ಮೈಸೂರು : ವರ್ಗಾವಣೆ ಬಳಿಕವೂ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ಜಟಾಪಟಿ ಮುಂದುವರೆದಿದೆ. ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಮಾಜಿ ಸಚಿವ, ಶಾಸಕ ಸಾ. ರಾ. ಮಹೇಶ್ ವಾಗ್ದಾಳಿ ನಡೆಸಿದರು. ಭೂ ವಿವಾದ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದರು. ಕಳೆದ ಎಂಟು ತಿಂಗಳಿಂದ ಇವರು ಏನು ಮಾಡುತ್ತಿದ್ದರು, ಅಂದಿನಿಂದ ಏಕೆ ಭೂ ವಿವಾದದ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾದ ದಿನದಿಂದಲೂ ಆವಮ್ಮನ ಬಗ್ಗೆ ಆರೋಪ ಮಾಡುತ್ತಿದ್ದೇನೆ. ಅವರ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತೇನೆ. ಇಂದಿನಿಂದ ನನ್ನ ಹೋರಾಟ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಎಂದು ಗುಡುಗಿದರು. ಮೈಸೂರಿನಿಂದ ವರ್ಗಾವಣೆಗೊಂಡ ಬಳಿಕವೂ ರೋಹಿಣಿ ಅವರ ವಿರುದ್ಧ ಸಾರಾ ಮಹೇಶ್ ಅವರ ಸಿಟ್ಟು ಮುಗಿದಿಲ್ಲ. ಮತ್ತಷ್ಟು ಹೋರಾಟ ಮಾಡುವುದಾಗಿ ಘೋಷಿಸುವ ಮೂಲಕ ಸಾರಾ ಮಹೇಶ್ ನೇರಾನೇರ ಹೋರಾಟಕ್ಕ ಇಳಿದಿದ್ದಾರೆ.
ಇದನ್ನೂ ಓದಿ: Corona 3rd Wave: ಕೊರೊನಾ 3ನೇ ಅಲೆ ಪಕ್ಕಾನಾ.. 1,500 ಕೋಟಿ ಮೀಸಲಿಟ್ಟಿರುವುದಾಗಿ ಡಿಸಿಎಂ ಘೋಷಣೆ!
ಇನ್ನು ರೋಹಿಣಿ ಸಿಂಧೂರಿ ಆದೇಶಕ್ಕೆ ಸೆಡ್ಡು ಹೊಡೆದ ನೂತನ ಡಿಸಿ ಡಾ.ಬಗಾದಿ ಗೌತಮ್ ಮೈಸೂರಿನಲ್ಲಿ ಲಾಕ್ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿದ್ದಾರೆ. ನಾಳೆಯಿಂದ ಜೂನ್ 14ರವರೆಗೆ ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಹಳೇ ಆದೇಶ ಹಿಂಪಡೆದು ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಹೊಸ ಆದೇಶ ಹೊರಡಿಸಲಾಗಿದೆ. ವರ್ಗಾವಣೆಗೂ ಮುನ್ನ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶವನ್ನು ನೂತನ ಡಿಸಿ ಬಗಾದಿ ಗೌತಮ್ ಹಿಂಪಡೆಸಿದ್ದಾರೆ. ವಾರದಲ್ಲಿ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ರೋಹಿಣಿ ಸಿಂಧೂರಿ ಆದೇಶಿದ್ದರು. ಇದೀಗ ಆದೇಶ ಹಿಂಪಡೆಯುವ ಮೂಲಕ ರೋಹಿಣಿ ಸಿಂಧೂರಿಗೆ ಸೆಡ್ಡು ಹೊಡಿದ್ದಾರೆ.
ಮೈಸೂರು ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್ ಅವರು ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರ ಹಾಕಿ ರಾಜೀನಾಮೆ ನೀಡಿದ್ದರು. ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಜಟಾಪಟಿ ಬಹಿರಂಗಗೊಂಡಿತ್ತು. ಸಂಧಾನಕ್ಕೆ ಯತ್ನಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೊನೆಗೆ ಇಬ್ಬರು ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಆದೇಶವನ್ನು ಹಿಂಪಡೆಯುವಂತೆ ಇಂದು ರೋಹಿಣಿ ಸಿಂಧೂರಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಅವರು ರೋಹಿಣಿ ಸಿಂಧೂರಿಯವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಪೊಲೀಸ್ ಆಯುಕ್ತರಿಗೆ ಬಾಹ್ಮಣ ಸಮುದಾಯದಿಂದ ದೂರು
ಬಳಿಕ ಮಾಧ್ಯಮಗಳಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ವರ್ಗಾವಣೆ ಆದೇಶವನ್ನು ನಿರೀಕ್ಷಿಸಿರಲಿಲ್ಲ. ಮೈಸೂರಿನಲ್ಲಿ ಕಳೆದ 8 ತಿಂಗಳಿಂದ ಉತ್ತಮ ಕೆಲಸ ಮಾಡಿದ್ದೇನೆ. ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಿದ್ದೆ, ಕೋವಿಡ್ ತಗ್ಗುತ್ತಿರುವ ಈ ಸಮಯದಲ್ಲಿ ನನ್ನನ್ನು ಟ್ರಾನ್ಸ್ಫರ್ ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಕಳೆದ 1 ತಿಂಗಳಿಂದ ಯಾವೆಲ್ಲಾ ಶಾಸಕರು, ಸಂಸದರು, ಅಧಕಾರಿಗಳ ನನ್ನ ವಿರುದ್ಧ ಏನೆಲ್ಲ ಪಿತೂರಿ ಮಾಡಿದ್ದಾರೆಂಬುದು ಎಲ್ಲರ ಮುಂದೆಯೂ ಇದೆ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.
ವರ್ಗಾವಣೆ ಬಗ್ಗೆ ರೋಹಿಣಿ ಸಿಂಧೂರಿ ಮೈಸೂರಿನ ಜನತೆಗೆ ಧನ್ಯವಾದ ಹೇಳಿದ್ದಾರೆ. ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲಾ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆ ಆಗಿದೆ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಭಾವುಕರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ