ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೆಸರಿನಲ್ಲಿ ವಂಚನೆ: ಪೊಲೀಸರ ವಶದಲ್ಲಿ ಬ್ಲಾಕ್​ಮೇಲ್​ ಲೇಡಿ

ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡರೇ ಅವರ ರೆಕ್ಕೆಯನ್ನಲ್ಲ, ತಲೆಯನ್ನೆ ತೆಗೆಯುತ್ತೇನೆ ಎಂದು ದರ್ಶನ್ ಎಚ್ಚರಿಕೆ ನೀಡಿದ್ದರು.

ನಟ ದರ್ಶನ್​

ನಟ ದರ್ಶನ್​

  • Share this:
    ಚಾಲೆಂಜಿಂಗ್​ ಸ್ಟಾರ್​ ನಟ ದರ್ಶನ್ ತೂಗುದೀಪ ಹೆಸರಿನಲ್ಲಿ ವ್ಯಕ್ತಿಯನ್ನು ಮೋಸಗೊಳಿಸಲು ಯತ್ನಿಸಿದ ಆರೋಪದ ಮೇಲೆ ಮೈಸೂರು ನಗರ ಪೊಲೀಸರು ನಕಲಿ ಬ್ಯಾಂಕ್ ಅಧಿಕಾರಿ, ಆರೋಪಿ ಅರುಣಕುಮಾರಿ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

    ಏನಿದು ಪ್ರಕರಣ?

    ಮೈಸೂರು ನಗರದ ಹೆಬ್ಬಾಳದಲ್ಲಿ ಇರುವ 'ಮೈಸೂರು ಯೂನಿಯನ್ ಕ್ಲಬ್ ನಡೆಸುತ್ತಿರುವ ಹರ್ಷ ಮೆಲಂತಾ ಎನ್ನುವ ವ್ಯಕ್ತಿಯನ್ನು ಜೂನ್ 16 ನೇ ತಾರೀಕು ಅರುಣ್ ಕುಮಾರಿ ಎನ್ನುವವರು ಭೇಟಿ ಮಾಡಿ "ನಾನು ಬ್ಯಾಂಕ್ ವ್ಯವಸ್ಥಾಪಕಿ ಎಂದು ಪರಿಚಯಿಸಿಕೊಂಡಿದ್ದಾರೆ. 'ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿನಲ್ಲಿ ಇರುವ ಕೆನರಾ ಬ್ಯಾಂಕಿನಲ್ಲಿ  25 ಕೋಟಿ ಸಾಲಕ್ಕೆ ನೀವು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಚಲನಚಿತ್ರ ನಟ ದರ್ಶನ್ ಅವರ ಅಸ್ತಿಯ ನಕಲಿ ದಾಖಲೆ ಒದಗಿಸಿದ್ದು ಅಲ್ಲದೆ ಅವರ ಸಹಿಯನ್ನೂ ಸಹ ನಕಲು ಮಾಡಿ ಮೋಸ ಮಾಡಿದ್ದೀರಿ ಎಂದು ಹೇಳಿ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಅಲ್ಲದೇ ಈ ವಿಷಯ ಹೊರಗೆ ಬಾರದಂತೆ ನೋಡಿಕೊಳ್ಳಲು 25 ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದಾದ ಮೇಲೆ ಈ ಮಹಿಳೆ ನಕಲಿ ಎಂಬುದು ಹರ್ಷ ಅವರಿಗೆ ಗೊತ್ತಾಗಿದೆ, ಅವರು ತಕ್ಷಣ ಜುಲೈ 3 ನೇ ತಾರೀಕು ದೂರು ದಾಖಲಿಸುತ್ತಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಹರ್ಷ ಅವರು ಜುಲೈ 3 ನೇ ತಾರೀಕು ಮೈಸೂರು ನಗರದ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ದೂರು ಆಧರಿಸಿ, ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಇದೇ ಮಹಿಳೆ ದರ್ಶನ್ ಅಭಿನಯದ ರಾಬರ್ಟ್​ ಚಿತ್ರದ ನಿರ್ಮಾಪಕ ಉಮಾಪತಿ ಅವರಿಗೂ ಕರೆ ಮಾಡಿ, ಹರ್ಷ ಎಂಬುವರು ದರ್ಶನ್​ ಅವರ ಆಸ್ತಿಯನ್ನು ಸಾಲಕ್ಕಾಗಿ ಬ್ಯಾಂಕಿಗೆ ಅಡ ಇಟ್ಟಿದ್ದಾರೆ ನಿಜವೇ ಎಂದು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ನಿರ್ಮಾಪಕ ಉಮಾಪತಿ ಅವರು ಕೂಡಲೇ ಬೆಂಗಳೂರಿನ ಪೊಲೀಸ್​ ಠಾಣೆಯಲ್ಲಿ ಜೂನ್​ 17 ರಂದು ಅರುಣಕುಮಾರಿ ಅವರ ಮೇಲೆ ದೂರು ದಾಖಲಿಸಿದ್ದಾರೆ.

    ಈ ನಿಟ್ಟಿನಲ್ಲಿ ನಟ ದರ್ಶನ್ ಅವರು ಮೈಸೂರಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಭಾನುವಾರ ಭೇಟಿ ನೀಡಿದ್ದರು.

    ಮೈಸೂರಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಬಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಾರೇ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡರು ಅವರ ರೆಕ್ಕೆಯನ್ನಲ್ಲ, ತಲೆಯನ್ನೆ ತೆಗೆಯುತ್ತೇನೆ ಎಂದು ದರ್ಶನ್ ಎಚ್ಚರಿಕೆ ನೀಡಿದ್ದರು.

    'ನೋಡಿ ನನಗೆ ಯಾರೂ ಬ್ಲಾಕ್ ಮೇಲ್ ಮಾಡಿಲ್ಲ, ಆದರೆ ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಅನಂತರ ಏನಾಗುತ್ತದೆ ಎಂಬುದನ್ನು ನಿಮಗೆ ಸಂಪೂರ್ಣ ವಿವರ ಕೊಡುತ್ತೇನೆ ಎಂದು ಹೇಳಿದರು.

    ಈ ಪ್ರಕರಣದ ರೂವಾರಿ ಆರೋಪಿ ಅರುಣಕುಮಾರಿ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ಯಾಕೆ ಇಂತಹ ಕೆಲಸ ಮಾಡಿದ್ದಾರೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ನಟ ದರ್ಶನ್ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: Kareena Kapoor: 2ನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ತೆಗೆದಿದ್ದ ಫೋಟೋಗಳನ್ನು ಶೇರ್​ ಮಾಡಿದ ಕರೀನಾ ಕಪೂರ್​..!

    ಮೈಸೂರು ಪೊಲೀಸರು ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿ ಜೊತೆಗೆ, ಮಧುಕೇಶವ ಹಾಗೂ ನಂದೀಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: