news18-kannada Updated:October 3, 2020, 3:12 PM IST
ಮಾವುತರು ಮತ್ತು ಕಾವಾಡಿಗರಿಗೆ ಕೊರೋನಾ ಟೆಸ್ಟ್
ಮೈಸೂರು(ಅ.03): ಕೊರೋನಾ ನಡುವೆ ಮೈಸೂರು ದಸರಾ ಆಚರಿಸುತ್ತಿರುವ ಮೈಸೂರು ಜಿಲ್ಲಾಡಳಿತಕ್ಕೆ ಕೊರೋನಾ ನಿಯಮಗಳ ಪಾಲನೆ ತಲೆನೋವಾಗಿ ಪರಿಣಮಿಸಿದೆ. ದಸರಾ ಭಾಗವಾಗಿರುವ ಆನೆಗಳ ಮಾವುತರು, ಕಾವಾಡಿಗಳಿಗೆ ಇಂದು ಕೊರೋನಾ ಟೆಸ್ಟ್ ಮಾಡಿಸಲು ಮುಂದಾದ ಆರೋಗ್ಯ ಇಲಾಖೆಗೆ ಮಾವುತರು ಹಾಗೂ ಕಾವಾಡಿಗಳ ಅಸಹಕಾರ ಎದುರಾಗಿತ್ತು. ಒಲ್ಲದ ಮನಸ್ಸಿನಿಂದಲೇ ನಡೆದ ಕೊರೋನಾ ಟೆಸ್ಟ್ನಲ್ಲಿ ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಮೈಸೂರು ದಸರಾಗಾಗಿ ಅರಮನೆಗೆ ಬಂದಿಳಿದಿರುವ ಗಜಪಡೆಯ ಟೀಂ ಇಂದು ರಿಲ್ಯಾಕ್ಸ್ ಮೂಡ್ನಲ್ಲಿತ್ತು. ಬೆಳಗ್ಗೆಯೇ ಆನೆಗಳಿಗೆ ಮಜ್ಜನ ಮಾಡಿಸಿದ ಮಾವುತರು, ಕಾವಾಡಿಗಳು ಆನೆಗಳನ್ನ ಶುಚಿಗೊಳಿಸಿ ಹಾರೈಕೆ ಮಾಡಿದರು. ಬೆಲ್ಲ,ಭತ್ತ, ಹುಲ್ಲು ಮಿಶ್ರಣ ಮಾಡಿದ ಪೌಷ್ಠಿಕ ಆಹಾರ ನೀಡಿ ಆನೆಗಳನ್ನ ಪೋಷಣೆ ಮಾಡಿದರು. ಮೊದಲ ದಿನ ಸಿಂಪಲ್ ವಾಕಿಂಗ್ ಮಾಡಿದ ಆನೆಗಳು ಅರಮನೆ ಆವರಣದಲ್ಲೆ ವಿಶ್ರಾಂತಿ ಪಡೆದವು. ಆರೋಗ್ಯ ಇಲಾಖೆಯ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಆನೆಗಳು ಓಡಾಡುವ ಜಾಗದಲ್ಲಿ ಸ್ಯಾನಿಟೈಸ್ ಮಾಡಿದರು. ಪಾದಚಾರಿ ಮಾರ್ಗ ಸೇರಿದಂತೆ ಆನೆಗಳ ಟೆಂಟ್ ಬಳಿಯೂ ಸ್ಯಾನಿಟೈಸ್ ಮಾಡಿ ಶುಚಿಗೊಳಿಸಿದರು.
ಇನ್ನು ಕೊರೋನಾ ನಡುವೆ ದಸರಾ ಆಚರಿಸುತ್ತಿರುವುದರಿಂದ ಮೊಟ್ಟಮೊದಲು ಕೊರೋನಾ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿತ್ತು. ನಿನ್ನೆಯಷ್ಟೆ ಅರಮನೆಗೆ ಬಂದ ಗಜಪಡೆಯ ಮಾವುತ ಹಾಗೂ ಕಾವಾಡಿಗಳಿಗೆ ಇಂದು ಕೊರೋನಾ ಟೆಸ್ಟ್ ಕ್ಯಾಂಪ್ ಆಯೋಜಿಸಲಾಗಿತ್ತು. ಆದ್ರೆ ಮೊದಲು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪದ ಮಾವುತ ಹಾಗೂ ಕಾವಾಡಿಗಳು ನಾವು ಚೆನ್ನಾಗಿಯೇ ಇದ್ದೇವೆ, ನಮಗೆ ಯಾಕೆ ಕೊರೊನಾ ಟೆಸ್ಟ್? ಅಂತ ಟೆಸ್ಟ್ಗೆ ನಕಾರ ವ್ಯಕ್ತಪಡಿಸಿದ್ದರು. ಸ್ವತಃ ಡಿಹೆಚ್ಓ ಹೇಳಿದರೂ ಆಗಲ್ಲ ಎಂದಿದ್ದ ಮಾವುತ ಹಾಗೂ ಕಾವಾಡಿಗಳು ಒಂದು ಗಂಟೆಗೂ ಹೆಚ್ಚು ಕಾಲ ಟೆಸ್ಟ್ ಮಾಡಿಸಿಕೊಳ್ಳಲೇ ಇಲ್ಲ. ಆ ನಂತರ ಬಂದ ಡಿಸಿಎಫ್ ಅಲೆಕ್ಸಾಂಡರ್ ಕಾವಾಡಿಗಳ ಮನವೊಲಿಸಿ ಟೆಸ್ಟ್ಗೆ ಒಪ್ಪಿಸಿದರು. ಆ ನಂತರ ಸ್ಥಳದಲ್ಲಿದ್ದ 19 ಮಂದಿ ಮಾವುತ, ಕಾವಾಡಿ, ಸಹಾಯಕ ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿಗಳ ಕೊರೋನಾ ಟೆಸ್ಟ್ ನಡೆಸಲಾಯಿತು.
ಉತ್ತರ ಪ್ರದೇಶ ರಾಮ ರಾಜ್ಯವಲ್ಲ, ರಾವಣ ರಾಜ್ಯ; ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕಿಡಿ
ಆಂಟಿಜನ್ ಕಿಟ್ನಲ್ಲಿ ನಡೆಸಿದ ಕೊರಓನಾ ಟೆಸ್ಟ್ನ ರಿಸಲ್ಟ್ ಅರ್ಧ ಗಂಟೆಯಲ್ಲೆ ಲಭ್ಯವಾಯಿತು. ಟೆಸ್ಟ್ ಮಾಡಿಸಿದ 19 ಮಂದಿ ಮಾವುತ, ಕಾವಾಡಿ ಹಾಗೂ ಸಹಾಯಕ ಸಿಬ್ಬಂದಿಗಳ ಕೊರಓನಾ ವರದಿ ನೆಗೆಟಿವ್ ಆಗಿತ್ತು. ಎಲ್ಲರ ಆರೋಗ್ಯ ತಪಾಸಣೆ ನಂತರ ಇಂದಿನಿಂದಲೇ ಅರಮನೆಯಲ್ಲಿ ಆನೆಗಳಿಗೆ ತಾಲೀಮು ಆರಂಭಿಸಲು ನಿರ್ಧರಿಸಿದರು. ಇಷ್ಟು ವರ್ಷ ಅರಮನೆಗೆ ಬಂದ ಆನೆಗಳು ಮರು ದಿನ ತೂಕ ಪರೀಕ್ಷೆಯಲ್ಲಿ ತೊಡಗುತ್ತಿದ್ದವು. ಆದ್ರೆ ಈ ವರ್ಷ ಮಾತ್ರ ಆನೆಗಳು ರಿಲ್ಯಾಕ್ಸ್ ಮೂಡ್ನಲ್ಲಿದ್ದು, ಅವುಗಳ ಮಾವುತ, ಕಾವಾಡಿಗಳು ಮಾತ್ರ ಕೊರೋನಾ ಪರೀಕ್ಷೆ ಎದುರಿಸಿದರು.
ಒಟ್ಟಾರೆ ಮೈಸೂರು ದಸರಾ ಕೊರಓನಾ ನಡುವೆಯೇ ನಡೆಯಬೇಕಿದೆ. ಹೀಗಾಗಿ ಕೋವಿಡ್-19 ನಿಯಮಗಳ ಪಾಲನೆ ಅನಿವಾರ್ಯವಾಗಿದೆ. ಸದ್ಯಕ್ಕೆ ಮಾವುತರಿಗೆ ಕೊರೋನಾ ಇಲ್ಲ ಎಂಬುದು ದೃಢಪಟ್ಟಿರುವುದರಿಂದ ನಾಳೆಯಿಂದ ನೆಮ್ಮದಿಯಾಗಿ ತಾಲೀಮಿನಲ್ಲಿ ಭಾಗಿಯಾಗಬಹುದಾಗಿದೆ. ಅದೇನೆ ಇದ್ದರೂ ದಿನೇ ದಿನೇ ದಸರಾ ಕಳೆಗಟ್ಟುತ್ತಿದ್ದು ಕೊರೋನಾ ನಡುವೆ ದಸರಾ ಸಂಭ್ರಮ ಮನೆ ಮಾಡುತ್ತಿದೆ.
Published by:
Latha CG
First published:
October 3, 2020, 3:12 PM IST