ಬೆಂಗಳೂರು (ಜೂನ್ 25): ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನಡುವಿನ ಜಟಾಪಟಿ ಇನ್ನೂ ಮುಂದುವರೆದಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಗಲಾಟೆಯ ಬಳಿಕ ಇಬ್ಬರೂ ಅಧಿಕಾರಿಗಳನ್ನು ಮೈಸೂರಿನಿಂದ ಎತ್ತಂಗಡಿ ಮಾಡಲಾಗಿತ್ತು. ಆದರೆ, ಮೈಸೂರಿನಿಂದ ಹೋಗುವ ಮುನ್ನ ಶಾಸಕ ಸಾ.ರಾ. ಮಹೇಶ್ ವಿರುದ್ಧ ಭೂ ಮಾಫಿಯಾದ ಆರೋಪ ಮಾಡಿದ್ದ ರೋಹಿಣಿ ಸಿಂಧೂರಿ ಇದೀಗ ಮೈಸೂರಿನ ಭೂ ಅಕ್ರಮಗಳ ತನಿಖೆ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ನಡುವಿನ ಹಗ್ಗಜಗ್ಗಾಟ ಇನ್ನೂ ಮುಂದುವರೆದಿದ್ದು, ಈ ಹಿಂದೆ ರೋಹಿಣಿ ಸಿಂಧೂರಿ ಮೈಸೂರಿನಲ್ಲಿರುವ ಸರ್ಕಾರಿ ನಿವಾಸದಲ್ಲಿ ಜಿಮ್ ಮತ್ತು ಸ್ವಿಮಿಂಗ್ ಪೂಲ್ ನಿರ್ಮಿಸಿಕೊಂಡಿದ್ದಾರೆ ಎಂದು ಸಾ.ರಾ. ಮಹೇಶ್ ಆರೋಪಿಸಿದ್ದರು. ಜಿಲ್ಲಾಧಿಕಾರಿಗಳ ಅಧಿಕೃತ ವಸತಿ ನಿಲಯದಲ್ಲಿ ಸ್ವಿಮಿಂಗ್ ಪೂಲ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಸ್ವಾಗತಿಸಿರುವ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ನಡೆದಿರೋ ಭೂ ಅಕ್ರಮಗಳ ಸಮಗ್ರ ತನಿಖೆಗೂ ಒತ್ತಾಯ ಮಾಡಿದ್ದಾರೆ. ಈ ಮೂಲಕ ಸಾ.ರಾ. ಮಹೇಶ್ಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: Rohini Sindhuri: ಸಿಂಧೂರಿ ಸಹವಾಸ ಮಾಡಿದ IAS ಅಧಿಕಾರಿ ಸಾವಿನ ಬಗ್ಗೆ ನಾವೂ ಸಿನಿಮಾ ಮಾಡ್ತೀವಿ; ಸಾ.ರಾ ಮಹೇಶ್ ಘೋಷಣೆ
ಈ ಸಂಬಂಧ ಜೂನ್ 11ರಂದೇ ಪ್ರಾದೇಶಿಕ ಆಯುಕ್ತ ರಿಗೆ ಪತ್ರ ಬರೆದಿರುವ ರೋಹಿಣಿ ಸಿಂಧೂರಿಯ ಪತ್ರ ಈಗ ಬಹಿರಂಗವಾಗಿದೆ. ಮೈಸೂರು ಡಿಸಿ ವಸತಿ ಗೃಹದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಕುರಿತ ತಾಂತ್ರಿಕ ದೋಷಗಳ ಕುರಿತು ಸವಿಸ್ತಾರವಾದ ವರದಿ ನೀಡಿರೋದು ಸ್ವಾಗತಾರ್ಹ ವಿಚಾರ ಎಂದಿರುವ ರೋಹಿಣಿ ಸಿಂಧೂರಿ, ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ದಟ್ಟಗಳ್ಳಿ ಸರ್ವೇ ನಂ.123ನಲ್ಲಿ ಇರುವ ಸಾ.ರಾ. ಚೌಟ್ರಿ ಗೆ ಸಂಬಂಧಿಸಿದಂತೆ ಗೋಲ್ಮಾಲ್ ನಡೆದಿದೆ. ಅದಕ್ಕೆ ಸರಿಯಾದ ದಾಖಲೆಗಳು ಇಲ್ಲ. ಹಾಗಾಗಿ, ಸರ್ಕಾರಕ್ಕೆ ನಷ್ಟವಾಗಲಿದ್ದು, ಸಾ.ರಾ. ಮಹೇಶ್ ಅವರಿಗೆ ಲಾಭವಾಗುತ್ತದೆ. ಅಲ್ಲದೆ ಲಿಂಗಾಬುಧಿ ಕೆರೆಯ ಬಳಿಯ ಸರ್ವೆ ನಂಬರ್ ನಲ್ಲಿ ಶಾಸಕ ಸಾ.ರಾ. ಮಹೇಶ್, ಮುಡಾ ಅಧ್ಯಕ್ಷ ರಾಜೀವ್ ಅವರು ಪಾಲುದಾರಿಕೆಯಲ್ಲಿ ನಿಯಮ ಉಲ್ಲಂಘಿಸಿ ರೆಸಾರ್ಟ್ ಮಾಡಲು ಮುಂದಾಗಿದ್ದಾರೆ. ಯಾವುದೇ ಕೆರೆಯಿಂದ 75 ಮೀಟರ್ ವರೆಗೆ ಕಟ್ಟಡ ಕಾಮಗಾರಿಗಳನ್ನು ನಿಷೇಧಿಸಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದು, ಇವರು ಇದಕ್ಕೆ ವಿರುದ್ಧವಾಗಿ ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ಹಾಗಾಗಿ, ಸ್ವತಂತ್ರವಾಗಿ ಸ್ಥಳ ಪರಿಶೀಲನೆ ಮಾಡಿ, ವರದಿ ನೀಡುವಂತೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: Rohini Sindhuri: ಮೈಸೂರಿನಲ್ಲಿದ್ದ ರೋಹಿಣಿ ಸಿಂಧೂರಿ ನಿವಾಸದ 28 ಲಕ್ಷ ರೂ. ವೆಚ್ಚದ ಈಜು ಕೊಳ ಹೇಗಿದೆ?
ಸಾ.ರಾ. ಕಲ್ಯಾಣ ಮಂಟಪದ ಜಾಗವು ವಸತಿ ಉದ್ದೇಶಕ್ಕೆ ಅನುಮೋದನೆ , ವ್ಯವಹಾರಿಕ ದೃಷ್ಟಿಯಿಂದ ಕಲ್ಯಾಣ ಮಂಟಪ ಮಾಡಲಾಗಿದೆ. ಹಾಗಾಗಿ ಪರಿಶೀಲನೆ ನಡೆಸಲು ಮುಡಾ ಅಧಿಕಾರಿಗಳಿಗೆ ನಾನು ನಿರ್ದೇಶನ ನೀಡಿದ್ದೆ. ಅಲ್ಲದೇ, ಮುಡಾ ಅಧ್ಯಕ್ಷ ಎಚ್.ಎ.ರಾಜೀವ್ ನೂರಾರು ಅಕ್ರಮ ಆಸ್ತಿಗಳಿಗೆ ಅನುಮತಿ ನೀಡುವ ಮೂಲಕ ತಮ್ಮ ವೈಯಕ್ತಿಕ ಲಾಭಕ್ಕೆ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಪ್ರಾದೇಶಿಕ ಆಯುಕ್ತ ಜಿ. ಸಿ ಪ್ರಕಾಶ್ ಅವರಿಗೆ ಪ್ರಸ್ತುತ ಮುಜರಾಯಿ ಇಲಾಖೆ ಆಯುಕ್ತೆಯಾಗಿರುವ ರೋಹಿಣಿ ಸಿಂಧೂರಿ ಪತ್ರ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ