Corona Death: ತಂದೆಯ ಶವ ಬೇಡ, ಅವರ ಹಣ, ದಾಖಲೆ ತಂದುಕೊಡಿ ಸಾಕು : ಮೈಸೂರಿನಲ್ಲೊಂದು ಅಮಾನವೀಯ ಘಟನೆ

ಸೋಂಕಿನಿಂದ ತಂದೆ ಮೃತಪಟ್ಟ ವಿಚಾರ ತಿಳಿದ ನಂತರ ಶವವನ್ನು ಅನಾಥ ಶವದಂತೆ ಪರಿಗಣಿಸಿ ನೀವೇ ಅಂತ್ಯಸಂಸ್ಕಾರ ಮಾಡಿಬಿಡಿ ಎಂದಿದ್ದಾನೆ. ಆದರೆ ಮನೆಯಲ್ಲಿ ಇರುವ ಹಣ ಮತ್ತು ದಾಖಲೆಗಳನ್ನು ಮಾತ್ರ ತಾನು ವಾಸಿಸುತ್ತಿರುವ ಕುವೆಂಪುನಗರಕ್ಕೆ ತಂದುಕೊಡಲು ಹೇಳಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು : ಕೋವಿಡ್ ಸಂದರ್ಭದಲ್ಲಿ ಎಲ್ಲೆಡೆ ಒಬ್ಬರೊಗೊಬ್ಬರು ಬೆಂಬಲವಾಗಿರುವುದು, ಸಹಾಯ ಮಾಡುವುದು ಮಾಡ್ತಿದ್ದಾರೆ. ಆದ್ರೆ ಇಂಥಾ ಸಂದರ್ಭದಲ್ಲಿ ಸ್ವಂತ ತಂದೆಯೇ ಸೋಂಕಿಗೆ ಬಲಿಯಾದರೂ ಅಂತ್ಯಸಂಸ್ಕಾರ ಮಾಡಲು ಮುಂದೆ ಬರದ ಮಗನೊಬ್ಬ, ಅವರ ಹಣ ಮತ್ತು ದಾಖಲೆಗಳನ್ನು ತಾನು ಇರುವಲ್ಲೇ ತಂದು ಕೊಡುವಂತೆ ತಿಳಿಸಿದ್ದಾನೆ. ಈ ಘಟನೆ ನಡೆದಿರುವುದು ಮೈಸೂರಿನ ಹೆಬ್ಬಾಳ ಪ್ರದೇಶದ ಬಳಿ. ತಂದೆ ಬದುಕಿದ್ದಾಗ ಅವರ ನಡುವೆ ಅದೇನು ವೈಮನಸ್ಯವಿತ್ತೋ ತಿಳಿದಿಲ್ಲ. ಆದರೆ ಸೋಂಕಿನಿಂದ ಅವರು ಮೃತಪಟ್ಟ ವಿಚಾರ ತಿಳಿದ ನಂತರ ಶವವನ್ನು ಅನಾಥ ಶವದಂತೆ ಪರಿಗಣಿಸಿ ನೀವೇ ಅಂತ್ಯಸಂಸ್ಕಾರ ಮಾಡಿಬಿಡಿ ಎಂದು ಕೇವಲವಾಗಿ ಮಾತನಾಡಿದ್ದಾನೆ ಮಗ. ಆದರೆ ಮನೆಯಲ್ಲಿ ಇರುವ ಹಣ ಮತ್ತು ದಾಖಲೆಗಳನ್ನು ಮಾತ್ರ ತಾನು ವಾಸಿಸುತ್ತಿರುವ ಕುವೆಂಪುನಗರಕ್ಕೆ ತಂದುಕೊಡಲು ಹೇಳಿದ್ದಾನೆ.

ಮೈಸೂರು ನಗರದ ಹೆಬ್ಬಾಳ ಬಳಿಯ ಸೂರ್ಯ ಬೇಕರಿ ಬಳಿ 55 ವರ್ಷ ವಯಸ್ಸಿನ ಆದರ್ಶ್ ಎನ್ನುವ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಖಾಸಗಿ ಹೋಟೆಲೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಮನೆಯ ಮಾಲೀಕರು ಮೈಸೂರಿನ ಕುವೆಂಪುನಗರದಲ್ಲಿ ವಾಸಿಸುತ್ತಿರುವ ಅವರ ಮಗನಿಗೆ ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ ಪೋಲಿಸ್ ಮೇಲೆ FIR ದಾಖಲು !

ಆದರೆ ದುರದೃಷ್ಟ ಎನ್ನುವಂತೆ ಮೃತರ ಪತ್ನಿ, ಮಗ, ಬಂಧು ಬಳಗ ಯಾರೂ ಅವರ ಅಂತ್ಯಸಂಸ್ಕಾರಕ್ಕೆ ಬರಲೇ ಇಲ್ಲ. ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆ ಸದಸ್ಯ ಕೆ ವಿ ಶ್ರೀಧರ್ ತಾವೇ ಆ ಮಗನಿಗೆ ಮತ್ತೊಮ್ಮೆ ಕರೆ ಮಾಡಿದ್ದಾರೆ. ಆಗಲೂ ಕೊರೊನಾ ಬಗ್ಗೆ ಭಯವಿದೆ, ನಾವ್ಯಾರೂ ಬರುವುದಿಲ್ಲ. ನೀವೇ ಅಂತ್ಯಸಂಸ್ಕಾರ ಮಾಡಿ ಮುಗಿಸಿ ಎಂದು ಹಾರಿಕೆಯ ಉತ್ತರ ನೀಡಿದ್ದಾನಾತ. ಮನೆಯಲ್ಲಿ ಇರುವ ವಸ್ತುಗಳನ್ನು ಏನು ಮಾಡುವುದು ಎಂದು ಕೇಳಿದಾಗ ಅಲ್ಲಿರುವ ವಸ್ತುಗಳನ್ನು ಯಾವುದಾದರೂ ಅನಾಥಾಶ್ರಮಕ್ಕೆ ನೀಡಿ. ಹಣ ಮತ್ತು ದಾಖಲೆಗಳನ್ನು ಕುವೆಂಪುನಗರದ ಬಳಿ ಕಳಿಸಿ ಎಂದಿದ್ದಾನೆ.

ಕೊನೆಗೆ ಇದನ್ನು ಅನಾಥ ಶವ ಎಂದು ಪರಿಗಣಿಸಿ ಮೈಸೂರು ನಗರ ಪಾಲಿಕೆ ಸಿಬ್ಬಂದಿ ಭಾನುವಾರ ತಾವೇ ಅಂತ್ಯಸಂಸ್ಕಾರ ನಡೆಸಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆದರ್ಶ್ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡರಾತ್ರಿ ವ್ಯಕ್ತಿ ಮೃತಪಟ್ಟಿದ್ದಾರೆ. ಕುಟುಂಬದಲ್ಲಿ ಏನೇ ವೈಮನಸ್ಯವಿದ್ದರೂ ಸಾವಿನ ಸಂದರ್ಭದಲ್ಲಿ ಈ ರೀತಿ ಅಮಾನವೀಯವಾಗಿ ನಡೆದುಕೊಂಡದ್ದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Published by:Soumya KN
First published: