ಬೆಂಗಳೂರು(ಆ.28): ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಟವರ್ ಲೊಕೇಶನ್ ಆಧರಿಸಿ ನಿನ್ನೆ ತಮಿಳುನಾಡಿನಲ್ಲಿ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿಯೇ ತಮಿಳುನಾಡಿನಿಂದ ಮೈಸೂರಿಗೆ ಕರೆದುಕೊಂಡು ಬರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಶಂಕಿತರ ವಿಚಾರಣೆ ನಡೆಸುತ್ತಿದ್ದಾರೆ. ವಿಷಯ ತಿಳಿದ ಡಿಜಿಪಿ ಪ್ರವೀಣ್ ಸೂದ್ ಬೆಂಗಳೂರಿನಿಂದ ದಿಢೀರ್ ಮೈಸೂರಿಗೆ ತೆರಳಿದ್ದಾರೆ. ನಿನ್ನೆ ಮೈಸೂರಿಗೆ ತೆರಳಿದ್ದ ಅವರು ರಾತ್ರಿ ತಾನೇ ಬೆಂಗಳೂರಿಗೆ ವಾಪಸ್ಸಾಗಿದ್ದರು. ಇಂದು ನಾಲ್ವರು ಶಂಕಿತರನ್ನು ವಶಕ್ಕೆ ಪಡೆಯುತ್ತಿದ್ದಂತೆ ಮತ್ತೆ ಬೆಂಗಳೂರಿನಿಂದ ಮೈಸೂರಿಗೆ ದೌಡಾಯಿಸಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ ಇಂದು ಮಧ್ಯಾಹ್ನ ಡಿಜಿಪಿ ಪ್ರವೀಣ್ ಸೂದ್ ಮಹತ್ವದ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಸುಮಾರು 1 ಗಂಟೆ ಸುಮಾರಿಗೆ ಸುದ್ದಿಗೋಷ್ಟಿ ನಡೆಸಲಿದ್ದು, ಪ್ರಕರಣ ಸಂಬಂಧ ಮಾಹಿತಿ ನೀಡಲಿದ್ದಾರೆ. ಸದ್ಯ ವಶಕ್ಕೆ ಪಡೆದಿರುವ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮುಗಿದ ಬಳಿಕ ಒಂದಷ್ಟು ಮಹತ್ವದ ಮಾಹಿತಿಯನ್ನು ಸುದ್ದಿಗೋಷ್ಟಿ ಮೂಲಕ ನೀಡುವ ಸಾಧ್ಯತೆ ಇದೆ.
ಇನ್ನು, ಇದೇ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ಆರ್.ಟಿ.ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಸದ್ಯ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಅದರ ಬಗ್ಗೆ ಇನ್ನೂ ವಿವರ ಬರಬೇಕಿದೆ. ಯಾರೋ ಹೇಳಿದ್ರೂ ಅಂತಾ ನಾನು ಹೇಳೋಕೆ ಆಗಲ್ಲ. ಎರಡು ಗಂಟೆಯೊಳಗೆ ಸಂಪೂರ್ಣ ವಿವರ ಕೊಡ್ತೀವಿ. ಒಟ್ಟಾರೆ ಕಾರ್ಯಾಚರಣೆ ಯಶಸ್ವಿಯಂತೂ ಆಗಿದೆ ಎಂದರು.
ಇದನ್ನೂ ಓದಿ:Mysuru Gang Rape Case: ರೇಪ್ ಕೇಸ್ ಸಂಬಂಧ ನಾಲ್ವರು ಶಂಕಿತರು ವಶಕ್ಕೆ; ಅಜ್ಞಾತ ಸ್ಥಳದಲ್ಲಿ ವಿಚಾರಣೆ
ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ನಾನು ಇಂದು ತವರು ಜಿಲ್ಲೆ ಹಾವೇರಿಗೆ ಪ್ರವಾಸ ಹೋಗುತ್ತಿದ್ದೇನೆ. ಮೈಸೂರು ರೇಪ್ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಅಂತ ನಾನು ಹೇಳಿದ್ದೇನೆ. ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು. ಆದರೆ ಸಿಎಂ ಬೊಮ್ಮಾಯಿ ಆರೋಪಿಗಳನ್ನು ವಶಕ್ಕೆ ಪಡೆದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
ಪೊಲೀಸರು ನಿನ್ನೆ ಸಂಜೆ ಟವರ್ ಲೊಕೇಶನ್ ಆಧರಿಸಿ ತಮಿಳುನಾಡಿನಲ್ಲಿ ನಾಲ್ಕು ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆಯೆಷ್ಟೇ ಎರಡು ವಿಶೇಷ ತಂಡಗಳನ್ನು ತಮಿಳುನಾಡು ಮತ್ತು ಕೇರಳಕ್ಕೆ ಕಳುಹಿಸಲಾಗಿತ್ತು. ಅನುಮಾಸ್ಪದ ನಾಲ್ವರ ಮೊಬೈಲ್ ಲೊಕೇಷನ್ ಒಂದೇ ಕಡೆ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಅನುಮಾನ ಬಂದು ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ. ಶಂಕಿತ ನಾಲ್ವರೂ ಸಹ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ನಲಾಗಿದೆ.
ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಶಾಕ್; ಇಂದು ದಿಢೀರ್ ಏರಿಕೆ ಕಂಡ ಚಿನ್ನದ ಬೆಲೆ
ಬಲ್ಲ ಮೂಲಗಳ ಪ್ರಕಾರ, ಸಂತ್ರಸ್ಥ ಯುವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಪೋಷಕರೇ ಯುವತಿಯನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಯಲ್ಲಿ ಉಳಿದುಕೊಂಡು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಸಂತ್ರಸ್ಥೆಯ ಸ್ನೇಹಿತನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಸಂಭವಿಸಿದಾಗಿನಿಂದ ಮೈಸೂರು ಸೇರಿ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ನಟಿಯರಾದ ರಮ್ಯಾ, ಶೃತಿ ಸೇರಿದಂತೆ ಅನೇಕರು ಗ್ಯಾಂಗ್ರೇಪ್ ಘಟನೆ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಘಟನೆಯನ್ನು ಖಂಡಿಸಿ ‘ಮಾನಿನಿ‘ ಎಂದು ಹೆಸರಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ