Mysore Gang Rape Case| ಜನಾಕ್ರೋಶಕ್ಕೆ ಮಣಿದು ಮಹಿಳಾ ವಿರೋಧಿ ಆದೇಶವನ್ನು ಹಿಂಪಡೆದ ಮೈಸೂರು ವಿಶ್ವವಿದ್ಯಾಲಯ

ಮಹಿಳಾ ವಿರೋಧಿ ಆದೇಶ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ ರಾಮಕೃಷ್ಣ ಕೊನೆಗೂ ತಾವೂ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದ್ದಾರೆ.

ಮೈಸೂರು ವಿವಿ.

ಮೈಸೂರು ವಿವಿ.

 • Share this:
  ಮೈಸೂರು (ಆಗಸ್ಟ್​ 28); ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ (Mysore University) ಯುವತಿಯ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಇದೀಗ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಆಡಳಿತರೂಢ ಮತ್ತು ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ. ಅಲ್ಲದೆ, ಗೃಹ ಸಚಿವ ಅರಗ ಜ್ಞಾನೇಂದ್ರ (araga jnanendra) ಹೇಳಿಕೆಗೆ ವ್ಯಾಪಾಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಮೈಸೂರು ವಿಶ್ವವಿದ್ಯಾಲಯ(Mysore University)ದ ಸುತ್ತೋಲೆ ಚರ್ಚೆಗೆ ಗ್ರಾಸವಾಗಿತ್ತು. ಗ್ಯಾಂಗ್​ ರೇಪ್​​ (Gang Rape) ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿಯಲ್ಲಿ ಇನ್ಮುಂದೆ ಸಂಜೆ 6 ಗಂಟೆ ಬಳಿಕ ವಿದ್ಯಾರ್ಥಿನಿಯರು ಒಂಟಿಯಾಗಿ ಓಡಾಡುವುದು, ಕೂರುವುದನ್ನು ನಿಷೇಧಿಸಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ ರಾಮಕೃಷ್ಣ ಸುತ್ತೋಲೆ ಹೊರಡಿಸಿದ್ದರು. ಜೊತೆಗೆ ಸುರಕ್ಷತೆ ದೃಷ್ಟಿಯಿಂದ ಕುಕ್ಕರಳ್ಳಿ ಕೆರೆಯ ಬಳಿಯೂ ಯುವತಿಯರು ಸಂಜೆ ವೇಳೆ ಓಡಾಡಬಾರದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.

  ಆದರೆ, ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ ರಾಮಕೃಷ್ಣ ಹೊರಡಿಸಿದ್ದ ಈ ಸುತ್ತೋಲೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವಿರೋಧ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಇದೊಂದು ಅವೈಜ್ಞಾನಿಕ ನಿಯಮ. ಈ ವಿಚಾರವಾಗಿ ‌ನಾನು ಗರ್ವನರ್ ಜೊತೆಗೆ ಮಾತನಾಡಲಿದ್ದೇನೆ. ಹೋಮ್ ಮಿನಿಸ್ಟರ್ ತಪ್ಪಾ..? ಕಮಿಷನರ್ ತಪ್ಪಾ..? ರಾತ್ರಿ ಹೊತ್ತು ಓಡಾಡಬೇಡಿ ಅಂದ್ರೆ ಹೇಗೆ? ರಕ್ಷಣೆ ಕೊಡಬೇಕಾಗಿದ್ದು ಪೊಲೀಸ್ ಕೆಲಸ. ಪ್ರವಾಸಿ ತಾಣ ಬೇರೆ, ಸಾಕಷ್ಟು ‌ಕಡೆಯಿಂದ ಮೈಸೂರಿಗೆ ಜನಗಳು ‌ಬರ್ತಾರೆ. ಯುವತಿಯರಿಗೆ ಓಡಾಡಬೇಡಿ ಅಂದ್ರೆ ಹೇಗೆ? ಉಪಕುಲಪತಿಗಳ ಆದೇಶ ಕಾನೂನು ಬಾಹಿರ. ಉಪಕುಲಪತಿಗಳ ಅಪಾಯಿಂಟ್ ಮೆಂಟ್ ಕ್ಯಾನ್ಸಲ್ ಮಾಡಬೇಕು, ಅವರನ್ನು ‌ಕೂಡಲೇ ಮನೆಗೆ ಕಳಿಸಬೇಕು" ಎಂದು ಟೀಕಿಸಿದ್ದರು.

  ಮೈಸೂರು ವಿವಿ ಆದೇಶ.


  ಅಲ್ಲದೆ, ಡಿ.ಕೆ. ಶಿವಕುಮಾರ್ ಹೊರತುಪಡಿಸಿ ಅನೇಕ ವಿರೋಧ ಪಕ್ಷದ ನಾಯಕರು ಮೈಸೂರು ವಿವಿ ಆದೇಶವನ್ನು ವಿರೋಧಿಸಿದ್ದರು. ಅನೇಕ ಪ್ರಗತಿಪರರು ಸಹ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು, ಇದು ಮಹಿಳಾ ವಿರೋಧಿ ಆದೇಶ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ ರಾಮಕೃಷ್ಣ ಕೊನೆಗೂ ತಾವೂ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದ್ದಾರೆ.

  ಇದನ್ನೂ ಓದಿ: Mysore Gang Rape: ವಿದ್ಯಾರ್ಥಿನಿಯರು ಸಂಜೆ ವೇಳೆ ಓಡಾಡದಂತೆ ಮೈಸೂರು ವಿವಿ ಆದೇಶ: ಡಿ.ಕೆ.ಶಿವಕುಮಾರ್ ಆಕ್ಷೇಪ

  ಮಹಿಳಾ ವಿರೋಧಿ ಸುತ್ತೋಲೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಶನಿವಾರ ವಾಪಾಸು ಪಡೆದಿದೆ. ತನ್ನ ತಪ್ಪನ್ನು ತಿದ್ದಿಕೊಂಡಿರುವ ವಿಶ್ವವಿದ್ಯಾನಿಲಯ, ಸಂಜೆಯ ನಂತರ ಸುರಕ್ಷತೆಯ ದೃಷ್ಟಿಯಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಅದರಂತೆ ಆಗಸ್ಟ್‌ 26 ಗುರುವಾರ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದು, ಪರಿಷ್ಕೃತ ಸುತ್ತೋಲೆಯನ್ನು ವಿವಿ ಹೊರಡಿಸಿದೆ.

  ಪರಿಷ್ಕೃತ ಸುತ್ತೋಲೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಬರೆದಿದ್ದ ವಾಕ್ಯವನ್ನು ಬದಲಿಸಿ, ವಿವಿಯ ಆವರಣದಲ್ಲಿ ಸಂಜೆಯ ನಂತರ ವಿದ್ಯಾರ್ಥಿಗಳು ಸುರಕ್ಷತೆಯ ದೃಷ್ಟಿಯಿಂದ ಎಚ್ಚರಿಕೆಯಿಂದ ಇರಬೇಕು ಎಂದು ವಿವಿ ಸೂಚಿಸಿದೆ. ಜೊತೆಗೆ ಸುತ್ತೋಲೆಯಲ್ಲಿ, ಆಗಸ್ಟ್‌ 26 ಗುರುವಾರ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.

  ಇದನ್ನೂ ಓದಿ: ಜನ ಉಗಿಯುವ ಮುನ್ನ ರಾಜೀನಾಮೆ ನೀಡುವುದು ಉತ್ತಮ; ವೈರಲ್ ಆಗುತ್ತಿದೆ ಬಿಜೆಪಿ ನಾಯಕನ ರಾಜೀನಾಮೆ ಪತ್ರ

  ಮೈಸೂರು ಪ್ರಕರಣದ ನಂತರ ಗೃಹಸಚಿವರ ಆದಿಯಾಗಿ ಹಲವಾರು ರಾಜಕಾರಣಿಗಳು ಅಸೂಕ್ಷ್ಮ ಹೇಳಿಕೆಯನ್ನು ನೀಡಿ, ದುರ್ಘಟನೆ ನಡೆಯಲು ಸಂತ್ರಸ್ತೆಯೆ ಕಾರಣ ಎಂದು ಬಿಂಬಿಸುತ್ತಿದ್ದಾರೆ. ಸ್ವತಃ ಗೃಹ ಸಚಿವರು ಕೂಡಾ ಅದನ್ನೇ ಪ್ರತಿಪಾದಿಸಿದ್ದರು. ಈ  ನಡುವೆ ಅತ್ಯಾಚಾರ ಎಸಗಿರುವ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: