ಮೈಸೂರು (ಸೆ. 17) : ಜಿಲ್ಲೆಯ ನಂಜನಗೂಡಿನ ಪುರಾತನ ಪ್ರಸಿದ್ಧ ಹುಚ್ಚಗಣಿ ಮಹದೇವಮ್ಮ ದೇಗುಲ ತೆರವಿಗೆ ಬಿಜೆಪಿ ನಾಯಕರಲ್ಲೇ ತೀವ್ರ ಅಸಮಧಾನ ವ್ಯಕ್ತವಾಗಿದೆ. ಜಿಲ್ಲೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಕೂಡ ಏಕಾಏಕಿ ದೇವಾಲಯ ತೆರವು ಮಾಡಿದ್ದು ತಪ್ಪು ಎಂದಿದ್ದಾರೆ. ಇದರ ಬೆನ್ನಲ್ಲೇ ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಸರಿಯಾದ ವಿವರಣೆ ನೀಡದಿರುವುದು ವಿವಾದಕ್ಕೆ ಕಾರಣ ಸಂಸದ ಪ್ರತಾಪ್ಸಿಂಹ ಗುಡುಗಿದ್ದಾರೆ. ಈ ನಡುವೆ ತಲೆದಂಡದ ಆತಂಕದಲ್ಲಿರುವ ನಂಜನಗೂಡು ತಹಶೀಲ್ದಾರ್ ಬಿ.ಎಸ್.ಯಡಿಯೂರಪ್ಪ ಮೊರೆ ಹೋಗಿದ್ದಾರೆ.
ಮೈಸೂರಿನ ಮಹದೇವಮ್ಮ ದೇಗುಲ ತೆರವು ವಿವಾದ ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಮೊನ್ನೆ ಸಚಿವ ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾಮ ವ್ಯಕ್ತಪಡಿಸಿದ್ದಾರೆ. ಏಕಾಏಕಿ ದೇವಾಲಯ ತೆರವು ಮಾಡಿದ್ದು ಸರಿಯಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವಸ್ಥಾನ ತೆರವುಗೊಳಿಸದಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮೊದಲು ಚರ್ಚೆ ಮಾಡಬೇಕಿತ್ತು, ಯಾವುದೇ ಕಾರಣಕ್ಕೂ ದೇಗುಲ ತೆರವು ಮಾಡದಂತೆ ಆಗ್ರಹ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮತ್ತೆ ಅಧಿಕಾರಿಗಳ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಇನ್ನ ಆರಂಭದಿಂದಲೂ ಘಟನೆಗೆ ಅಧಿಕಾರಿಗಳೇ ಹೊಣೆ ಎನ್ನುತ್ತಿರುವ ಸಂಸದ ಪ್ರತಾಪ್ ಸಿಂಹ ಇವತ್ತು ಕೂಡ ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಐಎಎಸ್ ಅಧಿಕಾರಿಗಳು ಆಡಳಿತಾತ್ಮಕ ವಿಚಾರದಲ್ಲಿ ಸರ್ಕಾರಕ್ಕೆ ಸರಿಯಾಗಿ ವಿವರಣೆ ಕೊಡುತ್ತಿಲ್ಲ ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ವಿರುದ್ದ ಗುಡುಗಿದ್ರು. ಅಲ್ಲದೆ ಅಂದು ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿ ಆಗಿದ್ದರು ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ತಪ್ಪು ನಡೆಯದಂತೆ ಅಂದೆ ನಿರ್ಧಾರಗಳನ್ನ ಕೈಗೊಳ್ಳಬಹುದಿತ್ತು. ಆದ್ರೆ ಈಗ ಕಾಂಗ್ರೆಸ್ ಬಿಜಪಿ ವಿರುದ್ದ ಬಿಜೆಪಿ ಕಾಂಗ್ರೆಸ್ ವಿರುದ್ದ ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತ ಕಾಲ ಹರಣ ಮಾಡುತ್ತಿದ್ದಾರೆ ಎಂದು ಕಡಿಕಾರಿದರು.
ಇದನ್ನು ಓದಿ: ಜನಾಕ್ರೋಶದ ಹಿನ್ನಲೆ ನಂಜನಗೂಡಿನಲ್ಲಿ ದೇವಾಲಯ ಮರು ನಿರ್ಮಾಣಕ್ಕೆ ಮುಂದಾದ ಸರ್ಕಾರ?
ಬಿಎಸ್ವೈ ಮೊರೆ ಹೋದ ತಹಶೀಲ್ದಾರ್
ಈ ನಡುವೆ ಮೈಸೂರು ಜಿಲ್ಲಾಧಿಕಾರಿ ಮತ್ತು ನಂಜನಗೂಡು ತಹಶೀಲ್ದಾರ್ ವಿರುದ್ದ ಕ್ರಮಕ್ಕೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈ ಹಿನ್ನಲೆಯಲ್ಲಿ ಆತಂಕಕ್ಕೊಳಗಾಗಿರುವ ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಬಿ.ಎಸ್. ಯಡಿಯೂರಪ್ಪ ಮೊರೆ ಹೋದಂತೆ ಕಾಣುತ್ತಿದೆ. ಇವತ್ತು ಸುತ್ತೂರು ಮಠಕ್ಕೆ ಮಾಜಿ ಸಿಎಂ ಬಿಎಸ್ವೈ ಅವರು ಭೇಟಿ ಕೊಟ್ಟಿದ್ದ ವೇಳೆ ಮೋಹನ್ ಕುಮಾರಿ ಪ್ರತ್ಯಕ್ಷಗೊಂಡಿದ್ದು, ಈ ಸಂಬಂಧ ಅವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ದೇವಸ್ಥಾನ ತೆರವು ವಿಚಾರ ಈ ಮಟ್ಟಿಗೆ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯ ಹೆಚ್ಚಿದೆ. ಈ ಹಿನ್ನಲೆ ತಮ್ಮ ತಲೆ ದಂಡ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ನಂಜನಗೂಡು ತಹಶೀಲ್ದಾರ್ ಬಿಎಸ್ವೈ ಮೊರೆ ಹೋಗಿರೋದು ಸರ್ಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಮಹದೇವಮ್ಮ ದೇಗುಲ ತೆರವು ವಿವಾದವನ್ನು ಸರ್ಕಾರ ಅಧಿಕಾರಿಗಳ ತಲೆಗೆ ಕಟ್ಟುವ ಮೂಲಕ ಪಾರಾಗಲು ಯತ್ನಿಸಿದೆ. ಮತ್ತೊಂದು ಕಡೆ ವಿರೋಧ ಪಕ್ಷಗಳು ಕೂಡ ದೇವಸ್ಥಾನ ಕೆಡವಿದ ವಿಚಾರ ಮುಂದಿಟ್ಟುಕೊಂಡು ಹಿಂದೂಗಳ ಓಲೈಕೆಗೆ ಕಸರತ್ತು ನಡೆಸಿದೆ. ಈ ನಡುವೆ ಮುಖ್ಯಮಂತ್ರಿಗಳು ಈ ವಿಚಾರ ಕುರಿತು ಇಂದು ಮುಜರಾಯಿ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ನಾಳೆ ಈ ಕುರಿತು ನಿರ್ಣಯ ಕೈ ಗೊಳ್ಳಲಿದ್ದಾರೆ.
(ವರದಿ - ಸುನೀಲ್ ಗೌಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ