news18-kannada Updated:October 2, 2020, 1:42 PM IST
ಮೈಸೂರು ಅರಮನೆ
ಮೈಸೂರು (ಅ. 2): ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಗಜಪಡೆಗೆ ಅರಮನೆಯಲ್ಲಿ ಇಂದು ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸ್ವಾಗತ ಕೋರಲಾಯಿತು. ಜಯಮಾರ್ತಾಂಡ ದ್ವಾರದ ಬಳಿ ಅಭಿಮನ್ಯು ಟೀಂಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಅಂಬಾರಿ ಆನೆ ಅಭಿಮನ್ಯುಗೆ ಕಾವೇರಿ, ವಿಜಯ, ವಿಕ್ರಮ, ಗೋಪಿ ಆನೆಗಳು ಸಾಥ್ ನೀಡಿವೆ.
ಮೈಸೂರು ಅರಮನೆ ಮುಂಭಾಗದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಗಜಪಡೆಗೆ ಪೂಜೆ ಸಲ್ಲಿಸಿದರು. ಸಂಪ್ರದಾಯದಂತೆ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು. ಜಿಲ್ಲಾ ಮಂತ್ರಿಗಳಿಗೆ ಶಾಸಕರಾದ ರಾಮದಾಸ್, ಜಿಟಿಡಿ ಹಾಗೂ ನಾಗೇಂದ್ರ ಸಾಥ್ ನೀಡಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತರಾದ ಚಂದ್ರಗುಪ್ತ ಸೇರಿ ಹಲವು ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಮನೆಯಿಂದ ಹೊರಹೋಗುವ ಮುನ್ನ ಎಚ್ಚರ!; ಮಾಸ್ಕ್ ಧರಿಸದಿದ್ದರೆ 1,000 ರೂ. ದಂಡ
ಅರಮನೆಗೆ ಗಜಪಡೆ ಅರಮನೆ ಪ್ರವೇಶಕ್ಕೂ ಮುನ್ನ ಅರಣ್ಯ ಭವನದಲ್ಲಿ ಸಿದ್ಧತೆ ನಡೆಸಲಾಯಿತು. ಅಭಿಮನ್ಯು ಮತ್ತು ತಂಡಕ್ಕೆ ಸಾಂಪ್ರದಾಯಿಕ ವಸ್ತ್ರಗಳನ್ನು ತೊಡಿಸಿ ಮಾವುತರು ಮತ್ತು ಕಾವಾಡಿಗಳು ಗಜಪಡೆಯನ್ನು ಸಿದ್ಧಗೊಳಿಸಿದ್ದರು. ಸಾಂಪ್ರದಾಯಿಕ ವಸ್ತ್ರಗಳಿಂದ ಸಿಂಗಾರಗೊಂಡಿರೋ ಅಭಿಮನ್ಯು ಮತ್ತು ತಂಡ ಇಂದು ಅರಮನೆ ಆವರಣವನ್ನು ಪ್ರವೇಶಿಸಿತು. ಸಾಂಪ್ರದಾಯದಂತೆ ಅರಮನೆ ಪ್ರವೇಶಕ್ಕೂ ಮುನ್ನ ಅರಣ್ಯ ಭವನದಲ್ಲಿ ಗಜಪಡೆಗೆ ಪೂಜೆ ಸಲ್ಲಿಕೆ ಮಾಡಲಾಯಿತು. ಅರಣ್ಯಾಧಿಕಾರಿ ಹೀರಲಾಲ್, ಉಪಸಂರಕ್ಷಣಾ ಅಧಿಕಾರಿ ಅಲೆಕ್ಸಾಂಡರ್ ನೇತೃತ್ವದಲ್ಲಿ ಪೂಜೆ ನೆರವೇರಿತು.
ಮತ್ತಿಗೋಡು ಆನೆ ಕ್ಯಾಂಪಿನಲ್ಲಿರುವ ಅಂಬಾರಿ ಹೊರುವ ಆನೆ ಅಭಿಮನ್ಯು (54), ಕುಶಾಲನಗರ ಆನೆಕಾಡು ಕ್ಯಾಂಪ್ನ ವಿಕ್ರಂ (40) ಮತ್ತು ವಿಜಯ (61), ದುಬಾರೆ ಆನೆ ಕ್ಯಾಂಪಿನಿಂದ ಗೋಪಿ (39) ಮತ್ತು ಕಾವೇರಿ (50) ಆನೆಗಳು ಇಂದು ಮೈಸೂರು ಅರಮನೆ ಆವರಣವನ್ನು ಪ್ರವೇಶಿಸಿವೆ. ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಯಲಿರುವ ಜಂಬೂಸವಾರಿಯಲ್ಲಿ ಪ್ರಥಮ ಬಾರಿ ಚಿನ್ನದ ಅಂಬಾರಿ ಹೊರಲಿರುವ 5,400 ರಿಂದ 5,600 ಕೆ.ಜಿ. ತೂಕದ ಅಭಿಮನ್ಯು ಆನೆಯನ್ನು, 1970ರಲ್ಲಿ ಹೆಬ್ಬಳ್ಳ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
Published by:
Sushma Chakre
First published:
October 2, 2020, 1:42 PM IST