ಬೆಂಗಳೂರು(ಆ.26): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಇಡೀ ದೇಶವೇ ತಲೆ ತಗ್ಗಿಸುವಂತದ್ದು. ಈ ಕೃತ್ಯಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪೊಲೀಸ್ ಇಲಾಖೆಯು ಸಹ ತ್ವರಿತ ಗತಿಯಲ್ಲಿ ತನಿಖೆ ನಡೆಸುತ್ತಿದ್ದು, ಕಾಮುಕರ ಹೆಡೆಮುರಿ ಕಟ್ಟಲು ಯತ್ನಿಸುತ್ತಿದ್ದಾರೆ. ಈ ನಡುವೆಯೇ ರಾಷ್ಟ್ರೀಯ ಮಹಿಳಾ ಆಯೋಗವು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಎಂದು ಕರ್ನಾಟಕ ಡಿಜಿಪಿಗೆ ಪತ್ರ ಬರೆದಿದೆ.
ಎಎನ್ಐ ಟ್ವೀಟ್ ಪ್ರಕಾರ, ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ(Mysuru Gang Rape) ಎಸಗಿದ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ರಾಷ್ಟ್ರೀಯ ಮಹಿಳಾ ಆಯೋಗ (National Commission for Women -NCW) ಕರ್ನಾಟಕ ಡಿಜಿಪಿಗೆ ಪತ್ರ ಬರೆದು ಸೂಚಿಸಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ ನೀಡಿದೆ.
National Commission for Women (NCW) has taken cognizance of the Mysuru gang rape case. The Commission has written to DGP Karnataka to make sure that all accused are identified and immediately arrested and charged under relevant sections of the law pic.twitter.com/rPMMu8VXpt
— ANI (@ANI) August 26, 2021
ಇದನ್ನೂ ಓದಿ:Mysuru Gang Rape Case: ಸಂತ್ರಸ್ಥೆ ಬಳಿ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾಮುಕರು, ಕಂಠಪೂರ್ತಿ ಕುಡಿದು ಗ್ಯಾಂಗ್ ರೇಪ್
ಆರೋಪಿಗಳನ್ನು ಗಲ್ಲಿಗೇರಿಸಿ; ಯತ್ನಾಳ್
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಯಾವುದೇ ಕಾರಣಕ್ಕೂ ಅವರಿಗೆ ಜಾಮೀನು ಸಿಗಬಾರದು. ಆ ಕಾಮುಕರನ್ನು ಗಲ್ಲಿಗೇರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಮಲೆಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.
ಮುಂದುವರೆದ ಅವರು, ಮೈಸೂರಿನಲ್ಲಿ ನಡೆಯಬಾರದ ಘಟನೆ ನಡೆದಿದೆ. ಕರ್ನಾಟಕದಲ್ಲಿ ಅತ್ಯಚಾರದಂತಹ ದೌರ್ಜನ್ಯ ಪ್ರಕರಣಗಳನ್ಮು ಗೃಹ ಮಂತ್ರಿಗಳು ನಿಗ್ರಹ ಮಾಡುತ್ತಾರೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದರೆ ಎನ್ಕೌಂಟರ್ ಮಾಡಬೇಕು . ದುಷ್ಟ ಶಕ್ತಿಗಳಿಗೆ ಇಂತಹ ಶಿಕ್ಷಗಳು ಅನಿವಾರ್ಯ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರು ತಿಂಗಳ ಒಳಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿರ್ಣಯ ಆಗಬೇಕು. ವಿಶೇಷ ಕೋರ್ಟ್ ರಚನೆ ಮಾಡಿ ಶೀಘ್ರವೇ ದುಷ್ಟರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಸ್ಥಳಕ್ಕೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಭೇಟಿ ನೀಡಿದ್ದಾರೆ. ಸ್ಥಳ ವೀಕ್ಷಣೆ ಮಾಡಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಇದು ಬಿಜೆಪಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ. ಮೈಸೂರನ್ನ ಪೆನ್ಷನರ್ ಪ್ಯಾರಡೈಸ್ ಅಂತಿದ್ರೂ, ಆದ್ರೆ ಇದೀಗ ಕಾನೂನು ಸುವ್ಯವಸ್ಥೆ ಹದಗೆಡ್ತಿದೆ. ಕೇವಲ 36ಗಂಟೆಯ ಒಳಗೆ ಎರಡು ಬೆಚ್ಚಿಬೀಳಿಸುವ ಘಟನೆ ನಡೆದಿವೆ. ನಿಜಕ್ಕೂ ಇದು ನಾಗರೀಕ ಸಮಾಜ ತಲೆತಗ್ಗಿಸುವಂತ ಘಟನೆ. ಕೂಡಲೇ ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಬೇಕು. ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಎಂದು ಎಂ.ಕೆ.ಸೋಮಶೇಖರ್ ಒತ್ತಾಯ ಮಾಡಿದ್ದಾರೆ.
ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ, ಮೈಸೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಎನ್ಎಸ್ಯೂಐ, ಮಹಿಳಾ ಕಾಂಗ್ರೆಸ್ನಿಂದ ಪ್ರತ್ಯೇಕ ಪ್ರತಿಭಟನೆ ನಡೆಯುತ್ತಿದೆ. ರಾಮಸ್ವಾಮಿ ವೃತ್ತದಲ್ಲಿ ಎನ್ಎಸ್ಯೂಐ, ಕಾಂಗ್ರೆಸ್ ಕಚೇರಿ ಬಳಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.
ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಬೆಳಗ್ಗೆ 12 ಗಂಟೆ ಒಳಗಾಗಿ ಎಫ್ ಐ ಆರ್ ದಾಖಲಾಗಿದೆ. ಪ್ರಕರಣವನ್ನ ಕಂಡುಹಿಡಿಯಲು ಪೋಲಿಸರು ಕೆಲಸ ಮಾಡ್ತಾ ಇದ್ದಾರೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿದೆ. ಇಂದು ಮೈಸೂರಿಗೆ ಹೋಗ್ತಾ ಇದ್ದೀನಿ. ಅಲ್ಲಿಯೇ ನಾಳೆಯೂ ಇದ್ದು ಸಭೆ ಮಾಡಿ ಕ್ರಮ ಜರುಗಿಸ್ತೀವಿ ಎಂದರು.
ಇದನ್ನೂ ಓದಿ:Gold Price Today: ಚಿನ್ನ ಕೊಳ್ಳುವವರಿಗೆ ಶುಭ ಸುದ್ದಿ; ಇಂದು ಇಳಿಕೆ ಕಂಡ ಬಂಗಾರದ ಬೆಲೆ
ಆ ಹೆಣ್ಣುಮಗಳ ತಂದೆ-ತಾಯಿ ಬಂದಿದ್ದಾರೆ. ಮಹಾರಾಷ್ಟ್ರದ ಹುಡುಗಿ ಅವಳು. ಈಗಾಗಲೇ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಬೇಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಹಿರಿಯ ಅಧಿಕಾರಿ ಪ್ರತಾಪ್ ರೆಡ್ಡಿ ಅವ್ರನ್ನ ಮೈಸೂರಿಗೆ ಕಳುಹಿಸಲಾಗಿದೆ. ಬೇರೆ ಬೇರೆ ತಂಡಗಳನ್ನ ರಚಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳನ್ನ ಬಂಧಿಸಲು ಕ್ರಮಕೈಗೊಳ್ಳಲಾಗಿದೆ. ಬಂಧನದ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.
ಮೈಸೂರು ಪ್ರಮುಖವಾದ ಪ್ರವಾಸಿ ತಾಣ. ಸಾವಿರಾರು ಜನ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಈ ಘಟನೆ ದುರದೃಷ್ಟಕರ, ತಲೆತಗ್ಗಿಸುವಂತದ್ದು. ನಾಳೆ ಇಡೀ ದಿನ ಮೈಸೂರಿನಲ್ಲೇ ಇರುತ್ತೇನೆ. ಸರಣಿ ಸಭೆಗಳನ್ನ ನಡೆಸುತ್ತೇನೆ ಎಂದರು.
ಮುಂದುವರೆದ ಅವರು, ಇಂತಹ ವಿಚಾರಗಳಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ಇದು ರಾಜಕೀಯ ಮಾಡುವ ಘಟನೆಯೂ ಅಲ್ಲ. ಕಾಂಗ್ರೆಸ್ ಅವಧಿಯಲ್ಲಿ ಏನು ಸುಖವಾಗಿತ್ತಾ? ಇಂತಹ ಘಟನೆಗಳು ಆಗಿರಲಿಲ್ವಾ? ಅವರ ಅವಧಿಯಲ್ಲೂ ನಡೆದಿತ್ತು. ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ