ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸ್ಯಾಂಡಲ್ವುಡ್ ಮಂದಿ ಸಹ ಹೊರತಾಗಿಲ್ಲ. ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪೋಸ್ಟ್ ಮಾಡಿದ್ದಾರೆ. ರಮ್ಯಾ ಮಾತ್ರವಲ್ಲ ನಟಿಯರಾದ ಶ್ರುತಿ-ಅದಿತಿ ಪ್ರಭುದೇವ ಹೀಗೆ ಸಾಕಷ್ಟು ಮಂದಿ ಕಾಮುಕರನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮುಕರನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ನಟಿ ರಮ್ಯಾ, ಶ್ರುತಿ, ಅತಿದಿ ಪ್ರಭುದೇವಾ, ಹರ್ಷಿಕಾ ಪೂಣಚ್ಚ ಸೇರಿದಂತೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಮ್ಯಾ ತಮ್ಮ ಮುಖವನ್ನು ಮರೆ ಮಾಚಿರುವ ಸೆಲ್ಫಿ ಹಂಚಿಕೊಂದ್ದು, ಮಹಿಳೆಯ ಮೇಲೆ ಪುರುಷ ನಡೆಸುವ ಎಲ್ಲ ದೌರ್ಜನ್ಯಗಳಿಗೂ ಮಹಿಳೆಯನ್ನೇ ಹೊಣೆ ಮಾಡಲಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Srimurali-Madhagaja: ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ಮುಕ್ತಾಯ: ಸಂಭ್ರಮದಲ್ಲಿ ಚಿತ್ರತಂಡ..!
ಪುರುಷ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರಬಹುದು ಅಥವಾ ಹಲ್ಲೆ ಮಾಡಿ, ನಿಂದಿಸಿರಬಹುದು. ಅದು ನಿನ್ನ ತಪ್ಪು, ನೀನು ಆ ರೀತಿ ಹೇಳಬಾರದಿತ್ತು. ನೀನು ಹಾಗೆ ಮಾಡಬಾರದಿತ್ತು. ನೀನು ಆ ಬಟ್ಟೆ ಹಾಕಬಾರದಿತ್ತು. ನಿನ್ನ ಬಟ್ಟೆ ತುಂಬಾ ಚಿಕ್ಕದಾಯ್ತು... ತುಂಬಾ ಉದ್ದ ಆಯ್ತು... ತಡ ರಾತ್ರಿ ನೀನು ಹೊರಗೆ ಹೋಗಬಾರದಿತ್ತು... ಮೇಕಪ್ ಹಾಕಬಾರದಿತ್ತು... ಕೆಂಪು ಲಿಪ್ ಸ್ಟಿಕ್ ಯಾಕೆ ಎಂಬ ಪ್ರಶ್ನೆಗಳು ಹೆಣ್ಣು ಮಕ್ಕಳಿಗೆ ಎದುರಾಗುತ್ತದೆ. ನೀನು ಕಣ್ಣು ಮಿಟುಕಿಸಬಾರದಿತ್ತು, ನಿನ್ನ ಬಳಿ ಅದು ಇರಬಾರದು... ಇದು ಇರಬಾರದು...ಯಾಕೆ ??? ಗಂಡಸರು, ಗಂಡಸರಲ್ಲವೇ... ಅದಕ್ಕೆ ನಾವು ಹೆಂಗಸರು ಕಾಂಪ್ರಮೈಸ್ ಮಾಡಿಕೊಳ್ಳಬೇಕು. ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವೇ ಬದಲಾಗಬೇಕು ಹಾಗೂ ಎದುರಿಸಬೇಕು... ಅದು ಸಾಧ್ಯವಿಲ್ಲ. ಈ ಮನಸ್ಥಿತಿಗೆ ಪೂರ್ಣವಿರಾಮ ಇಡಲೇಬೇಕು. ನಿಜ ಹೇಳಬೇಕು ಅಂದರೆ, ನಾನೂ ಇದೇ ರೀತಿ ಇದ್ದೆ, ಆರೋಪ ಹೊತ್ತಿದ್ದೆ, ಆದರೆ ಇನ್ನು ಮುಂದೆ ಹೀಗಿರಲ್ಲ. ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕುರುಡಾಗದಿರಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಓಪನ್ ಲೆಟರ್ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Happy Birthday Vihaan: ಮತ್ತೊಂದು ಸಿನಿಮಾದಲ್ಲಿ ಗಣೇಶ್ ಮಗ ವಿಹಾನ್: ರಿಲೀಸ್ ಆಯ್ತು ಪೋಸ್ಟರ್..!
ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಕುರಿತಾಗಿ ನಟಿ ಶ್ರುತಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಶ್ರುತಿ, ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ? ಕಾಮುಕರನ್ನ ಬಂಧಿಸಿ, ಶಿಕ್ಷಿಸುವ ಕೆಲಸ ಆಗಬೇಕು. ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ ಸಂಸ್ಕಾರ ಪೋಷಕರ ಜವಾಬ್ದಾರಿಯೂ ಆಗಿರುತ್ತದೆ. ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಾಗುತ್ತದೆ ಇದು ಆಗದಿರಲಿ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನಟಿ ಅದಿತಿ ಪ್ರಭುದೇವ ಸಹ ಈ ಘಟನೆ ಕುರಿತಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಇಂತಹ ಪ್ರಕರಣಗಳು ಸಮಾಜವನ್ನು ಆತಂಕಕ್ಕೆ ತಳ್ಳುತ್ತಿವೆ. ಇದೊಂದು ದುರಂತ. ಒಬ್ಬರು ಕೆಟ್ಟ ಮಾತು ಆಡಿದರೂ ಸಹ ಜನರು ಅದನ್ನು ವಿರೋಧಿಸಬೇಕು. ಹೀಗೆ ಸಮಾಜವನ್ನು ತಿದ್ದು ಕೆಲಸ ಆರಂಭವಾಗಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಇಂದು ಬೇರೆಯವರ ತಾಯಿ-ತಂಗಿಗೆ ಆಗಿದ್ದು, ನಾಳೆ ನಮ್ಮ-ನಿಮ್ಮ ಮನೆಗಳವರೆಗೂ ಬರಬಹುದು. ಇನ್ನಾದರೂ ಈ ಸಂಬಂಧ ಎಚ್ಚೆತ್ತುಕೊಂಡು ಸಂಸ್ಕಾರದಿಂದ ವರ್ತಿಸುವುದನ್ನು ಕಲಿಯುವ ಅಗತ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ: Happy Birthday Sumalatha Ambareesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಮಲತಾ: ಶುಭ ಕೋರಿದ ಅಭಿಷೇಕ್ ಅಂಬರೀಷ್
ನಾವು ಯಾವ ಕಾಲದಲ್ಲಿ ಇದ್ದೇವೆ. 2021ರಲ್ಲಿ ಇದ್ದೀವಾ ಅಥವಾ ಹಳೇ ಕಾಲದಲ್ಲಾ ...? ಈ ಘಟನೆ ಬಗ್ಗೆ ಕೇಳಿದ ಮೇಲೆ ಹೆದರಿಕೆ ಬರೋಕೆ ಶುರುವಾಗಿದೆ. ದಯವಿಟ್ಟು ನಿಮ್ಮ ಗಮನಕ್ಕೆ ಬಂದಂತೆ ಯಾವುದೇ ಹೆಣ್ಣು ಕಷ್ಟದಲ್ಲಿದ್ದರೆ ಆಕೆಗೆ ಸಹಾಯ ಮಾಡಿ. ಕೆಟ್ಟದು ಆಗೋಕೆ ಬಿಡಬೇಡಿ. ಹೆಣ್ಣನ್ನು ಪೂಜಿಸೋ ದೇಶ ನಮ್ಮದು. ಈ ಘಟನೆಗೆ ಸಂಬಂಧಿಸಿದಂತೆ ಯಾರೆಲ್ಲ ಭಾಗಿಯಾಗಿದ್ದಾರೆ ಅವರೆಲ್ಲರಿಗೂ ಕಠೋರ ಶಿಕ್ಷೆ ಆಗಬೇಕು. ದೌರ್ಜನ್ಯಕ್ಕೆ ಒಳಗಾಗಿರುವ ಯುವತಿಗೆ ನ್ಯಾಯ ಸಿಗಬೇಕು ಎಂದು ನಟಿ ಹರ್ಷಿಕಾ ಪೂಣಚ್ಚ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ