Mysuru Dasara 2020: ಮೈಸೂರು ದಸರಾ; ಅಂಬಾರಿ ಹೊರಲು ಗಜಪಡೆಯ ಹೊಸ ಕ್ಯಾಪ್ಟನ್ ಅಭಿಮನ್ಯು ಸಜ್ಜು

Mysore Dasara 2020 Date: ಮಹಾನ್ ಬಲಶಾಲಿಯಾಗಿರುವ ಅಭಿಮನ್ಯು ಇದುವರೆಗೂ 100 ಆನೆ 40ಕ್ಕೂ ಹೆಚ್ಚು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ. ಶಿಸ್ತು, ಗಾಂಭೀರ್ಯಕ್ಕೆ ಹೆಸರಾದ ಅಭಿಮನ್ಯು ಈ ಬಾರಿಯ ಮೈಸೂರು ದಸರಾ ಅಂಬಾರಿಯನ್ನು ಹೊರಲಿದ್ದಾನೆ.

news18-kannada
Updated:September 23, 2020, 12:57 PM IST
Mysuru Dasara 2020: ಮೈಸೂರು ದಸರಾ; ಅಂಬಾರಿ ಹೊರಲು ಗಜಪಡೆಯ ಹೊಸ ಕ್ಯಾಪ್ಟನ್ ಅಭಿಮನ್ಯು ಸಜ್ಜು
ದಸರಾ ಅಂಬಾರಿ ಹೊರುವ ಆನೆ ಅಭಿಮನ್ಯು
  • Share this:
ಮೈಸೂರು (ಸೆ. 23): ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಸಕಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಕೊರೋನಾ ಭೀತಿಯಿಂದಾಗಿ ಈ ಬಾರಿ ಸರಳವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಈಗಾಗಲೇ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊರಲು ಅಭಿಮನ್ಯು ಆನೆಯನ್ನು ತಯಾರುಗೊಳಿಸಲಾಗುತ್ತಿದೆ. ಗಜಪಡೆಯ ನೂತನ ಸಾರಥಿ ಅಭಿಮನ್ಯು ದಸರಾಗೆ ಸಜ್ಜಾಗುತ್ತಿದ್ದಾನೆ. ಮೈಸೂರಿಗೆ ಬರಲು ಅಭಿಮನ್ಯು ಸಕಲ ಸಿದ್ದತೆ ನಡೆಸಿದ್ದು, ಮಿನಿ ಗಜಪಡೆಯ ಹೊಸ ದಂಡನಾಯಕ ಅಭಿಮನ್ಯುಗೆ ಈ ವರ್ಷ ಅಂಬಾರಿ ಹೊರುವ ಅದೃಷ್ಟ ಖುಲಾಯಿಸಿದೆ. ಕಾಡಾನೆ, ಹುಲಿಗಳ ಆರ್ಭಟಕ್ಕೆ ಅಂಕುಶ ಹಾಕುತ್ತಿದ್ದ ಸರದಾರ ಈ ಅಭಿಮನ್ಯು. ಸದ್ಯದ ಗಜಪಡೆಯ ಮಹಾನ್ ಬಲಶಾಲಿಯಾಗಿರುವ ಅಭಿಮನ್ಯು ಇದುವರೆಗೂ 100 ಆನೆ 40ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ. ಶಿಸ್ತು, ಗಾಂಭೀರ್ಯಕ್ಕೆ ಹೆಸರಾದ ಅಭಿಮನ್ಯು ಈ ಬಾರಿಯ ಮೈಸೂರು ದಸರಾ ಅಂಬಾರಿಯನ್ನು ಹೊರಲಿದ್ದಾನೆ.

ಆನೆಗಳ ಕ್ಯಾಂಪ್​ನಿಂದಲೇ ಸರಳ ದಸರಾಗೆ ರೆಡಿಯಾಗುತ್ತಿರುವ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಅ. 2ರಂದು ಮೈಸೂರು ಅರಮನೆಯ ಅಂಗಳಕ್ಕೆ ಆಗಮಿಸಲಿದ್ದಾನೆ. ಈ ಬಾರಿ ದಸರಾ ಗಜಪಡೆ ಕ್ಯಾಪ್ಟನ್ ಆಗಿದ್ದ ಅರ್ಜುನ ನಿವೃತ್ತಿಯಾಗಿರುವುದರಿಂದ ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಈ ವರ್ಷ ಗಜಪಡೆ ಹೊಸ ಕ್ಯಾಪ್ಟನ್ ಆಗಿ ಅಭಿಮನ್ಯುಗೆ ಪ್ರಮೋಷನ್ ಸಿಕ್ಕಿದೆ. ಮಾವುತ ವಸಂತನಿಂದ ಅಭಿಮನ್ಯುಗೆ ಟ್ರೈನಿಂಗ್ ಕೊಡಿಸಲಾಗುತ್ತಿದೆ. ಅಭಿಮನ್ಯುಗೆ ಸರಳ ದಸರಾದಲ್ಲಿ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಸಾಥ್ ನೀಡಲಿದ್ದಾರೆ. 54 ವರ್ಷ ವಯಸ್ಸಾಗಿರುವ ಅಭಿಮನ್ಯುಗೆ ಮುಂದಿನ ಆರು ವರ್ಷಗಳ ಕಾಲ ಅಂಬಾರಿ ಹೊರುವ ಅದೃಷ್ಟ ಲಭಿಸಲಿದೆ.

ಗಜಪಡೆಯ ಆಗಮನಕ್ಕೆ ಅರಮನೆ ಅಂಗಳ ಸಜ್ಜಾಗಿದೆ. ಅ. 2ರಂದು ಅರಮನೆಗೆ ಎಂಟ್ರಿ ಕೊಡುವ ಗಜಪಡೆಗಾಗಿ ವಿಶೇಷ ರಸ್ತೆ ನಿರ್ಮಿಸಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಿಸಿ ವಾಕಿಂಗ್‌ಗೆ ಅನುವು ಮಾಡಿಕೊಡಲಾಗಿದೆ. ಕಾಡಿನಿಂದ ನಾಡಿಗೆ ಬರುವ ಗಜಪಡೆಗೆ ನಗರಕ್ಕೆ ಹೊಂದಿಕೊಳ್ಳುವ ಹಿನ್ನಲೆ ರಸ್ತೆ ಪರಿಚಯ ಮಾಡಿಸಲು ಅರಮನೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇದೇ ಕಾಂಕ್ರೀಟ್ ರಸ್ತೆಯಲ್ಲಿ ಅರಮನೆಯಲ್ಲಿ ಗಜಪಡೆಯ ತಾಲೀಮು ನಡೆಸಲಿದೆ. ತಾಲೀಮಿನ ಜೊತೆಗೆ ಇದೇ ರಸ್ತೆಯ ಮಾದರಿಯಲ್ಲಿ ಜಂಬೂ ಸವಾರಿ ನಡೆಯಲಿದೆ. ಮಾವುತರಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಲು ಸಿದ್ದತೆ ನಡೆಸಲಾಗಿದೆ.



ಈ ಬಾರಿ ಸರಳ ಮತ್ತು ಸಾಂಪ್ರದಾಯಕವಾಗಿ ನಾಡಹಬ್ಬ ದಸರಾ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೈಸೂರು ಜಿಲ್ಲಾಡಳಿತದಿಂದ ಆರು ದಸರಾ ಉಪಸಮಿತಿಗಳನ್ನ ರಚನೆ ಮಾಡಲಾಗಿದೆ. ಸ್ವಾಗತ ಮತ್ತು ಅಮಂತ್ರಣ ಸಮಿತಿ, ದೀಪಾಲಂಕಾರ ಸಮಿತಿ, ಸ್ವಚ್ಚತೆ ಮತ್ತು ವ್ಯವಸ್ಥೆ ಸಮಿತಿ, ಸ್ಥಬ್ದ ಚಿತ್ರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿಗಳ ರಚನೆ ಮಾಡಲಾಗಿದೆ. ಉಪಸಮಿತಿಗಳ ಉಪವಿಶೇಷಧಿಕಾರಿ, ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರ ನೇಮಕವನ್ನೂ ಮಾಡಲಾಗಿದೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿ ಬಿ. ಶರತ್ ಆದೇಶ ಹೊರಡಿಸಿದ್ದಾರೆ. ಎಲ್ಲ ಉಪಸಮಿತಿಗಳಿಗು ಸರ್ಕಾರಿ ಅಧಿಕಾರಿಗಳೇ ಸದಸ್ಯರಾಗಿರಲಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರೇತರ ಸದಸ್ಯರಿಗೆ ಈ ಬಾರಿ ಅವಕಾಶ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಬಿ.ಶರತ್‌ ಆದೇಶ ಹೊರಡಿಸಿದ್ದಾರೆ.
Published by: Sushma Chakre
First published: September 23, 2020, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading