ಮೈಸೂರು(ಸೆ.08): ಒಂದು ವೇಳೆ ಕೊರೋನಾ ಎಂಬ ಮಹಾಮಾರಿ ಈ ಜಗತ್ತಿಗೆ ಕಾಲಿಟ್ಟಿರದಿದ್ದರೆ, ಇಷ್ಟೊತ್ತಿಗೆ ಸಾಂಸ್ಕೃತಿಕ ನಗರಿ ಮೈಸೂರು ದಸರಾ ಸಂಭ್ರಮದಲ್ಲಿ ಮುಳುಗಿರುತ್ತಿತ್ತು. ಗಜಪಡೆ ಇಷ್ಟೊತ್ತಿಗಾಗಲೇ ಕಾಡಿನಿಂದ ನಾಡಿಗೆ ಆಗಮಿಸಿ, ರಾಜಬೀದಿಯಲ್ಲಿ ಗಾಂಭೀರ್ಯದಿಂದ ತಾಲೀಮು ನಡೆಸುತ್ತಿದ್ದವು. ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಹ ದಸರಾ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆದರೆ ಕೊರೋನಾ ಕಾರಣದಿಂದಾಗಿ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಚಟುವಟಿಕೆಗಳು ಕಳೆಗುಂದಿವೆ. ಇನ್ನೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಅಂತಿಮ ನಿರ್ಧಾರ ಮಾಡಿಲ್ಲ. ಈ ಬಾರಿಯ ದಸರೆಯಲ್ಲಿ ಜಂಬೂ ಸವಾರಿ ಇರಲಿದೆಯಾ ಎಂಬ ಬಗ್ಗೆ ಇಂದು ಅಂತಿಮ ತೀರ್ಮಾನವಾಗಲಿದೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ದಸರಾ ಹೈಪವರ್ ಮೀಟಿಂಗ್(ದಸರಾ ಉನ್ನತ ಮಟ್ಟದ ಸಭೆ) ನಡೆಯಲಿದೆ. ಮುಖ್ಯಮಂತ್ರಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ನಡೆಯುವ ಸಭೆಯಲ್ಲಿ ದಸರಾ ಆಚರಣೆಯ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.
ಈ ಬಾರಿಯ ನಾಡಹಬ್ಬ ದಸರಾದಲ್ಲಿ ಜಂಬೂ ಸವಾರಿ ಇರಲಿದೆಯಾ? ಇದ್ದರೂ ಸಹ ಕೇವಲ ಅರಮನೆಗೆ ಮಾತ್ರ ಸೀಮಿತವಾಗಲಿದೆಯಾ?ಅದ್ದೂರಿ ದಸರವಾ? ಅಥವಾ ಸರಳ ದಸರಾವಾ? ಈ ಬಾರಿಯ ದಸರಾ ಉದ್ಘಾಟಕರು ಯಾರು? ಈ ಸಲ ದಸರಾ ಬಜೆಟ್ ಎಷ್ಟು? ಈ ಬಾರಿಯ ದಸರಾ ಮಹೋತ್ಸವದಲ್ಲಿ ಎಷ್ಟು ಆನೆಗಳು ಇರಬೇಕು? ಎಲ್ಲಾ ವಿಚಾರಗಳ ಬಗ್ಗೆಯೂ ಇಂದೇ ಅಂತಿಮ ತೀರ್ಮಾನವಾಗಲಿದೆ. ಮೈಸೂರು ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೊರೋನಾ ನಡುವೆ ನಾಡಹಬ್ಬ ದಸರಾ ಆಚರಣೆ ಹೇಗಿರಲಿದೆ ಎಂಬುದು ಇಂದು ನಿರ್ಧಾರವಾಗಲಿದೆ.
ಇನ್ನು, ಮೈಸೂರು ದಸರಾದ ಕೇಂದ್ರ ಆಕರ್ಷಣೆಯ ಬಿಂದು ಎಂದರೆ ಅದು ಜಂಬೂ ಸವಾರಿ. ಜಂಬೂ ಸವಾರಿಯೇ ದಸರಾ ಮಹೋತ್ಸವದ ಕಳಶ. ಪ್ರತಿ ವರ್ಷ ಈ ಜಂಬೂ ಸವಾರಿ ನೋಡಲೆಂದೇ ದೇಶ-ವಿದೇಶ ಸೇರಿದಂತೆ, ರಾಜ್ಯದ ನಾನಾ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಲಕ್ಷಾಂತರ ಮಂದಿ ಜಂಬೂ ಸವಾರಿಯನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಈವರೆಗೆ ಅರ್ಜುನ ಆನೆ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಸಾಗುತ್ತಿತ್ತು. ಇದನ್ನು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಆದರೆ ಈ ಬಾರಿಯ ದಸರೆಯಲ್ಲಿ ಈ ಭಾಗ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲವೇ ಎಂಬ ಅನುಮಾನ ಮೂಡಿದೆ. ಜಂಬೂಸವಾರಿಯ ರೂಪುರೇಷೆಯೂ ಸಹ ಇಂದೇ ನಿರ್ಧಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ