news18-kannada Updated:October 9, 2020, 3:51 PM IST
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
ಮೈಸೂರು (ಅ. 9): ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅರಮನೆ ಪಾರಂಪರಿಕ ದಸರಾ ಕಾರ್ಯಕ್ರಮಗಳ ಪಟ್ಟಿ ಸಿದ್ದವಾಗಿದೆ. ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಜಂಬೂಸವಾರಿಯ ಗಜಪಡೆ ಅರಮನೆಗೆ ಆಗಮಿಸಿದೆ. ಕುಶಾಲುತೋಪು, ಮರಳಿನ ಮೂಟೆ ಹೊರುವ ತಾಲೀಮನ್ನು ನಡೆಸಲಾಗುತ್ತಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ. 2020ರ ನಾಡಹಬ್ಬ ದಸರಾ ಸಿಂಪಲ್ ಆಗಿ ಆಚರಿಸುತ್ತಿದ್ದರೂ ಸಾಂಪ್ರದಾಯಿಕತೆಗೆ ಧಕ್ಕೆ ಬಾರದಂತೆ ನಿಗಾ ವಹಿಸಲಾಗಿದೆ.
ಅ. 17ರಿಂದ ಅ. 26ರವರೆಗೆ ಮೈಸೂರು ಅರಮನೆಯಲ್ಲಿ ದಸರಾ ಮಹೋತ್ಸವ ನಡೆಯಲಿದೆ. ಅ. 17ರಂದು ಬೆಳಗ್ಗೆ 6.15ರಿಂದ 6.30ರ ಶುಭ ಮಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುವುದು. 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಯದುವಂಶದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಕಂಕಣಧಾರಣೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ನಡೆಯಲಿದೆ. ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಅ. 21ರಂದು ಬೆಳಗ್ಗೆ 9.45ಕ್ಕೆ ಸರಸ್ವತಿ ಪೂಜೆ, ಅಕ್ಟೋಬರ್ 25ಕ್ಕೆ ಚಂಡಿ ಹೋಮ, ಆಯುಧಗಳಿಗೆ ಪಟ್ಟದ ಆನೆ, ಕುದುರೆ, ಹಸು ವಾಹನಗಳಿಗೆ ಪೂಜೆ, ಅ. 26ರಂದು ವಿಜಯದಶಮಿ ಮೆರವಣಿಗೆ ನಡೆಯಲಿದೆ. ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನದಲ್ಲಿ ಬನ್ನಿ ಮರಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: Mysuru Dasara 2020: ಮೈಸೂರು ದಸರಾಗೆ ಸಿದ್ಧತೆ; ಮರಳಿನ ಮೂಟೆ ಹೊರುವ ತಾಲೀಮು ನಡೆಸಿದ ಗಜಪಡೆ
ಇಂದು ಮೈಸೂರಿಗೆ ಬಂದಿಳಿದ ದಸರಾ ತಾಂತ್ರಿಕ ಸಲಹಾ ಸಮಿತಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೊತೆ ಚರ್ಚೆ ನಡೆಸಿದ್ದಾರೆ. ಮೊದಲು ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿ, ನಂತರ ಚಾಮುಂಡಿಬೆಟ್ಟಕ್ಕೆ ತೆರಳಿದ್ದಾರೆ. ನಂತರ ಅರಮನೆಗೆ ಭೇಟಿನ ನೀಡಿದ್ದಾರೆ. ಡಾ. ಸುದರ್ಶನ್ ನೇತೃತ್ವದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಂಡ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮ ಕುರಿತು ಮಾಹಿತಿ ಪಡೆದಿದೆ.
ಇಂದು ಗಜಪಡೆಗೆ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು. ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಗೂ ತಾಲೀಮು ನಡೆಸಲಾಯಿತು. ವಿಕ್ರಮ ಆನೆಗೆ ಮರಳು ಮೂಟೆ ಹೊರಿಸಿ ಅದರ ಮೇಲೆ ತೊಟ್ಟಿಲು ಇಟ್ಟು ತಾಲೀಮು ನಡೆಸಲಾಯಿತು. ಅರಮನೆ ಆವರಣದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದಸರಾ ಆನೆಗಳಾದ ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಹಾಗೂ ವಿಜಯ ಮೊದಲ ದಿನದ ತಾಲೀಮು ನಡೆಸಿದವು.
Published by:
Sushma Chakre
First published:
October 9, 2020, 1:58 PM IST