ಚಾಮರಾಜನಗರ (ಫೆ.24) ಮೈಸೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಒಂಭತ್ತು ಕಾಲೇಜುಗಳ ಸ್ವಾಯತ್ತತೆ ಮುಂದುವರಿಸಲು ಮೈಸೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ. ಚಾಮರಾಜನಗರದ ಹೊರವಲಯದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಿಂಡಿಕೇಟ್ ಸಭೆ ನಡೆಯಿತು.
ಮೈಸೂರಿನ ಊಟಿ ರಸ್ತೆಯಲ್ಲಿವ ಜೆಎಸ್ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಸರಸ್ವತಿ ಪುರಂ ನಲ್ಲಿರುವ ಜೆ.ಎಸ್.ಎಸ್. ಮಹಿಳಾ ಕಾಲೇಜು, ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ, ಕಾಲೇಜು, ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜು, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ ಸರ್ಕಾರಿ ಮಹಾವಿದ್ಯಾಲಯ, ಹಾಸನದ ಸರ್ಕಾರಿ ಕಲಾ, ವಾಣಿಜ್ಯ, ಮತ್ತು ಸ್ನಾತ್ತಕೋತ್ತರ ಕಾಲೇಜು ಹಾಗೂ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜುಗಳ ಸ್ವಾಯತ್ತತೆ ಮುಂದುವರಿಸಲು ಸಭೆ ಅನುಮೋದನೆ ನೀಡಿತು.
ಸಭೆಯ ಬಳಿಕ ನ್ಯೂಸ್ 18 ಗೆ ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತಕುಮಾರ್, 2020-21ನೇ ಶೈಕ್ಷಣಿಕ ಸಾಲಿನಲ್ಲಿ ಈ ಕಾಲೇಜುಗಳಿಗೆ ಪರಾಮರ್ಶನಾ ಸಮಿತಿ ಭೇಟಿ ನೀಡಿ ಪರಿಶೀಲಿಸಿ ಸಲ್ಲಿಸಿರುವ ವರದಿಗೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು ಎಂದು ತಿಳಿಸಿದರು.
ಚಾಮರಾಜನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ 30 ಮಂದಿ ಪೂರ್ಣಾವಧಿ ಉಪನ್ಯಾಸಕರ ನೇಮಕಕ್ಕೆ ಕಳುಹಿಸಿದ್ದ ವಿಧೇಯಕ (ಪ್ರಸ್ತಾವನೆ) ವನ್ನು ಆರ್ಥಿಕ ಸಮಸ್ಯೆಯಿಂದ ಸರ್ಕಾರ ವಾಪಸ್ ಕಳುಹಿಸಿತ್ತು. ಈ ಬಗ್ಗೆ ಇಂದಿನ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ, ಈ ವಿಧೇಯಕವನ್ನು ಮತ್ತೆ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.
ಮೈಸೂರು ವಿಶ್ವ ವಿದ್ಯಾನಿಲಯಕ್ಕೆ 2021-22 ನೇ ಸಾಲಿನಲ್ಲಿ ಶೈಕ್ಷಣಿಕ ಖರ್ಚು ವೆಚ್ಚ, ಸಂಬಳ ಇತ್ಯಾದಿಗಳಿಗೆ 340 ಕೋಟಿ ರೂಪಾಯಿ ಅಗತ್ಯವಿದೆ. 90 ಕೋಟಿ ರೂಪಾಯಿ ಶುಲ್ಕ ರೂಪದಲ್ಲಿ ಬರಲಿದ್ದು ಉಳಿಕೆ 250 ಕೋಟಿ ರೂಪಾಯಿಗಳನ್ನು ಮುಂಬರುವ ಬಜೆಟ್‌ನಲ್ಲಿ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು.
ಚಾಮರಾಜನಗರದ ಡಾ.ಬಿ.ಆರ್ .ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಬಿಎ ಕೋರ್ಸ್ ನ್ನು ಮತ್ತೆ ಆರಂಭಿಸಲು ಸಭೆ ತೀರ್ಮಾನಿಸಿ ಇದಕ್ಕಾಗಿ ಎಐಸಿಟಿಇ ( All India Council for Technical Education) ಯಿಂದ ಅನುಮತಿ ಪಡೆಯಲು ನಿರ್ಣಯಿಸಲಾಯಿತು.
ಚಾಮರಾಜನಗರ ಡಾ..ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಸೈನ್ಸ್ ಬ್ಲಾಕ್ ನಿರ್ಮಾಣಕ್ಕಾಗಿ ಬಹಳ ಹಿಂದೆಯೇ ಸರ್ಕಾರ 5 ಕೋಟಿ ರೂಪಾಯಿ ಬಿಡುಗಡೆ ಮಾಡಿ ಕರ್ನಾಟಕ ಭೂ ಸೇನಾ ನಿಗಮಕ್ಕೆ ನೀಡಿದೆ. ಆದರೆ ತಾಂತ್ರಿಕ ಕಾರಣಗಳಿಂದ ಟೆಂಡರ್ ಕರೆಯಲು ಸಾಧ್ಯವಾಗದೆ ಈ ಹಣ ಹಾಗೆಯೇ ಉಳಿದಿದೆ. ಈ ಹಣವನ್ನು ಕೇಂದ್ರಕ್ಕೆ ವರ್ಗಾಯಿಸಿಕೊಳ್ಳಲು ಹಾಗು ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಸೈನ್ಸ್ ಬ್ಲಾಕ್ ನಿರ್ಮಾಣ ಮಾಡಲು ಸಹ ಸಿಂಡಿಕೇಟ್ ಸಭೆ ತೀರ್ಮಾನಿಸಿತು
ಚಾಮರಾಜನಗರ ದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ಪ್ರತ್ಯೇಕ ವಿಶ್ವವಿದ್ಯಾನಿಲಯ ಮಾಡಬೇಕೆಂಬ ಒತ್ತಾಯ ಇದೆ. ಆದರೆ ಈ ಬಗ್ಗೆ ನಾವು ಯಾವುದೇ ನಿರ್ಣಯ ಅಥವಾ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಮೈಸೂರು ವಿ.ವಿ.ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ