Mysore Mayor- ಕಾಂಗ್ರೆಸ್​ಗೆ ಶಾಕ್; ಬಿಜೆಪಿಯ ಸುನಂದಾ ಪಾಲನೇತ್ರಾ ಮೈಸೂರ್ ಮೇಯರ್

ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಗದ್ದುಗೆ ಸಿಕ್ಕಿದೆ. ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಸುನಂದಾ ಪಾಲನೇತ್ರಾ ಅವರು ಜೆಡಿಎಸ್ನ ಪರೋಕ್ಷ ಬೆಂಬಲ ಪಡೆದು ಗೆಲುವು ಸಾಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೈಸೂರು (ಆ. 25): ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಮೇಯರ್ ಚುನಾವಣೆಯಲ್ಲಿ (Mysore City Corporation Mayor Election) ಬಿಜೆಪಿ ಹೊಸ ಇತಿಹಾಸ ಪುಟ ರಚಿಸಿದೆ. 25 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಮೊದಲ ಬಾರಿಗೆ ಮೇಯರ್ ಗದ್ದುಗೆ ಹಿಡಿದಿದೆ. ಬಿಜೆಪಿಯ ಅಭ್ಯರ್ಥಿ ಸುನಂದಾ ಪಾಲನೇತ್ರಾ  (Sunanda Palanetra) ಅವರು ಮೈಸೂರಿನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷ ಅಂತಿಮವಾಗಿ ಕಮಲಕ್ಕೆ ಬೆಂಬಲ (JDS BJP Alliance) ಕೊಟ್ಟಿದೆ. ಜೆಡಿಎಸ್​ನ ಕೆಲ ಬೇಡಿಕೆಗಳಿಗೆ ಕಾಂಗ್ರೆಸ್ ಒಪ್ಪದ ಹಿನ್ನೆಲೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದರೆನ್ನಲಾಗಿದೆ. ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಲಿಲ್ಲ. ಪಾಲಿಕೆಯಲ್ಲಿ ಅತಿ ಹೆಚ್ಚ ಸದಸ್ಯರನ್ನ ಹೊಂದಿರುವ ಬಿಜೆಪಿ ಗೆಲುವಿಗೆ ಇದು ದಾರಿಮಾಡಿಕೊಟ್ಟಿತು. ಕೈ ಎತ್ತಿ ನಡೆಸಲಾದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರಾ ಅವರಿಗೆ 26 ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ (Congress' Shanta Kumari) ಅವರಿಗೆ 22 ಮತಗಳು ಬಂದವು. ಜೆಡಿಎಸ್ ಅಭ್ಯರ್ಥಿ ಅಶ್ವಿನಿ ಅನಂತು ಅವರಿಗೆ 22 ಮತಗಳು ಸಿಕ್ಕವು.

    ಮೇಯರ್ ಹುದ್ದೆ ಗೆದ್ದ ಬಿಜೆಪಿಯ ಸುನಂದಾ ಪಾಲನೇತ್ರಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ಧಾರೆ. ಮೈಸೂರಿನಲ್ಲಿ ಹೊಸ ಇತಿಹಾಸ ಬರೆಯಲು ಕಾರಣರಾದ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮೊದಲಾದವರಿಗೂ ಸಿಎಂ ಅಭಿನಂದನೆ ಹೇಳಿದ್ದಾರೆ. ಎಸ್ ಟಿ ಸೋಮಶೇಖರ್ ಅವರು ಜೆಡಿಎಸ್ ನಾಯಕ ಸಾ ರಾ ಮಹೇಶ್ ಅವರು ಕೆಲ ದಿನಗಳ ಹಿಂದೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗಲೇ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಒಪ್ಪಂದ ಅಂತಿಮಗೊಂಡಿತೆಂಬ ಮಾತುಗಳು ಹರಿದಾಡುತ್ತಿವೆ. ಆರು ತಿಂಗಳ ಕಾಲ ಬಿಜೆಪಿ ಬಳಿ ಮೇಯರ್ ಸ್ಥಾನ ಇರಲಿದೆ. ಆ ಬಳಿಕ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಹೋಗುವ ನಿರೀಕ್ಷೆ ಇದೆ.

    ಇದನ್ನೂ ಓದಿ: School Reopening- ಶಾಲೆ ಓಪನ್ ಮಾಡಿಸಿ ಎಂದು ಪೀಡಿಸುತ್ತಿದ್ದ ಬಹುತೇಕ ಖಾಸಗಿ ಶಾಲೆಗಳೇ ಬಂದ್

    ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 25, ಜೆಡಿಎಸ್ 21 ಹಾಗೂ ಕಾಂಗ್ರೆಸ್ 20 ಸದಸ್ಯರನ್ನ ಹೊಂದಿದೆ. ಇಂದಿನ ಚುನಾವಣೆಯಲ್ಲಿ ಇಬ್ಬರು ಪಕ್ಷೇತರರು ಕಾಂಗ್ರೆಸ್​ಗೆ ಬೆಂಬಲ ನೀಡಿದರೆ, ತಲಾ ಒಬ್ಬೊಬ್ಬ ಪಕ್ಷೇತರರು ಜೆಡಿಎಸ್ ಹಾಗೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಜೆಡಿಎಸ್ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಹೋಗದೇ ಇದ್ದ ಹಿನ್ನೆಲೆಯಲ್ಲಿ ಬಿಜೆಪಿಗೆ ಮೇಯರ್ ಗಾದಿ ಸುಲಭವಾಗಿ ದಕ್ಕಿದೆ.

    ಕಳೆದ ಬಾರಿಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಒಪ್ಪಂದವಾಗಿತ್ತು. ಅದರಂತೆ ರುಕ್ಮಿಣಿ ಮಾದೇಗೌಡ ಅವರು ಫೆಬ್ರವರಿ 24ರಂದು ಮೇಯರ್ ಆಗಿ ಆಯ್ಕೆಯಾದರು. ಆದರೆ ಮೂರು ತಿಂಗಳ ಬಳಿಕ ಅವರ ಚುನಾವಣೆಯನ್ನ ಕರ್ನಾಟಕ ಹೈಕೋರ್ಟ್ ಅನೂರ್ಜಿತಗೊಳಿಸಿತು. ಆ ನಂತರ ಉಪಮೇಯರ್ ಆಗಿದ್ದ ಕಾಂಗ್ರೆಸ್​ನ ಅನ್ವರ್ ಬೇಗ್ ಅವರು ಹಂಗಾಮಿ ಮೇಯರ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಆದ ಒಡಂಬಡಿಕೆ ಪ್ರಕಾರ ಈ ಬಾರಿ ಜೆಡಿಎಸ್​ಗೆ ಮೇಯರ್ ಪಟ್ಟ ಸಿಕ್ಕರೆ ಮುಂದಿನ ಬಾರಿ ಕಾಂಗ್ರೆಸ್​ಗೆ ನೀಡಬೇಕು ಎಂದಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದೊಂದಿಗೆ ಈ ಬಾರಿ ಒಪ್ಪಂದ ಮುಂದುವರಿಸಲು ಜೆಡಿಎಸ್ ಮನಸು ಮಾಡಲಿಲ್ಲವೆನ್ನಲಾಗಿದೆ.

    ಇದನ್ನೂ ಓದಿ: ಕಾಂಗ್ರೆಸ್ಸಿಗರ ಫ್ಯೂಸ್ ಎಚ್​ಡಿಕೆ ಕಿತ್ತುಹಾಕುವ ಅಗತ್ಯವಿಲ್ಲ; ಅವರವರೇ ಕಿತ್ತುಹಾಕೊಳ್ತಿದಾರೆ: ಈಶ್ವರಪ್ಪ

    ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಉಸ್ತುವಾರಿಯನ್ನ ಧೃವನಾರಾಯಣ ಅವರಿಗೆ ನೀಡಿತ್ತು. ತನ್ವೀರ್ ಸೇಠ್ ಕೂಡ ಕೊನೆಯ ಕ್ಷಣದವರೆಗೆ ಜೆಡಿಎಸ್ ಜೊತೆ ಮೈತ್ರಿಗಾಗಿ ಪ್ರಯತ್ನಿಸಿದ್ದರು. ಆದರೆ, ಅಂತಿಮವಾಗಿ ತೆನೆ ಹೊತ್ತ ಮಹಿಳೆಯು ಕಮಲಕ್ಕೆ ಒಲಿದಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ, ಜೆಡಿಎಸ್ ನಡೆಗೆ ಬೇಸರ ವ್ಯಕ್ತಪಡಿಸಿದರು.

    “ಕಳೆದ ಬಾರಿ ಚುನಾವಣೆಯಲ್ಲಿ ಒಡಂಬಡಿಕೆ ಆಗಿತ್ತು. ಈ ಬಾರಿ ಮೇಯರ್ ಸ್ಥಾನ ನಮಗೆ ಸಿಗಬೇಕು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ಗೆ ಮೇಯರ್ ಸ್ಥಾನ ಕೊಡುತ್ತೇವೆ ಎಂದಿದ್ದೆವು. ಆದರೆ, ಜೆಡಿಎಸ್ ತನಗೆ ಮೇಯರ್ ಪಟ್ಟ ಬೇಕು ಎಂದು ಕೇಳಿ ಪಡೆಯಿತು. ಈಗ ನಮಗೆ ಮೇಯರ್ ಸ್ಥಾನ ಬೇಕೆಂದು ಕೇಳಿದೆವು. ಅದಕ್ಕೆ ಜೆಡಿಎಸ್ ಒಪ್ಪಿಲ್ಲ…. ಜೆಡಿಎಸ್​ನವರು ಅವಕಾಶವಾದಿ ರಾಜಕಾರಣ ಮಾಡಿದ್ದಾರೆ. ಮೊದಲೇ ಬಿಜೆಪಿ ಜೊತೆ ಅವರ ಒಳ ಒಪ್ಪಂದ ಆಗಿರಬೇಕು” ಎಂದು ಧೃವನಾರಾಯಣ ಪ್ರತಿಕ್ರಿಯಿಸಿದರು.
    Published by:Vijayasarthy SN
    First published: