ಸಾವು ನೋವು ಎದುರಾಗುತ್ತಲೇ ಇವೆ.

ಕಳೆದ ಐದು ತಿಂಗಳಲ್ಲಿಯೇ ಅಂದರೆ ಜನವರಿಯಿಂದ ಮೇ ಅಂತ್ಯದವರೆಗೆ ಬರೋಬ್ಬರಿ 64 ಅಪಘಾತಗಳು ಈ ಹೆದ್ದಾರಿಯಲ್ಲಿ ನಡೆದಿವೆ. ಅದರಲ್ಲಿ 10 ಜನರು ದಾರುಣವಾಗಿ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದರೆ, 64 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

32 ಕಿ.ಮೀ. ವ್ಯಾಪ್ತಿಯಲ್ಲಿಯೇ ಅಪಘಾತಗಳು

ಇದು ಸ್ವತಃ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಡಗು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜು ಅವರು ನೀಡಿರುವ ಮಾಹಿತಿ. ಅದರಲ್ಲೂ ಕುಶಾಲನಗರದಿಂದ ಮಡಿಕೇರಿವರೆಗಿನ 32 ಕಿಲೋ ಮೀಟರ್ ವ್ಯಾಪ್ತಿಯಲ್ಲೇ ಈ ಎಲ್ಲಾ ಅಪಘಾತಗಳು ನಡೆದಿವೆ.

ಇದನ್ನೂ ಓದಿ:  Chaddi War: ಚಡ್ಡಿಗಳು ಚಡ್ಡಿ ಕೆಲಸ ಮಾಡದೇ ಮತ್ತೇನು ಮಾಡ್ತಾರೆ? ಸಿದ್ದರಾಮಯ್ಯ ಪ್ರಶ್ನೆ

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ 22 ಪ್ರಕರಣಗಳು ದಾಖಲಾಗಿವೆ. ಇನ್ನು ಕುಶಾಲನಗರ ಮತ್ತು ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ 21 ಅಪಘಾತ ಪ್ರಕರಣಗಳು ದಾಖಲಾಗಿವೆ.

ಅಪಘಾತಕ್ಕೆ ಕಾರಣ ಏನು?

ಹೊರ ಜಿಲ್ಲೆಯಿಂದ ಬರುತ್ತಿರುವ ಪ್ರವಾಸಿಗರು ಮತ್ತು ಜನರು ಅಪಘಾತ ಮಾಡುತ್ತಿರುವುದೇ ಹೆಚ್ಚು ಎನ್ನುವುದು ಮತ್ತೊಂದು ಗಮನಾರ್ಹ ಅಂಶ. ಹೊರ ಜಿಲ್ಲೆಯಿಂದ ಬರುವವರಿಗೆ ಬೆಟ್ಟಗುಡ್ಡಗಳು ಮತ್ತು ಬಹುತೇಕ ಹೆಚ್ಚು ತಿರುವುಗಳಿಂದ ಕೂಡಿರುವ ಕೊಡಗಿನ ಹೆದ್ದಾರಿಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದರೂ ಹೊರ ಜಿಲ್ಲೆ ಮತ್ತು ರಾಜ್ಯಗಳ ವಾಹನಗಳ ಸವಾರರು ಮನಸ್ಸೋ ಇಚ್ಚೆ ವಾಹನಗಳನ್ನು ಚಲಾಯಿಸುತ್ತಿರುವುದರಿಂದ ನಿತ್ಯ ಅಪಘಾತಗಳು ಸಂಭವಿಸುವುದಕ್ಕೆ ಕಾರಣ ಎನ್ನಲಾಗುತ್ತಿದೆ.

80 ರಿಂದ 100 ಕಿ.ಮೀ ವೇಗದಲ್ಲಿ ಚಾಲನೆ

ಹೆದ್ದಾರಿಯಲ್ಲಿ ವಾಹನಗಳ ಓಡಿಸುವುದಕ್ಕೆ ಅವಕಾಶ ಇರುವುದೇ ಕೇವಲ 40 ಕಿಲೋ ಮೀಟರ್ ವೇಗದಲ್ಲಿ ಮಾತ್ರ. ಅದರಲ್ಲೂ ತಿರುವು ಮತ್ತು ಇಳಿಜಾರಿನಂತ ಸ್ಥಳಗಳಲ್ಲಿ ಕೇವಲ 30 ಕಿಲೋ ಮೀಟರ್ ವೇಗದಲ್ಲಿ ವಾಹನಗಳನ್ನು ಚಲಾಯಿಸಲು ಅವಕಾಶವಿದೆ. ಆದರೆ ಬಹುತೇಕ ವಾಹನಗಳ ಸವಾರರು ಬರೋಬ್ಬರಿ 80 ರಿಂದ 100 ಕಿಲೋ ಮೀಟರ್ ವೇಗದಲ್ಲಿ ಓಡಿಸುತ್ತಾರೆ. ಇದೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುವ ಮಾತು.

ವಿಪರ್ಯಾಸವೆಂದರೆ ಹೊರಗಿನವರು ತಾವು ಅಪಘಾತ ಮಾಡಿಕೊಳ್ಳುವುದಲ್ಲದೆ, ಸ್ಥಳೀಯ ಜನರ ವಾಹನಗಳಿಗೆ ಮತ್ತು ಜನರಿಗೆ ಅಪಘಾತ ಮಾಡುತ್ತಿದ್ದಾರೆ ಎನ್ನುವುದು ಸ್ಥಳೀಯರು ಸಹನೆ ಕಳೆದುಕೊಳ್ಳುವಂತೆ ಮಾಡುತ್ತಿದೆ. ಹಲವು ಹಳ್ಳಿಗಳ ನಡುವೆಯೇ ಹೆದ್ದಾರಿ ಹಾದು ಹೋಗಿರುವುರಿಂದ ಜನರು ಹೆದ್ದಾರಿ ದಾಟುವಾಗ ಅಪಘಾತಗಳು ನಡೆದು ಸಾವನ್ನಪಿದ ಘಟನೆಗಳು ಹಲವು ನಡೆದಿವೆ.

ರಸ್ತೆ ಪಕ್ಕ ಗಿಡ, ಮುಳ್ಳುಕಂಟಿ

ಸ್ಥಳೀಯ ಜನರು ಹೆದ್ದಾರಿಗಳಲ್ಲಿ ಓಡಾಡುವಾಗ ಅಥವಾ ವಾಹನ ಚಲಾಯಿಸುವಾಗ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ಇದೆ. ಆದ್ದರಿಂದ ವಾಹನಗಳ ಅತೀ ವೇಗಕ್ಕೆ ಪೊಲೀಸರು ಕಡಿವಾಣ ಹಾಕಬೇಕು. ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆದಿರುವ ಕುರುಚಲು ಗಿಡಗಳನ್ನು ತೆರವು ಮಾಡಬೇಕು.

ಇದನ್ನೂ ಓದಿ:  Bagalakote: ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದ ಗಂಡ; 4 ದಿನ ನಾಗರ ಹಾವಿನ ಜೊತೆ ಅಜ್ಜಿ ವಾಸ

ಅಪಘಾತ ವಲಯಗಳಲ್ಲಿ ವೇಗ ನಿಯಂತ್ರಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಜನರ ಅಭಿವೃದ್ಧಿಗೆ ಅನುಕೂಲವಾಗಬೇಕಾಗಿದ್ದ ರಾಷ್ಟ್ರೀಯ ಹೆದ್ದಾರಿ ಯಮಸ್ವರೂಪಿಯಾಗಿ ಬದಲಾಗಿದೆ ಎನ್ನುವುದು ಅಚ್ಚರಿಯ ವಿಷಯ.
Published by:Mahmadrafik K
First published: