• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬ್ರೈಲ್ ಲಿಪಿ ಬಳಸದೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದ ಚಾಮರಾಜನಗರದ ಅಂಧ ವಿದ್ಯಾರ್ಥಿ

ಬ್ರೈಲ್ ಲಿಪಿ ಬಳಸದೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದ ಚಾಮರಾಜನಗರದ ಅಂಧ ವಿದ್ಯಾರ್ಥಿ

ಪಿಹೆಚ್​ಡಿ ಪಡೆದ ಮನು ಕುಮಾರ್

ಪಿಹೆಚ್​ಡಿ ಪಡೆದ ಮನು ಕುಮಾರ್

ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಎಚ್.ಎನ್. ಮನು ಕುಮಾರ್ ಕಣ್ಣು ಕಾಣದಿದ್ದರೂ ಬ್ರೈಲ್ ಲಿಪಿ ಬಳಸದೆ ಸ್ಕ್ರೈಬ್ ಗಳನ್ನು ಬಳಸಿಕೊಂಡು ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.

  • Share this:

ಚಾಮರಾಜನಗರ (ಡಿ. 12): ಸಾಧಿಸುವ ಛಲವೊಂದಿದ್ದರೆ ಅಂಗವೈಕಲ್ಯವಾಗಲಿ, ಅಂಧತ್ವವಾಗಲಿ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಚಾಮರಾಜನಗರ ಜಿಲ್ಲೆಯ ಅಂಧ ವಿದ್ಯಾರ್ಥಿಯೊಬ್ಬರು ಸಾಕ್ಷಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಎಚ್.ಎನ್. ಮನು ಕುಮಾರ್ ಕಣ್ಣು ಕಾಣದಿದ್ದರೂ ಬ್ರೈಲ್ ಲಿಪಿ ಬಳಸದೆ ಸ್ಕ್ರೈಬ್ ಗಳನ್ನು ಬಳಸಿಕೊಂಡು ಮಹಾಪ್ರಬಂಧವೊಂದನ್ನು ಮಂಡಿಸಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆಯುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾರೆ.


ರಾಜ್ಯಶಾಸ್ತ್ರ ವಿಷಯದಲ್ಲಿ ಚಾಮರಾಜನಗರ ಜಿಲ್ಲೆಯ ದಿವ್ಯಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಧೆಗಳ ಪಾತ್ರ  ಎಂಬ ಮಹಾಪ್ರಬಂಧವನ್ನು ಮೈಸೂರು ವಿವಿ ಸಂಜೆ ಕಾಲೇಜಿನ ರಾಜ್ಯಶಾಸ್ತ್ರ  ಸಹ ಪ್ರಾಧ್ಯಾಪಕ ಡಾ.ಆರ್.ಎನ್. ದಿನೇಶ್ ಅವರ ಮಾರ್ಗದರ್ಶನದಲ್ಲಿ  ಮೂರೂವರೆ ವರ್ಷಗಳ ಅವಧಿಯಲ್ಲಿ  105 ಶಾಲೆಯ 354ಕ್ಕೂ ಹೆಚ್ಚು  ಮಕ್ಕಳನ್ನು ಖುದ್ದಾಗಿ ಸಂದರ್ಶಿಸಿ  ಸಂಶೋಧನಾ ಪ್ರಬಂಧ ಮಂಡಿಸಿ, ಪಿಎಚ್‌ಡಿ ಪಡೆದು  ಸಾಧನೆ ಮಾಡಿದ್ದಾರೆ.


ಮನು ಕುಮಾರ್ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಹಂಗಳ ಗ್ರಾಮದಲ್ಲಿ  ಪ್ರಾಥಮಿಕ ಶಿಕ್ಷಣ  ಚಾಮರಾಜನಗರದ ಕ್ರಿಸ್ತರಾಜ ಬಾಲರಪಟ್ಟಣ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ, ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಜೆ.ಎಸ್.ಎಸ್. ಹಾಗೂ ಸರ್ಕಾರಿ ಪದವಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ  ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ..  2016ರಲ್ಲಿ ಕೆ ಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಇದೀಗ  ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆಯುವ ಮೂಲಕ ಸಾಧನೆಗೈದಿದ್ದಾರೆ.


ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿ, ಮಲೆನಾಡು, ಕೊಡಗಿನಲ್ಲಿ ಇಂದು ಹಗುರ ಮಳೆ ಸಾಧ್ಯತೆ


ಟೇಪ್ ರೆಕಾರ್ಡರ್ ಹಾಗೂ ಮೊಬೈಲ್ ಸಹಾಯದ ಮೂಲಕ ಧ್ವನಿ ಮುದ್ರಿಸಿಕೊಂಡು, ಆಡಿಯೋ ಪುಸ್ತಕಗಳನ್ನು ಕೇಳಿ ಸಾಮಾನ್ಯ ಶಾಲೆಯಲ್ಲೇ ಕಲಿತು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ  ಮೈಸೂರು ವಿವಿಯಿಂದ ಎರಡು ಚಿನ್ನದ ಪದಕ, ಮೂರು ನಗದು ಬಹುಮಾನ ಪಡೆದಿರುವ ಮನು ಕುಮಾರ್  ಬ್ರೈಲ್ ಲಿಪಿಯನ್ನು ಬಳಸದೇ ಸ್ಕ್ರೈಬ್ ಗಳ ಮೂಲಕವೇ ಎಲ್ಲಾ ಪರೀಕ್ಷೆಗಳನ್ನು ಎದುರಿಸಿದ್ದಾರೆ.


ಮನಸ್ಸಿದ್ದರೆ ಮಾರ್ಗ, ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎನ್ನುವ ಮನು ಕುಮಾರ್, ಪಿ.ಎಚ್.ಡಿ ಮಾಡುವ ಗುರಿ ಇತ್ತು. ಇದೀಗ ಈ ಗುರಿ ಈಡೇರಿದೆ. ನನ್ನ ಸಂಶೋಧನಾ ಅಧ್ಯಯನದಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಸರ್ಕಾರ  ಪರಿಗಣಿಸಿ ವಿಕಲಚೇತನರಿಗೆ ವಿಶೇಷ ಶಾಲೆಗಳನ್ನು ತೆರೆಯಲು  ಕ್ರಮ ಕೈಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.


ಹಂಗಳ ಗ್ರಾಮದ ನಾಗಪ್ಪ , ಪಾರ್ವತಿ ದಂಪತಿಗೆ ಎಚ್.ಎನ್ ಮನು ಕುಮಾರ್ ಏಕೈಕ ಪುತ್ರ. ನಾಗಪ್ಪ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಕೆಲಸದ ಒತ್ತಡದಿಂದಾಗಿ ಮಗನನ್ನು 7ನೇ ತರಗತಿ ಓದುತ್ತಿದ್ದಾಗಲೇ   ಶಾಲೆ ಬಿಡಿಸಲು  ತೀರ್ಮಾನಿಸಿದ್ದೆ. ಆದರೆ ಓದಲೇಬೇಕೆಂದು ಹಠ ಹಿಡಿದು ಇಂದು ಈ ಸಾಧನೆ ಮಾಡಿದ್ದಾನೆ  ತುಂಬಾ ಖುಷಿಯಾಗುತ್ತಿದೆ ಎಂದು  ನಾಗಪ್ಪ ಅವರು ನ್ಯೂಸ್ 18 ಕನ್ನಡದ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.


(ವರದಿ: ಎಸ್.ಎಂ. ನಂದೀಶ್ )

Published by:Sushma Chakre
First published: