ಮೈಸೂರು (ಜೂನ್ 9): ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನಡುವಿನ ಕಿತ್ತಾಟ ಇನ್ನೂ ಮುಂದುವರೆದಿದೆ. ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿಯ ನಿವಾಸದ ಈಜುಕೊಳ, ಅವರ ಜೀವನಾಧಾರಿತ ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿ ಕಿಡಿ ಕಾರಿದ್ದಾರೆ. ರೋಹಿಣಿ ಸಿಂಧೂರಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರಂತೆ, ಮಾಡಲಿ. ನಾವೂ ಕೂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ವಿಚಾರವಾಗಿ ಸಿಬಿಐ ವರದಿಯನ್ನು ಆಧರಿಸಿ ಸಿನಿಮಾ ತೆಗೆಯುತ್ತೇವೆ. ಮೊದಲು ರಾಜ್ಯ ಸರ್ಕಾರ ಅಧಿಕಾರಿಗಳ ಕೆಲಸ ಏನು ಎಂಬುದನ್ನು ಅವರು ಅರಿತುಕೊಳ್ಳಬೇಕು. ಅವರಿಗೇಕೆ ಪ್ರಚಾರದ ಹುಚ್ಚು? ಎಂದು ಟೀಕಿಸಿದ್ದಾರೆ.
ಭಾರತ ಸಿಂಧೂರಿ ಎಂಬ ಹೆಸರಿನಲ್ಲಿ ರೋಹಿಣಿ ಸಿಂಧೂರಿ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿರುವ ವಿಚಾರವಾಗಿ ವ್ಯಂಗ್ಯವಾಡಿರುವ ಶಾಸಕ ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿ ಕತೆಯಾಧಾರಿಯ ಸಿನಿಮಾ ಬಿಡುಗಡೆಯಾದ ಮೇಲೆ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಬಡ ರೈತನ ಮಗ ಐಎಎಸ್ ಅಧಿಕಾರಿಯಾಗಿ ಆಂಧ್ರದ ಅಧಿಕಾರಿಯ ಸಹವಾಸ ಮಾಡಿ ಏನೆಲ್ಲ ಆದ ಎಂಬುದನ್ನು ಸಿಬಿಐ ವರದಿ ಆಧರಿಸಿ ನಾನೇ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪೈಲೆಟ್ ಯೋಜನೆಯಡಿ ಈಜುಕೊಳ ಮಾಡುವುದಿದ್ದರೆ ಹಿಂದುಳಿದ ತಾಲ್ಲೂಕಿನಲ್ಲಿ ಮಾಡಿ. ನಿಮ್ಮ ಮನೆಗೆ ಏಕೆ ಮಾಡಿಸಿಕೊಂಡಿರಿ? ನೀವು ಮಾದರಿಯಾಗಬೇಕೆಂದರೆ ಆಶ್ರಯ ಮನೆ ಕಟ್ಟಿಸಿಕೊಂಡು ವಾಸ ಮಾಡಿ. ಮಾದರಿ ಶೌಚಾಲಯ ಕಟ್ಟಿಸಿಕೊಂಡು ಬಳಸಿ ಎಂದು ರೋಹಿಣಿ ಸಿಂಧೂರಿಗೆ ಸಾ.ರಾ ಮಹೇಶ್ ಸಲಹೆ ನೀಡಿದ್ದಾರೆ.
ರೈತರಿಗೆ ವಿದ್ಯುತ್ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದಾರೆ. ಆದರೆ, ರೋಹಿಣಿ ಸಿಂಧೂರಿ ಸರ್ಕಾರದ ಸೌಲಭ್ಯಗಳನ್ನು ಬಳಸಿ, ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ಬರೀ ರಾಜಕಾರಿಗಳೇ ಕಾಣಿಸುತ್ತಾರೆ. ಎಲ್ಲಾ ಸಿನಿಮಾದಲ್ಲೂ ರಾಜಕಾರಣಿಗಳನ್ನು ಕೆಟ್ಟದಾಗಿ ತೋರಿಸಿ ಹೀಗಾಗಿದೆ. ಲೋಕಾಯುಕ್ತ ಎಷ್ಟು ಅಧಿಕಾರಿಗಳ ಮೇಲೆ ದಾಳಿ ಮಾಡಿದೆ? ರಾಜಕಾರಣಿಗಳ ಮೇಲೆ ಎಷ್ಟು ದಾಳಿಯಾಗಿದೆ? ರಾಜಕಾರಣಿಗಳಲ್ಲಿ ಒಳ್ಳೆಯವರಿದ್ದಾರೆ, ಕೆಟ್ಟವರೂ ಇದ್ದಾರೆ. ಮೈಸೂರು ರಾಜಕಾರಣಿಗಳು ಯಾರೂ ಮನುಷ್ಯರಲ್ಲವಾ? ಮೈಸೂರಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಪ್ರಾಮಾಣಿಕರಲ್ಲವಾ? ಅವರಿಗೆ ಆತ್ಮಸಾಕ್ಷಿ, ಮನಸಾಕ್ಷಿಯಿದ್ದರೆ ಸಿಎಂಗೆ ಪತ್ರ ಬರೆದು ಮಾಹಿತಿ ಕೊಡಲಿ ಎಂದು ಶಾಸಕ ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: Rohini Sindhuri: ಮೈಸೂರಿನಲ್ಲಿದ್ದ ರೋಹಿಣಿ ಸಿಂಧೂರಿ ನಿವಾಸದ 28 ಲಕ್ಷ ರೂ. ವೆಚ್ಚದ ಈಜು ಕೊಳ ಹೇಗಿದೆ?
ರೋಹಿಣಿ ಸಿಂಧೂರಿಯಂತಹ ಅಧಿಕಾರಿಗಳನ್ನು ನಾನು ನೋಡಿಯೇ ಇಲ್ಲ. ಯಾವುದೋ ಆಂಧ್ರದ ಕೆಲವು ಐಎಎಸ್ ಅಧಿಕಾರಿಗಳ ಕುಮ್ಮಕ್ಕಿನಿಂದ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಆಕೆಯ ವಿರುದ್ದ ಕ್ರಮ ಕೈಗೊಳ್ಳಬೇಕು. ಮೈಸೂರು ರಾಜಕಾರಣಿಗಳ ಕಳಂಕದ ಬಗ್ಗೆ ತನಿಖೆ ಮಾಡಬೇಕು. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡುತ್ತೇನೆ. ರಾಜಕಾರಣಿಗಳಿಗೆ ಬಂದಿರುವ ಕಳಂಕ ನಿವಾರಣೆಗೆ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇನೆ ಎಂದು ಶಾಸಕ ಸಾ ರಾ ಮಹೇಶ್ ಘೋಷಣೆ ಮಾಡಿದ್ದಾರೆ.
ಸಿಂಧೂರಿ ವಿರುದ್ಧ 10 ಆರೋಪ:
ಯಾವುದೇ ಅಧಿಕಾರಿಯ ಮೇಲೆ ಆರೋಪ ಬಂದರೆ ಸ್ಥಾನಪಲ್ಲಟ ಮಾಡಬೇಕು. ಇಲ್ಲವಾದರೆ ಸಾಕ್ಷ್ಯ ನಾಶ ಮಾಡುವುದು, ಬಚ್ಚಿಡುವುದು ಆಗುತ್ತದೆ. ಅವರು ಹೋದ ಮೇಲೆ ಆಡಿಯೋ ಬಿಡುಗಡೆ ಆಯ್ತು. ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ 10 ಆರೋಪಗಳನ್ನು ಒಳಗೊಂಡು ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೇನೆ. ರೋಹಿಣಿ ಸಿಂಧೂರಿ ನಮ್ಮ ರಾಜ್ಯದ ದೇವಾಲಯಗಳು ಕುಸಿದು ಬೀಳುತ್ತಿದ್ದರೂ 200 ಕೋಟಿ ರೂ.ಗಳನ್ನು ಆಂಧ್ರಕ್ಕೆ ನೀಡಿದ್ದರು. 4G ವಿನಾಯಿತಿ ಅಡಿಯಲ್ಲಿ ಹಣ ಬಿಡುಗಡೆಯಾಗಿದೆ. 16 ಲಕ್ಷ ಹಣ ಬಳಸಿ ಪಾರಂಪರಿಕ ಕಟ್ಟಡದ ನವೀಕರಣ ಮಾಡಿದ್ದಾರೆ. ಅದಾದ ನಂತರ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ. ಈಜುಕೊಳಕ್ಕೆ ಕುಡಿಯುವ ನೀರು ಬಳಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ. ಬೇರೆಯವರಿಗೆ 3- 4 ಸಾವಿರ ರೂ. ಬಿಲ್ ಬರುತ್ತೆ, ಹೆಚ್ಚೆಂದರೆ 7 ಸಾವಿರ ಬರಬಹುದು. ಆದರೆ, ದಕ್ಷ ಅಧಿಕಾರಿ ಎಂದು ಕರೆಯಲ್ಪಡುವ ಸಿಂಧೂರಿ ಅವರ ಮನೆಯಲ್ಲಿ ಒಂದು ತಿಂಗಳಿಗೆ 50 ಸಾವಿರ ಬಿಲ್ ಬರುತ್ತಿತ್ತು. ಯಾವ ಮಂತ್ರಿ ಮನೆಗೂ ಇಷ್ಟು ಬಿಲ್ ಬರೋದಿಲ್ಲ. ಪಂಪ್ ಸೆಟ್‌ಗೆ ಎಷ್ಟು ಗಂಟೆ ಕರೆಂಟ್ ಕೊಡುತ್ತಿದ್ದೀರಿ ಹೇಳಿ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೆ? ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಸಾ.ರಾ.ಮಹೇಶ್ ಪ್ರಶ್ನೆ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ