Mysuru Gang Rape Case: ರೇಪ್​ ಕೇಸ್ ಸಂಬಂಧ ನಾಲ್ವರು ಶಂಕಿತರು ವಶಕ್ಕೆ; ಅಜ್ಞಾತ ಸ್ಥಳದಲ್ಲಿ ವಿಚಾರಣೆ

ನಿನ್ನೆಯೆಷ್ಟೇ ಎರಡು ವಿಶೇಷ ತಂಡಗಳನ್ನು ತಮಿಳುನಾಡು ಮತ್ತು ಕೇರಳಕ್ಕೆ ಕಳುಹಿಸಲಾಗಿತ್ತು. ಅನುಮಾಸ್ಪದ ನಾಲ್ವರ ಮೊಬೈಲ್ ಲೊಕೇಷನ್ ಒಂದೇ ಕಡೆ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಅನುಮಾನ ಬಂದು ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು(ಆ.28): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಿನ್ನೆ ಡಿಜಿಪಿ ಪ್ರವೀಣ್ ಸೂದ್ ಮೈಸೂರಿಗೆ ತೆರಳಿ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದರು. ಸಾಕ್ಷಿ ಸಂಗ್ರಹ ಮಾಡುತ್ತಿರುವ ಪೊಲೀಸರು ವಿವಿಧ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಸದ್ಯ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ  ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

  ಪೊಲೀಸರು ನಿನ್ನೆ ಸಂಜೆ ಟವರ್​​ ಲೊಕೇಶನ್ ಆಧರಿಸಿ ತಮಿಳುನಾಡಿನಲ್ಲಿ ನಾಲ್ಕು  ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆಯೆಷ್ಟೇ ಎರಡು ವಿಶೇಷ ತಂಡಗಳನ್ನು ತಮಿಳುನಾಡು ಮತ್ತು ಕೇರಳಕ್ಕೆ ಕಳುಹಿಸಲಾಗಿತ್ತು. ಅನುಮಾಸ್ಪದ ನಾಲ್ವರ ಮೊಬೈಲ್ ಲೊಕೇಷನ್ ಒಂದೇ ಕಡೆ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಅನುಮಾನ ಬಂದು ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ. ಶಂಕಿತ ನಾಲ್ವರೂ ಸಹ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ನಲಾಗಿದೆ.

  ಶಂಕಿತರನ್ನು ನಿನ್ನೆ ರಾತ್ರಿಯೇ ತಮಿಳುನಾಡಿನಿಂದ ಮೈಸೂರಿಗೆ ಕರೆತರಲಾಗಿದೆ. ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿ ನಾಲ್ವರ ವಿಚಾರಣೆ ನಡೆಸುತ್ತಿದ್ದಾರೆ.

  ಇನ್ನು ಪ್ರಕರಣ ಸಂಬಂಧ ಪೊಲೀಸರಿಗೆ ಮತ್ತೊಂದು ಚಾಲೆಂಜ್ ಎದುರಾಗಿದೆ. ಒಂದೆಡೆ ಆರೋಪಿಗಳನ್ನು ಪತ್ತೆ ಹಚ್ಚುವುದು ಸವಾಲಾದರೆ, ಮತ್ತೊಂದೆಡೆ ಸಂತ್ರಸ್ಥ ಯುವತಿಯಿಂದ ಹೇಳಿಕೆ ಪಡೆಯುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಮುಂದಿನ ವಾರದಲ್ಲಿ ಯುವತಿಯ ಬಳಿ ಹೇಳಿಕೆ ಪಡೆಯಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಆ. 30ರವರೆಗೂ ಧಾರಾಕಾರ ಮಳೆ; 16 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆ

  ಆದರೆ ಸ್ವಲ್ಪ ದಿನದ ಬಳಿಕ ಹೇಳಿಕೆ ಕೊಡಿಸುವುದಾಗಿ ಯುವತಿಯ ಪೋಷಕರು ಹೇಳಿದ್ದಾರೆ. ಘಟನೆ‌ ಕುರಿತು ಹೇಳಿಕೆ ನೀಡಲು ಕಾಲಾವಕಾಶ ನೀಡುವಂತೆ ಪೋಷಕರು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಯುವತಿಯ ತಂದೆ-ತಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

  ಹೀಗಾಗಿ ಸಂತ್ರಸ್ಥ ಯುವತಿ ಚೇತರಿಸಿಕೊಂಡು, ಪರಿಸ್ಥಿತಿ ಸುಧಾರಿಸಿದ ಬಳಿಕ ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳು ಪೊಲೀಸರಿಗೆ ಸೂಚಿಸಿದ್ದಾರೆ. ಸದ್ಯ ತಾಂತ್ರಿಕ ಆಯಾಮದಲ್ಲಿ ಪೊಲೀಸರ ತನಿಖೆ ಮುಂದುವರೆಯುತ್ತಿದೆ.

  ಬಲ್ಲ ಮೂಲಗಳ ಪ್ರಕಾರ, ಸಂತ್ರಸ್ಥ ಯುವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಪೋಷಕರೇ ಯುವತಿಯನ್ನು ಡಿಸ್ಚಾರ್ಜ್​ ಮಾಡಿಸಿಕೊಂಡು ಮನೆಯಲ್ಲಿ ಉಳಿದುಕೊಂಡು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಸಂತ್ರಸ್ಥೆಯ ಸ್ನೇಹಿತನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

  ಘಟನೆ ಸಂಭವಿಸಿದಾಗಿನಿಂದ ಮೈಸೂರು ಸೇರಿ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ನಟಿಯರಾದ ರಮ್ಯಾ, ಶೃತಿ ಸೇರಿದಂತೆ ಅನೇಕರು ಗ್ಯಾಂಗ್​ರೇಪ್​ ಘಟನೆ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್​ ಈ ಘಟನೆಯನ್ನು ಖಂಡಿಸಿ ‘ಮಾನಿನಿ‘ ಎಂದು ಹೆಸರಿಟ್ಟಿದ್ದಾರೆ.

  ಮೈಸೂರು ಗ್ಯಾಂಗ್​ ರೇಪ್​ ಪ್ರಕರಣ ಸಂಬಂಧ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಎಂದು  ರಾಷ್ಟ್ರೀಯ ಮಹಿಳಾ ಆಯೋಗ ಮೊನ್ನೆ ಕರ್ನಾಟಕದ ಡಿಜಿಪಿಗೆ ಸೂಚನೆ ನೀಡಿತ್ತು. ಅಂದಿನಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

  ಇದನ್ನೂ ಓದಿ:Karnataka CET Exam: ಇಂದಿನಿಂದ ರಾಜ್ಯದಲ್ಲಿ ಸಿಇಟಿ ಪರೀಕ್ಷೆ; ವಿದ್ಯಾರ್ಥಿಗಳು ಈ ನಿಯಮಗಳನ್ನು ಪಾಲಿಸಲೇಬೇಕು..!

  ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಕೂಡ ನಿನ್ನೆ ಮೈಸೂರಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದರು.

  ಇನ್ನು, ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಸಂಪುಟ ಸಚಿವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ ಶೀಘ್ರವೇ ಪ್ರಕರಣದ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.
  Published by:Latha CG
  First published: