ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ(Gang Rape) ನಡೆದಿರುವುದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನಗರದ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್ನ ಗುಡ್ಡದ ಬಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಭಾರತ ಮೂಲದ ಯುವತಿ ನಗರದ ಕಾಲೇಜಿನಲ್ಲಿ MBA ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಸ್ನೇಹಿತನ ಜೊತೆ ಕುಳಿತಿದ್ದಾಗ ಬಂದ ಸುಮಾರು ಐವರು ಕಾಮುಕರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ಕೂಲಿ ಕೆಲಸದವರಂತೆ ಇದ್ದರು ಎಂದು ಸಂತ್ರಸ್ತೆ ಜೊತೆ ಇದ್ದ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೊದಲು ಯುವಕನ ಮೇಲೆ ಹಲ್ಲೆ ಮಾಡಿ, ನಂತರ ಯುವತಿಯ ಮೇಲೆ ಕಾಮುಕರು ಎರಗಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಾಳೆ ಮೈಸೂರಿಗೆ ಗೃಹಸಚಿವರ ಭೇಟಿ
ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ನಾಳೆ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಇಂದು ವಿಧಾನಸೌಧದಲ್ಲಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಪ್ರಕರಣದ ಬಗ್ಗೆ ಮೈಸೂರು ಪೊಲೀಸ್ ಕಮಿಷನ್ ರಿಂದ ಮಾಹಿತಿ ಪಡೆದಿದ್ದಾನೆ. ದೂರವಾಣಿ ಮೂಲಕ ಘಟನೆ ಬಗ್ಗೆ ವಿವರ ಪಡೆದಿದ್ದೇನೆ.
ಎಫ್ಐಆರ್ ದಾಖಲಾಗಿದೆ, ಇಂದು ಉನ್ನತ ಮಟ್ಟದ ಅಧಿಕಾರಿಗಳು ಮೈಸೂರಿಗೆ ತೆರಳುತ್ತಿದ್ದಾರೆ.ನಾಳೆ ನಾನು ಕೂಡ ಮೈಸೂರಿಗೆ ಹೋಗ್ತಿದ್ದೇನೆ.ಈ ಪ್ರಕರಣ ವನ್ನು ಗಂಭೀರ ವಾಗಿ ಪರಿಗಣಿಸಲು ಸೂಚಿಸಿದ್ದೇನೆ. ಅಧಿಕಾರಿಗಳು ವರದಿ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಿಎಂ ಜೊತೆ ಚರ್ಚಿಸಿ, ಯಾವ ರೀತಿ ಕ್ರಮ ಆಗಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ಈ ಘಟನೆ ನಿಜಕ್ಕೂ ದುರದೃಷ್ಟಕರ. ಮೈಸೂರು ತುಂಬಾ ಶಾಂತ ಇರುವ ಜಾಗ, ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ ಇದೊಂದು ಘಟನೆ ಆಗಿರುವುದು ತುಂಬಾ ನೋವು ತಂದಿದೆ.
ಮಧ್ಯರಾತ್ರಿ ಆಸ್ಪತ್ರೆಗೆ ದಾಖಲು
ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಇದನ್ನು ಸೀರಿಯಸ್ಸಾಗಿ ತಗೊಂಡು, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಬ್ಬರು ವಿದ್ಯಾರ್ಥಿಗಳು ನಿನ್ನೆ ಸಂಜೆ 7.30ಗಂಟೆಗೆ ಹೆಲಿಪ್ಯಾಡ್ ಇರುವ ಕಾಡಿಗೆ ಹೋಗಿದ್ದಾರೆ. ಇವರನ್ನು ಹಿಂಬಾಲಿಸಿದ ಯಾರೋ ದುರಾತ್ಮರು ಈ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳು ರಾತ್ರಿ 1.30 ಅಷ್ಟೊತ್ತಿಗೆ ಆಸ್ಪತ್ರೆ ಯಲ್ಲಿ ಅಡ್ಮಿಟ್ ಆಗಿದ್ದಾರೆ. ಬೆಳಿಗ್ಗೆ ಆಸ್ಪತ್ರೆಯಿಂದ ಮಾಹಿತಿ ಬಂದಿದೆ, ಈಗಾಗಲೇ ಎಫ್ಐಆರ್ ದಾಖಲಾಗಿದೆ. ಇದುವರೆಗೂ ಯಾರನ್ನು ಅರೆಸ್ಟ್ ಮಾಡಿಲ್ಲ, ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಎಡಿಜಿಪಿ ಪ್ರತಾಪ್ ರೆಡ್ಡಿ ಯನ್ನು ಮೈಸೂರಿಗೆ ಕಳುಹಿಸಿದ್ದೇನೆ. ಮೈಸೂರಿನಲ್ಲಿರುವ ಪೊಲೀಸ್ ಅಧಿಕಾರಿಗಳು ಕೂಡ ಗಂಭೀರವಾಗಿ ತೆಗೆದುಕೊಂಡು ತನಿಖೆಯನ್ನು ಮಾಡ್ತಿದ್ದಾರೆ . ಮೈಸೂರಂತ ಪ್ರವಾಸಿ ತಾಣದಲ್ಲಿ ಈ ರೀತಿ ಘಟನೆ ಆಗಬಾರದಿತ್ತು.. ಸಹಜವಾಗಿ ಜನರು ಕೂಡ ಈ ಘಟನೆಯಿಂದ ಭಯ ಭೀತರಾಗ್ತಾರೆ. ಈ ಪ್ರಕರಣವನ್ನು ಲಘುವಾಗಿ ತೆಗೆದು ಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಪೊಲೀಸರು ಒಳ್ಳೆಯವ್ರು ಇದ್ದಾರೆ. ಯೋಗ್ಯ ಪೊಲೀಸ್ ಅಧಿಕಾರಿಗಳ ತಂಡ ರಚನೆ ಮಾಡ್ತೇವೆ ಇಂತಹ ಘಟನೆಗಳು ಆಗದ ರೀತಿ ಎಚ್ಚರಿಕೆ ಕ್ರಮ ವಹಿಸುತ್ತೇವೆ. ಇದುವರೆಗೂ ಘಟನೆ ಬಗ್ಗೆ ಯಾವುದೇ ಕ್ಲೂ ಸಿಕ್ಕಿಲ್ಲ. ತನಿಖೆ ನಡೆಯುವಾಗ ನಾನು ಮಾತಾಡೋದು ತಪ್ಪಾಗುತ್ತದೆ, ಹಾಗಾಗಿ ತನಿಖೆ ಆಗಲಿ ಎಂದರು.
ಇನ್ನು ಘಟನೆ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಸಂಗತಿ ನಿಜಕ್ಕೂ ಖಂಡನೀಯ, ಘಟನೆ ತಿಳಿದು ಬೇಸರವಾಗಿದೆ. ಈ ಸಂಬಂಧ ಪೋಲೀಸ್ ಅಧಿಕಾರಿಗಳ ಬಳಿಯಲ್ಲಿ ಮಾತನಾಡಿದ್ದೇನೆ. ಕೂಡಲೇ ಅಪರಾಧಿಗಳನ್ನು ಹಿಡಿಯುವಲ್ಲಿ ಕಾರ್ಯಪ್ರವೃತ್ತವಾಗುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ