ಮೈಸೂರು ಪೊಲೀಸ್ ಐಜಿಪಿ ತಮ್ಮ ಕೆಲಸ ಬಿಟ್ಟು ಬಿಜೆಪಿ ಕಚೇರಿಯಲ್ಲಿ ಗುಲಾಮಗಿರಿ ಮಾಡಲಿ; ಹೆಚ್​.ಡಿ. ರೇವಣ್ಣ ಕಿಡಿ

ಮೈಸೂರಿನ ಐಜಿಪಿ ನೇತೃತ್ವದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಕೆಆರ್ ಪೇಟೆಯ ಹತ್ತಿರದ ತೋಟದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೆ, ಸರ್ಕಲ್ ಇನ್ಸ್​ಪೆಕ್ಟರ್​ ಸಹಾಯದಿಂದ ಮತದಾರರಿಗೆ ಪೊಲೀಸರಿಂದಲೇ ಹಣ ಹಂಚುತ್ತಿದ್ದಾರೆ ಎಂದು ಹೆಚ್​.ಡಿ. ರೇವಣ್ಣ ಆರೋಪಿಸಿದ್ದಾರೆ.

MAshok Kumar | news18-kannada
Updated:December 4, 2019, 3:02 PM IST
ಮೈಸೂರು ಪೊಲೀಸ್ ಐಜಿಪಿ ತಮ್ಮ ಕೆಲಸ ಬಿಟ್ಟು ಬಿಜೆಪಿ ಕಚೇರಿಯಲ್ಲಿ ಗುಲಾಮಗಿರಿ ಮಾಡಲಿ; ಹೆಚ್​.ಡಿ. ರೇವಣ್ಣ ಕಿಡಿ
ಹೆಚ್.ಡಿ. ರೇವಣ್ಣ
  • Share this:
ಹಾಸನ (ಡಿಸೆಂಬರ್ 04); ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಪೊಲೀಸರೆ ಜನರಿಗೆ ಹಣ ವಿತರಣೆ ಮಾಡುತ್ತಿದ್ದಾರೆ. ಮೈಸೂರು ಐಜಿಪಿ ಹೆಚ್​.ಜಿ. ರಾಘವೇಂದ್ರ ಸುಹಾಸ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ ಅವರ ಮುಂದಾಳತ್ವದಲ್ಲಿ ಇವೆಲ್ಲ ನಡೆಯುತ್ತಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಕೆಆರ್ ಪೇಟೆ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿರುವ ಕುರಿತು ಇಂದು ಹಾಸನದಲ್ಲಿ ಕಿಡಿಕಾರಿರುವ ಹೆಚ್.ಡಿ. ರೇವಣ್ಣ, “ಮೈಸೂರಿನ ಐಜಿಪಿ ನೇತೃತ್ವದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಕೆಆರ್ ಪೇಟೆಯ ಹತ್ತಿರದ ತೋಟದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೆ, ಸರ್ಕಲ್ ಇನ್ಸ್​ಪೆಕ್ಟರ್​ ಸಹಾಯದಿಂದ ಮತದಾರರಿಗೆ ಪೊಲೀಸರಿಂದಲೇ ಹಣ ಹಂಚುತ್ತಿದ್ದಾರೆ.

ಐಜಿಪಿ ಮುಖಾಂತರ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಹೆದರಿಸಲಾಗುತ್ತಿದೆ. ಪ್ರತಿ ಮತಕ್ಕೆ ಒಂದು ಎರಡು ಸಾವಿರ ಹಣ ಹಂಚಲಾಗುತ್ತಿದೆ. ಬೆಂಗಳೂರಿನ ಪಾಲಿಕೆ ಸದಸ್ಯರಿಂದ ಹಣ ವಸೂಲಿ ಮಾಡಲಾಗಿದೆ. ಅಲ್ಲದೆ, ನಗರದಲ್ಲಿ 15 ಲಾಡ್ಜ್ ಬುಕ್ ಮಾಡಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಖುದ್ದು ಹಣ ಹಂಚುತ್ತಿದ್ದಾರೆ. ಐಜಿಪಿ ಇದನ್ನು ಖುದ್ದು ಮಾನಿಟರಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಈ ಕುರಿತು ನಾವು ದೂರು ನೀಡಿದರೂ ಸಹ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ" ಎಂದು ದೂರಿದ್ದಾರೆ.

ಇನ್ನೂ ಮೈಸೂರು ಐಜಿಪಿ ಹೆಚ್​.ಜಿ. ರಾಘವೇಂದ್ರ ಸುಹಾಸ ವಿರುದ್ಧ ಕೆಂಡಕಾರಿರುವ ಹೆಚ್​.ಡಿ. ರೇವಣ್ಣ, "ಮೈಸೂರು ಐಜಿಪಿ ಗೆ ಹೆಡ್ ಕಾನ್ಸ್​ಟೆಬಲ್ ಕೆಲಸ ಕೊಟ್ಟರೆ ಸೂಕ್ತ. ಆತ ಐಜಿಪಿ ಪೋಸ್ಟ್​ಗೆ ಅನ್​ಫಿಟ್​. ಇಂತಹ ಕೆಲಸ ಮಾಡುವ ಬದಲು ಅವರು ಬಿಜೆಪಿ ಕಚೇರಿಯಲ್ಲಿ ಗುಲಾಮಗಿರಿ ಮಾಡಲಿ” ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಐಜಿಪಿ ವಿರುದ್ಧ ತನಿಖೆ ಮಾಡುವಂತೆ ಹಾಗೂ ಬೇರೆಡೆ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಾಗಿಯೂ ರೇವಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಹಿನ್ನೆಲೆಯಲ್ಲಿ ಹೆಚ್.ಡಿ. ರೇವಣ್ಣ ಅವರ ಮಗ ಸೂರಜ್ ರೇವಣ್ಣ ಅವರ ವಿರುದ್ಧ ಇಂದು ಬೆಳಗ್ಗೆ ಎಪ್ಐಆರ್ ದಾಖಲು ಮಾಡಲಾಗಿದೆ. ಈ ಕುರಿತು ಸಹ ಅಸಮಾಧಾನ ವ್ಯಕ್ತಪಡಿಸಿರುವ ಹೆಚ್.ಡಿ. ರೇವಣ್ಣ, “ಘಟನೆ ನಡೆದಾಗ ನನ್ನ ಮಗ ಸ್ಥಳದಲ್ಲೇ ಇಲ್ಲ. ಆದರೂ ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಪೊಲೀಸರ ಅಧಿಕಾರ ದುರುಪಯೋಗವನ್ನು ಖಂಡಿಸಿ ನಾಳೆ ಹಾಸನದ ಎಸ್​ಪಿ ಕಚೇರಿ ಎಂದು ಧರಣಿ ಮಾಡುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ : ಬಿಜೆಪಿ-ಜೆಡಿಎಸ್ ಬೆಂಬಲಿಗರ​ ನಡುವೆ ಮಾರಾಮಾರಿ; ಸೂರಜ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲು
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ