news18-kannada Updated:October 15, 2020, 3:47 PM IST
ಎಸ್ ಪಿ ಬಾಲಸುಬ್ರಹ್ಮಣ್ಯಂ
ಮೈಸೂರು (ಅ. 15): ಅ. 17ರಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಮೈಸೂರಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳೂ ನಡೆದಿವೆ. ಕೊರೋನಾದಿಂದಾಗಿ ಈ ಬಾರಿ ಸರಳವಾಗಿ ದಸರಾ ಉತ್ಸವವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ಹೆಚ್ಚಿನ ಜನರು ದಸರಾ ಉತ್ಸವ ನೋಡಲು ಬಾರದಿರುವಂತೆ ಮನವಿ ಮಾಡಲಾಗಿದ್ದು, ವರ್ಚುವಲ್ ದಸರಾ ಆಚರಿಸಲು ಕೋರಲಾಗಿದೆ. ಇದರ ನಡುವೆ 8 ದಿನಗಳ ಕಾಲ ಮೈಸೂರಿನ ಅರಮನೆ ಬಳಿ ನಡೆಯುವ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಒಂದು ದಿನವನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಅ. 21ರಂದು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಎಸ್ಬಿ ಬಾಲಸುಬ್ರಹ್ಮಣ್ಯ ನುಡಿನಮನ ಇರಲಿದೆ.
ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ನೆನಪಿಗಾಗಿ ಈ ವರ್ಷದ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ನುಡಿನಮನ ಏರ್ಪಡಿಸಲಾಗಿದೆ. ಮೈಸೂರು ಅರಮನೆ ಮುಂಭಾಗದಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್ಪಿಬಿ ನುಡಿ ನಮನ ಏರ್ಪಡಿಸಲಾಗಿದ್ದು, ಅ. 21ರಂದು ಗಾಯಕ ರಾಜೇಶ್ ಕೃಷ್ಣನ್ ತಂಡದವರು ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಗೀತೆಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಲಿದ್ದಾರೆ.
ಮೈಸೂರು ದಸರಾದ ಇದೇ ವೇದಿಕೆಯಲ್ಲಿ ಈ ಹಿಂದೆ ಎಸ್ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ವರ್ಷದ ದಸರಾದಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ ಗೌರವಾರ್ಥವಾಗಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ. 8 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ದಿನವನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮೀಸಲಿಡಲಾಗುವುದು.
ಇದನ್ನೂ ಓದಿ: Mysuru Dasara 2020: ಅ. 17ರಿಂದ ಮೈಸೂರಿನ ಎಲ್ಲ ಪ್ರವಾಸಿ ತಾಣಗಳು ಬಂದ್; ಇಂದಿನಿಂದ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿಷೇಧ
ಮೈಸೂರು ದಸರಾ ಉತ್ಸವ ಆರಂಭಕ್ಕೆ ಎರಡೇ ದಿನ ಬಾಕಿ ಇದೆ. ದಸರಾ ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಬರುವುದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಹಾಗೂ ಮೈಸೂರಿನಲ್ಲಿ ಕೊರೋನಾ ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅ. 17ರಿಂದ ಮೈಸೂರಿನ ಎಲ್ಲ ಪ್ರವಾಸಿ ತಾಣಗಳನ್ನೂ ಬಂದ್ ಮಾಡಲು ಆದೇಶಿಸಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ, ದಸರಾಗೆ ಸಾರ್ವಜನಿಕರನ್ನು ನಿಯಂತ್ರಿಸಲು ಮೈಸೂರು ಜಿಲ್ಲಾಡಳಿತ ಪ್ರವಾಸೋದ್ಯಮವನ್ನೇ ಬಂದ್ ಮಾಡಿದೆ.
ಅ.17ರಿಂದ ಮೈಸೂರಿನ ಎಲ್ಲ ಪ್ರವಾಸಿ ತಾಣಗಳು ಬಂದ್ ಆಗಲಿವೆ. ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ನಂಜನಗೂಡು ದೇವಾಲಯಗಳನ್ನು ಬಂದ್ ಮಾಡಲಾಗುವುದು. ನ.1ರವರೆಗೆ ಎಲ್ಲ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ದಸರಾ ರಜೆಗೆ ಮೈಸೂರಿಗೆ ಬರಬೇಡಿ ಎಂದು ಮೈಸೂರು ಜಿಲ್ಲಾಡಳಿತ ಮನವಿ ಮಾಡಿದೆ. ಈ ಬಾರಿಯ ದಸರಾವನ್ನ ವರ್ಚುವಲ್ ದಸರಾವನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಮನೆಯಲ್ಲೇ ಕುಳಿತು, ಟಿವಿಯಲ್ಲಿ ದಸರಾ ವೀಕ್ಷಿಸಲು ಕೋರಲಾಗಿದೆ.
Published by:
Sushma Chakre
First published:
October 15, 2020, 3:47 PM IST