ಮೃತ್ಯುಕೂಪವಾದ ಬೆಂಗಳೂರು-ಮೈಸೂರು ಹೆದ್ದಾರಿ; ಸ್ವಲ್ಪ ಯಾಮಾರಿದರೂ ಶಿವನ ಪಾದವೇ ಗತಿ!

ಜನರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ ರಸ್ತೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಆದರೆ, ಅದೇ ಕೆಲಸದಿಂದ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುವುದು ಎಷ್ಟು ಸರಿ. ಬಡಪಾಯಿಗಳ ಶವದ ಮೇಲೆ ರಸ್ತೆ ಮಾಡುವ ಬದಲು ರಸ್ತೆ ಸುರಕ್ಷತಾ ಕ್ರಮಗಳು ಶೀಘ್ರ ಅನುಷ್ಠಾನಗೊಳ್ಳಲಿ. ಕೆಲಸ ಬೇಗ ಮುಗಿಸಿ, ಗುರಿ ಮುಟ್ಟಿ ಸರ್ಕಾರದಿಂದ ಶಹಬ್ಬಾಸ್​ಗಿರಿ ಪಡೆಯುವುದರ ಜೊತೆಗೆ ಜನರ ಅಮೂಲ್ಯ ಪ್ರಾಣದ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಲಿ.

ಮೈಸೂರು-ಬೆಂಗಳೂರು ರಸ್ತೆ (ಸಂಗ್ರಹ ಚಿತ್ರ)

ಮೈಸೂರು-ಬೆಂಗಳೂರು ರಸ್ತೆ (ಸಂಗ್ರಹ ಚಿತ್ರ)

  • Share this:
ಬೆಂಗಳೂರು: ವೀಕೆಂಡ್ ಆದರೆ ಸಾಕು, ಮೈಸೂರಿನತ್ತ ಪ್ರಯಾಣ ಮಾಡೋದು ಬೆಂಗಳೂರಿಗರ ರೂಢಿ. ಯುವಕರಂತೂ ಪೈಪೋಟಿ ಮೇಲೆ ಟ್ರಿಪ್ ಹೊರಟುಬಿಡ್ತಾರೆ. ಕೆಲವರಿಗೆ ಪ್ರವಾಸಿ ತಾಣ ನೋಡೋದು ಖುಷಿ, ಇನ್ನು ಕೆಲವರಿಗೆ ರೈಡ್​ ಮಾಡೋದೇ ಖುಷಿ. ಹೈವೇ ‘ನೈಸ್’​ ಆಗಿದೆ ಅಂತಾ ಇನ್ಮುಂದೆ ಬೇಕಾಬಿಟ್ಟಿ ಓಡಾಡೋ ಆಗಿಲ್ಲ. ಏಕೆಂದರೆ, ಹಾಗೆ ಹೋದರೆ, ಅಪಾಯ ಕಟ್ಟಿಟ್ಟ ಬುತ್ತಿ.

ಬೆಂಗಳೂರು-ಮೈಸೂರು ರಸ್ತೆಗೆ ಪರ್ಯಾಯವಾಗಿ ಹೊಸ ರಿಂಗ್​ ರೋಡ್​ ಆಗುತ್ತಿದೆ. ಬೆಂಗಳೂರಿನ ಕುಂಬಳಗೋಡುವಿನಿಂದ ಮದ್ದೂರು ತಾ. ನಿಡಘಟ್ಟವರೆಗೆ ಹೊಸ ವರ್ತುಲ ರಸ್ತೆ ನಿರ್ಮಾಣ ಆಗ್ತಿದೆ. ಮೈಸೂರು ರಸ್ತೆಯ ವಾಹನ ಸಂದಣಿ ನಿಯಂತ್ರಣಕ್ಕೆ ಇದು ಒಳ್ಳೆಯದೆ. ಆದರೆ, ಪರ್ಯಾಯ ರಸ್ತೆ ನಿರ್ಮಾಣ ಮಾಡುತ್ತಿರುವುದರಲ್ಲಿ ಇರುವ ಆಸಕ್ತಿ, ಹೊಸ ರಸ್ತೆಯಲ್ಲಿ ಹೋಗೋರೋ ಸುರಕ್ಷತೆ ಬಗ್ಗೆ ಇಲ್ಲವಾಗಿದೆ. ಅಲ್ಲಲ್ಲಿ ರಸ್ತೆ ವಿಭಜಕ ಹಾಕಿದ್ದರೂ ಸೂಕ್ತ ಸೂಚನಾ ಫಲಕಗಳೇ ಇಲ್ಲ. ಅಡ್ಡದಾರಿ ಗುರುತಿಸುವ ಕಡೆ ಹಂಪ್ಸ್​ಗಳೇ ಇಲ್ಲ. ಹೀಗಾಗೇ ನಿತ್ಯವೂ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ.

ಹೊಸ ರಸ್ತೆ ಆಗುತ್ತಿರುವ ಕಡೆಯೆಲ್ಲಾ ನಿತ್ಯವೂ ಅಪಘಾತಗಳು ಸಾಮಾನ್ಯವಾಗಿಬಿಟ್ಟಿದೆ. ಬೈಕ್​ಗಳ ಮೇಲೆ ವೇಗವಾಗಿ ಬರುವ ಯುವಕರೇ ಇಲ್ಲಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ಸಂಪರ್ಕಿಸುವ ಕಡೆ ಹಂಪ್​ಗಳಿಲ್ಲದೇ ಇರುವುದೇ ಈ ಅವಘಡಗಳಿಗೆ ಕಾರಣ. ಅಲ್ಲದೆ, ತಿರುವು ರಸ್ತೆಗಳಲ್ಲಿ ಬಿದ್ದಿರುವ ಜಲ್ಲಿಪುಡಿ, ಪುಡಿಗಲ್ಲುಗಳಿಂದಾಗಿ ಬೈಕ್​ಗಳು ಸ್ಕಿಡ್​ ಆಗುತ್ತಿವೆ. ಇದು ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಅಧಿಕಾರಿಗಳಿಗೆ ಕಂಡೂ ಕಾಣದಂತಾಗಿದೆ.

ಹೆದ್ದಾರಿಯಲ್ಲಿನ ಅವಘಡಗಳಿಗೆ ಹಗಲು-ರಾತ್ರಿ ಅಂತೇನು ಇಲ್ಲ. ಹಗಲಲ್ಲಿ ಶಾಲಾ ಬಸ್​ಗಳು, ವಿಐಪಿ ಕಾರುಗಳು, ಲಾರಿ, ಟ್ರಕ್​ಗಳೇ ಹೆಚ್ಚು. ರಾತ್ರಿ ಹೊತ್ತು ಕೇರಳ, ಮಂಗಳೂರು ಕಡೆ ಹೋಗುವ ಪ್ರವಾಸಿ ಬಸ್​ಗಳೇ ಹೆಚ್ಚು. ಹೆಚ್ಚೆಚ್ಚು ವಾಹನಗಳು ಪ್ರತಿ ಸೆಕೆಂಡ್​ನಲ್ಲೂ ಓಡಾಡುತ್ತಿದ್ದರೂ ಯಾವುದೇ ಮುಂಜಾಗ್ರತೆ ಇಲ್ಲಿ ಕಾಣುತ್ತಿಲ್ಲ. ಹೀಗಾಗಿ ನಿತ್ಯವೂ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ.

ಇದನ್ನು ಓದಿ: ತುಂಗಭದ್ರಾ ಡ್ಯಾಂ ಪಕ್ಕದಲ್ಲೇ ಇದ್ದರೂ ಈ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ

ಹೆದ್ದಾರಿ ಅಭಿವೃದ್ಧಿ ಜೊತೆಗೆ ಬಿಡದಿ, ರಾಮನಗರ, ಚನ್ನಪಟ್ಟಣ ನಗರಗಳಲ್ಲೂ ರಸ್ತೆ ಅಗಲೀಕರಣ ನಡೆಯುತ್ತಿದೆ. ಇಲ್ಲೂ ಕೂಡ ಇಂಥಾದ್ದೇ ನಿರ್ಲಕ್ಷ್ಯ. ಪರಿಣಾಮ, ಅನೇಕ ಅವಘಡಗಳು ಆಗುತ್ತಿವೆ. ಬೈಕ್​, ಕಾರು ಅಪಘಾತನ ನಡೆದು, ಸಾವು-ನೋವುಗಳು ಸಂಭವಿಸಿದರೂ ಅದನ್ನು ತಡೆಯೋದಾಗಲಿ, ತಡೆಯು ಕ್ರಮಗಳಾಗಲೀ ಎಲ್ಲೂ ಕಾಣುತ್ತಿಲ್ಲ.

ಜನರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ ರಸ್ತೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಆದರೆ, ಅದೇ ಕೆಲಸದಿಂದ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುವುದು ಎಷ್ಟು ಸರಿ. ಬಡಪಾಯಿಗಳ ಶವದ ಮೇಲೆ ರಸ್ತೆ ಮಾಡುವ ಬದಲು ರಸ್ತೆ ಸುರಕ್ಷತಾ ಕ್ರಮಗಳು ಶೀಘ್ರ ಅನುಷ್ಠಾನಗೊಳ್ಳಲಿ. ಕೆಲಸ ಬೇಗ ಮುಗಿಸಿ, ಗುರಿ ಮುಟ್ಟಿ ಸರ್ಕಾರದಿಂದ ಶಹಬ್ಬಾಸ್​ಗಿರಿ ಪಡೆಯುವುದರ ಜೊತೆಗೆ ಜನರ ಅಮೂಲ್ಯ ಪ್ರಾಣದ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಲಿ.

  • ವಿಶೇಷ ವರದಿ: ಬಿ ಎಸ್ ಬೈರಹನುಮಯ್ಯ


First published: