'ದೃಶ್ಯ' ಸಿನಿಮಾ ನೋಡಿ ಗಂಡನ ಹತ್ಯೆ; ಮೈಸೂರಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

ಮೈಸೂರಿನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಇಬ್ಬರು ಪ್ರೇಮಿಗಳು 'ದೃಶ್ಯ' ಸಿನಿಮಾದಿಂದ ಪ್ರೇರೇಪಿತರಾಗಿ ಕೊಲೆಯನ್ನು ಅಪಘಾತ ಅಂತ ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. 

ಕೊಲೆ ಮಾಡಿದ ಆರೋಪಿಗಳು ಪೊಲೀಸರೊಂದಿಗೆ

ಕೊಲೆ ಮಾಡಿದ ಆರೋಪಿಗಳು ಪೊಲೀಸರೊಂದಿಗೆ

  • Share this:
ಮೈಸೂರು (ಜೂ. 27): ರವಿಚಂದ್ರನ್ ನಾಯಕನಾಗಿ ನಟಿಸಿದ್ದ ಕನ್ನಡದ ದೃಶ್ಯ  ಸಿನಿಮಾ ನೋಡಿ ಕೊಲೆ ಮಾಡಲು ಐಡಿಯಾಗಳನ್ನು ಪಡೆದ ಘಟನೆ ಈ ಹಿಂದೆ ಕೂಡ ನಡೆದಿತ್ತು. ಇದೀಗ ಮೈಸೂರಿನಲ್ಲಿ ಬೆಳಕಿಗೆ ಬಂದಿರುವ ಕೊಲೆ ಪ್ರಕರಣಕ್ಕೂ ದೃಶ್ಯ ಸಿನಿಮಾ ಸ್ಫೂರ್ತಿ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಮಲಯಾಳಂ ಸಿನಿಮಾದ ರೀಮೇಕ್ ಆಗಿದ್ದ ದೃಶ್ಯ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಹೀರೋ ಕೊಲೆಯೊಂದನ್ನು ಅಪಘಾತ ಎಂದು ಸೃಷ್ಟಿಸೋಕೆ ಸಾಕಷ್ಟು ಸಾಕ್ಷ್ಯ ಸೃಷ್ಟಿ ಮಾಡಿ, ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಕೊಲೆಯೊಂದನ್ನ ಹೀಗೂ ಮರೆಮಾಚಬಹುದಾ ಎಂದು ಹುಬ್ಬೇರಿಸುವಂತೆ ಮಾಡಿದ್ದ ಸಿನಿಮಾ ದೃಶ್ಯ. ಮೈಸೂರಿನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಇಬ್ಬರು ಪ್ರೇಮಿಗಳು ಇದೇ ಸಿನಿಮಾದಿಂದ ಪ್ರೇರೇಪಿತರಾಗಿ ಕೊಲೆಯನ್ನು ಅಪಘಾತ ಅಂತ ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.  ಕೊಲೆ ನಡೆದ ನಾಲ್ಕೇ ದಿನದಲ್ಲಿ ಕೊಲೆ ಹಿಂದಿನ ರಹಸ್ಯದ ಜೊತೆ ಕೊಲೆಯಾದ ವ್ಯಕ್ತಿಯ ಪತ್ನಿಯ ಅಕ್ರಮ ಸಂಬಂಧವೂ ಬೆಳಕಿಗೆ ಬಂದಿದೆ. ಈ ಕುತೂಹಲಕಾರಿ ಕತೆಯ ಹಿಂದೆ ದೃಶ್ಯ ಸಿನಿಮಾದ ದೃಶ್ಯಗಳೇ ಇವೆ!

ಸತ್ತು ಬಿದ್ದಿರುವ ವ್ಯಕ್ತಿ, ಪಕ್ಕದಲ್ಲೆ ಗಿಡಗಳ ಬೇಲಿಯೋಳಗೆ ನುಗ್ಗಿ ಬಿದ್ದಿರುವ ಸ್ಕೂಟರ್. ಈ ದೃಶ್ಯ ಕಂಡಾಕ್ಷಣ ಇದೊಂದು ಅಪಘಾತ ಎನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ  ಪೋಟೋದಲ್ಲಿರುವ ದೃಶ್ಯಗಳು ಕನ್ನಡದ ಸೂಪರ್ ಹಿಟ್ ‌ದೃಶ್ಯ ಸಿನಿಮಾನ ನೋಡಿ ಸೃಷ್ಠಿಯಾಗಿರುವ ದೃಶ್ಯಗಳು. ಅಷ್ಟಕ್ಕೂ ಇಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಅಪಘಾತದಿಂದ ಸತ್ತಿಲ್ಲ ಅದೊಂದು ಕೊಲೆ.  ಹೌದು, ಮೈಸೂರಿನ ಸಾಲಿಗ್ರಾಮದ ನಿವಾಸಿ ಆನಂದ್ ಜೂ. 23ರಂದು ಮನೆಯಿಂದ ಹೊರಟವನು, ಜೂ.24ರ ಬೆಳಗ್ಗೆ ರಸ್ತೆಬದಿಯಲ್ಲಿ ಸತ್ತು ಬಿದ್ದಿದ್ದ.

ಇದನ್ನೂ ಓದಿ: ಪರೀಕ್ಷೆ ಬರೆಯಬೇಕಿದ್ದ ಕಲಬುರ್ಗಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!

ಮೊದಲಿಗೆ ಎಲ್ಲರೂ ಅದೊಂದು ಅಪಘಾತ ಅಂದುಕೊಂಡರು. ಆದರೂ ಒಂದು ಸಣ್ಣ ಅನುಮಾನ ಎಲ್ಲರ ತಲೆಯಲ್ಲೂ ಕೊರೆಯುತ್ತಿತ್ತು. ಆ ಸಣ್ಣ ಅನುಮಾನದ ಎಳೆ ಹುಡುಕಿಕೊಂಡು ಹೊರಟ ಪೊಲೀಸರಿಗೆ ಇದೊಂದು ಕೊಲೆ ಅಂತ ಗೊತ್ತಾಯಿತು. ಅದರ ವಿಚಾರಣೆ ನಡೆಸಿದ ಪೊಲೀಸರು ಕೊಲೆಯ ಹಿಂದೆ ಅಕ್ರಮ ಸಂಬಂಧದ ಕಾರಣವಿತ್ತೆಂಬುದನ್ನು ಬಯಲಿಗೆಳೆದಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮದ ನಿವಾಸಿಯಾದ  35 ವರ್ಷದ ಆನಂದ್ ಎಂಬ ವ್ಯಕ್ತಿ ಊರಿನಲ್ಲಿ ಟೆಂಪೋ ಟ್ರಾವಲ್ ನಡೆಸುತ್ತಿದ್ದ. 8 ವರ್ಷಗಳ ಹಿಂದೆ ಶಾರದಾ ಎಂಬಾಕೆಯನ್ನು ಮದುವೆಯಾಗಿದ್ದ ಈತನಿಗೆ 7 ವರ್ಷ ಗಂಡು ಮಗ ಕೂಡ ಇದ್ದ.

Mysore Woman Murders Husband with Her Lover Inspired by Drishya Movie.
ಪ್ರೇಯಸಿಯ ಗಂಡನನ್ನು ಕೊಲೆ ಮಾಡಿದ ಬಾಬು


ಆದರೆ, ಇತ್ತೀಚೆಗೆ ಆನಂದ್- ಶಾರದಾ ಸಂಸಾರದಲ್ಲಿ ಬಿರುಕು ಮೂಡಿತ್ತು. ಅದು ಎಷ್ಟರ ಮಟ್ಟಿಗೆ ಅಂದ್ರೆ ಕೇವಲ 2 ತಿಂಗಳ ಮುಂಚೆ ಪರಿಚಯವಾದವನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡುವಷ್ಟರ ಮಟ್ಟಿಗೆ ತಲುಪಿತ್ತು.  ಶಾರದ ತನ್ನದೇ ಬೀದಿಯಲ್ಲಿದ್ದ ಬಾಬು ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಆನಂದ್ ಗಮನಕ್ಕೂ ಬಂದಿರಲಿಲ್ಲ. ಕುಡಿದು ಬರುತ್ತಿದ್ದ ಗಂಡನ ಮೇಲೆ ಅಸಡ್ಡೆ ಹಾಗೂ ಬೇಸರಗೊಂಡಿದ್ದ ಶಾರದ ಪ್ರಿಯಕರ ಬಾಬು ಜೊತೆ ಸೇರಿ ಗಂಡನನ್ನು ಕೊಲೆ ಮಾಡುವ  ಪ್ಲಾನ್ ಮಾಡಿದ್ದಳು. ಹಾಗೇ, ಜೂ.23ರಂದು ಮನೆಯಿಂದ ಹೊರಟ ಗಂಡನನ್ನು ಪ್ರೇಮಿಗಳಿಬ್ಬರೂ ಸೇರಿ ಕೊಲೆ ಮಾಡಿಬಿಟ್ಟಿದ್ದರು.

ಇದನ್ನೂ ಓದಿ: ಮೂರೂವರೆ ರೂಪಾಯಿ ಸಾಲಕ್ಕಾಗಿ ರೈತನನ್ನು 15 ಕಿ.ಮೀ. ನಡೆಸಿದ ಶಿವಮೊಗ್ಗ ಬ್ಯಾಂಕ್ ಸಿಬ್ಬಂದಿ!

ಈ ಕೊಲೆಗೆ ಈ ಪ್ರೇಮಿಗಳು ಮಾಡಿದ ಪ್ಲಾನ್ ಮಾತ್ರ ದೃಶ್ಯ ಸಿನಿಮಾದ ಪಕ್ಕಾ ಸೀನ್​ಗಳು. ಬಾಬು- ಆನಂದ್ ಇಬ್ಬರು ಪರಸ್ಪರ ಸ್ನೇಹಿತರು. ಈ ಹಿನ್ನಲೆಯಲ್ಲಿ ಆನಂದ್​ನನ್ನು ತನ್ನ ತೋಟಕ್ಕೆ ಕರೆತಂದ ಬಾಬು ಪಾರ್ಟಿ ಮಾಡಿ ಕಂಠಪೂರ್ತಿ ಕುಡಿಸಿದ್ದ. ಕುಡಿತದ ಅಮಲು ಜಾಸ್ತಿಯಾದ ಆನಂದ್ ತಲೆಗೆ ಹಿಂಬದಿಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಆನಂದ್ ಮೃತದೇಹವನ್ನು ಚೀಲದಲ್ಲಿ ತುಂಬಿಕೊಂಡು ಚೀಲದ ಸುತ್ತ ಹುಲ್ಲಿನ ಹೊರೆ ಮಾಡಿ ಚುಂಚನಕಟ್ಟೆ ರಸ್ತೆಗೆ ತಂದು ವಿದ್ಯುತ್ ಕಂಬದ ಬಳಿ ಬಿಸಾಡಿದ್ದ. ನಂತರ ಆನಂದ್​ನ ಬೈಕ್ ತಂದು ಅಲ್ಲಿ ಕೆಡವಿ, ಅಪಘಾತದಂತೆ ಬಿಂಬಿಸಿ ಅಲ್ಲಿಂದ ಪರಾರಿಯಾಗಿದ್ದ. ಇಷ್ಟೆಲ್ಲ ಮಾಡಿದ ಬಾಬು ನಿರಂತರವಾಗಿ ಶಾರದ ಜೊತೆ ಫೋನ್ ಸಂಪರ್ಕದಲ್ಲಿದ್ದ.

ತನಿಖೆ ಆರಂಭಿಸಿದ ಪೊಲೀಸರಿಗೆ ಫೋನ್​ ಕಾಲ್ ಲೀಸ್ಟ್​ನಲ್ಲೇ ಎಲ್ಲ ಮಾಹಿತಿ ಸಿಕ್ಕಿದೆ. ಕೊಲೆ ಹಿಂದಿನ ಉದ್ದೇಶ ತಿಳಿಯಲು ಆನಂದ್​ನ ಪತ್ನಿಯ ವಿಚಾರಣೆ ಮಾಡಿದಾಗ ಸತ್ಯ ಹೊರಬಂದಿದೆ.  ದೃಶ್ಯ ಸಿನಿಮಾ ನೋಡಿ ಪ್ರೇರಣೆಯಾಗಿ ಈ ಕೊಲೆ ಮಾಡಿದೆವು ಎಂದು ಅವರಿಬ್ಬರೂ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾಗಳು ಜನರ ಜೀವನದಲ್ಲಿ ಪ್ರೇರಣೆಯಾಗೋದರಲ್ಲಿ ತಪ್ಪಿಲ್ಲ. ಆದರೆ ಅಕ್ರಮ ಸಂಬಂಧ ಉಳಿಸಿಕೊಳ್ಳಲು ಕೊಲೆ ಮಾಡೋ ಹಂತಕ್ಕೆ ಸಿನಿಮಾದಿಂದ ಪ್ರೇರಣೆಯಾಗೋದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಈ ಪ್ರಕರಣದಿಂದ ಕಾಡುತ್ತಿದೆ. ಸದ್ಯ ಕೊಲೆ ಮಾಡಿದ ಆರೋಪಿಗಳು ಸಾಲಿಗ್ರಾಮ ಠಾಣೆ ಪೊಲೀಸರ ವಶದಲ್ಲಿದ್ದು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
First published: