ಮೈಸೂರು(ಆ.28): ಮೈಸೂರಿನ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಷಯ ತಿಳಿಯುತ್ತಲೇ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ಇಂದು ಮೈಸೂರಿಗೆ ತೆರಳಿದ್ದರು. ಘಟನೆ ಸಂಬಂಧ ಸುದ್ದಿಗೋಷ್ಠಿ ನಡೆಸಲು ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚಿಸಿದ್ದರು. ಅದರಂತೆ ಡಿಜಿಪಿ ಪ್ರವೀಣ್ ಸೂದ್ ಮೈಸೂರಿನ ಐಜಿಪಿ ಕಚೇರಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್, ಎಡಿಜಿಪಿ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.
’’ನಮ್ಮ ಸರ್ವೀಸ್ನಲ್ಲಿ 20 ಗಂಟೆಗಳಲ್ಲಿ ಈ ರೀತಿ ಪತ್ರಿಕಾಗೋಷ್ಠಿ ಮಾಡುವ ಸಂದರ್ಭ ಬಂದಿರಲಿಲ್ಲ. ಆಗಸ್ಟ್ 24ರಂದು ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಿಜಕ್ಕೂ ದುಃಖದ ಘಟನೆ. ಸಂಜೆ 7 ಗಂಟೆ ಸಮಯದಲ್ಲಿ ಸಂತ್ರಸ್ಥೆಯ ಸ್ನೇಹಿತ ಪೊಲೀಸರಿಗೆ ದೂರು ಕೊಟ್ಟಿದ್ದ. ಕಿಡಿಗೇಡಿಗರು 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಕ್ಕೆ ಈ ಘೋರ ಕೃತ್ಯ ಎಸಗಿದ್ದಾರೆ’‘ ಎಂದು ಹೇಳಿದರು.
’’ಪ್ರಕರಣವನ್ನು ಭೇದಿಸಲು ಏಳು ತಂಡಗಳನ್ನು ರಚಿಸಿ, ಕಾರ್ಯಾಚರಣೆಗೆ ಇಳಿಸಲಾಗಿತ್ತು. ಸಂತ್ರಸ್ಥೆಯಿಂದ ಯಾವುದೇ ಹೇಳಿಕೆ ಸಿಕ್ಕಿಲ್ಲ. ಆಕೆಯ ಸ್ನೇಹಿತನಿಂದ ಸ್ವಲ್ಪ ಮಾಹಿತಿ ಸಿಕ್ಕಿತ್ತು. ಆದರೆ ಅದು ಅಪೂರ್ಣವಾಗಿತ್ತು. ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದೆವು. ಆಗ ಆರೋಪಿಗಳು ಸಿಕ್ಕಿ ಬಿದ್ದರು. ನನಗೆ ಇದನ್ನು ಘೋಷಣೆ ಮಾಡೋಕೆ ಖುಷಿ ಆಗ್ತಿದೆ ಅಂತ ಹೇಳೋಕೆ ಆಗಲ್ಲ. ಈ ಕೇಸ್ನಲ್ಲಿ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ. ಹೈಕೋರ್ಟ್ ಆರ್ಡರ್ ಆಗಿರುವ ಕಾರಣಕ್ಕೆ ಈ ಸಂಬಂಧ ಹೆಚ್ಚು ಹೇಳಲು ಸಾಧ್ಯವಿಲ್ಲ’’ ಎಂದರು.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
’’ಬಂಧಿತರು 7-8ನೇ ತರಗತಿ ಓದಿದ್ದಾರೆ. ವೈರಿಂಗ್ ಮಾಡುವವರು, ಡ್ರೈವರ್ಸ್, ಕಾರ್ಮಿಕರು ಆಗಿದ್ದಾರೆ. ಒಬ್ಬನಿಗೆ 17 ವರ್ಷ ಆಗಿದೆ. ಇವರು ಆಗಾಗ್ಗೆ ಮೈಸೂರಿಗೆ ಬಂದು ಪಾರ್ಟಿ ಮಾಡುತ್ತಿದ್ದರು. ಕಂಠಪೂರ್ತಿ ಕುಡಿಯುತ್ತಿದ್ದರು. ಸಂತ್ರಸ್ಥ ಯುವತಿ ಮತ್ತು ಆಕೆಯ ಗೆಳೆಯ ಇದ್ದಾಗ ಇದೇ ಘಟನೆ ನಡೆದಿದೆ. ಇದೊಂದು ಸುಳಿವೇ ಇಲ್ಲದ ಪ್ರಕರಣ ಆಗಿದ್ದು, ವೈಜ್ಞಾನಿಕ ಸುಳಿವಿನಿಂದ ಪತ್ತೆ ಮಾಡಲಾಗಿದೆ. ಪ್ರತಾಪ್ ರೆಡ್ಡಿ ಇಲ್ಲೇ ಇದ್ದು ತನಿಖೆ ಮಾಡಿದ್ದಾರೆ’’ ಎಂದು ಹೇಳಿದರು.
’’ಗೃಹ ಸಚಿವರ ಸೂಚನೆಯಂತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ 5 ಲಕ್ಷ ಬಹುಮಾನ ನೀಡಲಾಗಿದೆ. ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇದೆ, ತನಿಖೆ ಮಾಡಲಾಗ್ತಿದೆ. ಬಂಡಿಪಾಳ್ಯ ಎಪಿಎಂಸಿಗೆ ಬಂದಾಗ ಡ್ರೈವರ್ ಜೊತೆ ಬರುತ್ತಿದ್ದರು. ಆಗಾಗ್ಗೆ ಪಾರ್ಟಿ ಮಾಡಿ ಹೋಗುತ್ತಿದ್ದರು. ಈ ಬಾರಿ ಇಂತಹ ಘೋರ ಕೃತ್ಯ ಎಸಗಿದ್ದಾರೆ’’ ಎಂದರು.
’’ಇದುವರೆಗೂ ಪ್ರಾಥಮಿಕವಾಗಿ ತನಿಖೆ ಮಾತ್ರ ನಡೆದಿದೆ. ಮೈಸೂರು ಸಿಟಿ, ದಕ್ಷಿಣ ವಲಯ ಪೊಲೀಸರು ಸೇರಿ ವಿಶೇಷ ತಂಡ ಮಾಡಲಾಗಿತ್ತು. ಒಟ್ಟು ಆರು ಜನ ಇದ್ದು, ಐದು ಮಂದಿಯ ಬಂಧನವಾಗಿದೆ. ಓರ್ವ ಎಸ್ಕೇಪ್ ಆಗಿದ್ದಾನೆ. ಆರೋಪಿಗಳು ತಮಿಳಿನಾಡಿನ ತಿರಪೂರ್ನಲ್ಲಿ ಸಿಕ್ಕಿದ್ದಾರೆ’’ ಎಂದು ಹೇಳಿದರು.
ಇದನ್ನೂ ಓದಿ:Mysuru Gang Rape Case: ರೇಪ್ ಕೇಸ್ ಸಂಬಂಧ ನಾಲ್ವರು ಶಂಕಿತರು ವಶಕ್ಕೆ; ಅಜ್ಞಾತ ಸ್ಥಳದಲ್ಲಿ ವಿಚಾರಣೆ
’’ರಾಬರಿ ಮಾಡೋಕೆ ರೇಪ್ ಮಾಡಿದ್ದಾರೆ ಎನ್ನುವ ವಿಚಾರಕ್ಕೆ, ಆಗಿರಬಹುದು ಎಂದು ಡಿಜಿ ಐಜಿಪಿ ಹೇಳಿದರು. ರಾಬರಿಗಾಗಿ ಮೂರು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಫೋನ್ ಕೂಡ ಮಾಡಿಸಿದ್ದಾರೆ. ಆ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಮಾನಸಿಕವಾಗಿ ನೋವಾಗಿರುತ್ತದೆ. ಆದಷ್ಟು ಬೇಗ ಎಫ್ ಎಸ್ ಎಲ್ ಟೀಂ ಪರಿಶೀಲಿಸಿ ಟ್ರಯಲ್ ಮಾಡಲಾಗುತ್ತೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು. ಸಂತ್ರಸ್ಥೆಯಿಂದ ಸಹಕಾರ ಸಿಗುವ ಭರವಸೆ ಇದೆ’’ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ