ಮೈಸೂರು(ಅ.07): ವಿಶ್ವವಿಖ್ಯಾತ ಮೈಸೂರು ದಸರಾ-2021ಕ್ಕೆ (Mysuru Dasara-2021) ಮಾಜಿ ಸಿಎಂ ಎಸ್. ಎಂ. ಕೃಷ್ಣ(Former CM SM Krishna) ವಿದ್ಯುಕ್ತ ಚಾಲನೆ ನೀಡಿದರು. ಬೆಳ್ಳಿ ರಥದಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಉದ್ಘಾಟನಾ ಭಾಷಣ(Inauguration Speech) ಮಾಡಿದ ಅವರು, ದಸರಾ ಸುಲಲಿತವಾಗಿ ಜರುಗಲಿ. ಉಲ್ಲಾಸದಿಂದ, ಭಕ್ತಿಯಿಂದ ದಸರಾ ಆಚರಿಸೋಣ. ದಸರಾ ಉದ್ಘಾಟನೆಗೆ ಅವಕಾಶ ಕೊಡುವ ಮೂಲಕ ನನಗೆ ದೊಡ್ಡ ಗೌರವ ನೀಡಿದ್ದೀರಿ ಎಂದು ಎಸ್ಎಂ ಕೃಷ್ಣ ಸಿಎಂ ಬೊಮ್ಮಾಯಿಗೆ(CM Basavaraj Bommai) ಧನ್ಯವಾದ ತಿಳಿಸಿದರು.
411ನೇ ಮೈಸೂರು ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಎಸ್ಎಂಕೆ, ಮನುಕುಲಕ್ಕೆ ಬಂದ ದೊಡ್ಡ ಗಂಡಾಂತರ ಕೊರೊನಾ. ಈ ಗಂಡಾಂತರದಿಂದ ಪಾರು ಮಾಡಿ ಎಂದು ಚಾಮುಂಡಿದೇವಿಗೆ ಪೂಜೆ ಸಲ್ಲಿಸಿದ್ದೇವೆ ಎಂದರು. ಸಿಎಂ ಬೊಮ್ಮಾಯಿ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್ , ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ, ಸುನೀಲ್ ಕುಮಾರ್, ಶಿವರಾಂ ಹೆಬ್ಬಾರ್ ಸೇರಿದಂತೆ ಮೈಸೂರು ಭಾಗದ ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮುಂದುವರೆ ಅವರು, ಮೈಸೂರು ದಸರಾಕ್ಕೆ 800 ವರುಷಗಳ ಇತಿಹಾಸವಿದೆ. ವಿಜಯನಗರ ಅರಸು ತಮ್ಮ ಶಕ್ತಿ ಪ್ರದರ್ಶನಕ್ಕೆ, ದ್ವಿಗಿಜಯಕ್ಕೆ ಈ ಹಬ್ಬ ಮಾಡುತ್ತಿದ್ದರು ಮಹಾನವಮಿ ದಿಬ್ಬದಲ್ಲಿ ನವರಾತ್ರಿಯಲ್ಲಿ ಸಾಹಸಕ್ರೀಡೆ ಜರುಗುತ್ತಿತ್ತು. ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ದಸರಾಕ್ಕೆ ವಿಶೇಷ ಅರ್ಥ ಕಲ್ಪಿಸಿಕೊಟ್ಟ ದಿವಾನರು. ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ. ರಾಮಕೃಷ್ಣ ಆಶ್ರಮದಿಂದ ಪ್ರತಿ ತಿಂಗಳು ಚಾಮುಂಡಿ ಬೆಟ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದೆವು. ಇಂಥ ನೆನಪು ಮಾಡಿಕೊಂಡಾಗ ಮತ್ತೆ ಆ ಗಳಿಕೆ ಬರಬಾರದೆ ಎಂದನಿಸುತ್ತದೆ.ದಸರಾ ಹಬ್ಬನ್ನು ಪ್ರತಿ ಮನೆಯಲ್ಲಿ ನಾಡಹಬ್ಬವಾಗಿ ಆಚರಿಸಲಾಗುತ್ತದೆ ಎಂದರು.
ಇದನ್ನೂ ಓದಿ:Mysuru Dasara 2021: ಇಂದಿನಿಂದ ಆರಂಭ ದಸರೆಯ ವೈಭವ, ಸರಳ ದಸರೆಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಉದ್ಘಾಟನೆ
ಸಿಂಗಾಪುರದಂತೆ ಮೈಸೂರಿನ ಅಭಿವೃದ್ಧಿ
ಮೈಸೂರು ದಸರಾ ನೋಡಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಅವರು ರಾಜ್ಯದಲ್ಲಿರುವ ಐತಿಹಾಸಿಕ ಸ್ಥಳಕ್ಕೆ ಭೇಟಿ ಕೊಡುವಂತೆ ನಾವು ಅನುವು ಮಾಡಿಕೊಡಬೇಕು. ಇದರಿಂದ ಪ್ರವಾಸೋದ್ಯಮ ಬೆಳೆಯುತ್ತೆ. ರಾಜ್ಯದ ಸಂಪನ್ಮೂಲ ಹೆಚ್ಚಾಗುತ್ತದೆ. ಸಿಂಗಾಪುರನಂತೆ ಮೈಸೂರು ಅಭಿವೃದ್ಧಿಯಾಗಬೇಕಿದೆ. ಅಂಥ ಸಾಧ್ಯತೆಗಳು ಮೈಸೂರಿಗಿದೆ. ಇದನ್ನು ಸರ್ಕಾರ ಸಾಕಾರಗೊಳಿಸಬೇಕಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯ ಶ್ಲಾಘನೆ
ಪ್ರಧಾನಿ ನರೇಂದ್ರ ಮೋದಿ ದೊಡ್ಡ ದೊಡ್ಡ ಕನಸು ಕಂಡಿದ್ದಾರೆ. ಅದಕ್ಕಾಗಿ ದಿನದ 24 ಗಂಟೆ ಕಷ್ಟಪಟ್ಟು ಶ್ರಮಿಸುತ್ತಿದ್ದಾರೆ. ನನ್ನಿಡೀ ಜೀವನದಲ್ಲಿ ಮೋದಿಯಷ್ಟು ಪರಿಶ್ರಮ ಪಡುತ್ತಿರುವವರನ್ನು ಮತ್ತೊಬ್ಬರನ್ನು ನೋಡಿಲ್ಲ. ಅವರ ಶ್ರಮಕ್ಕೆ ನಾವೆಲ್ಲ ಸಹಕಾರ ನೀಡಬೇಕಿದೆ. ಯುವಜನಾಂಗ ದೇಶದ ಆಸ್ತಿ. ಅವರನ್ನು ಪ್ರಗತಿ ಪಥದತ್ತ ಕೊಂಡಯ್ಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ, ಕೇಂದ್ರ ಸರ್ಕಾರ ಶ್ರಮಿಸಲಿದೆ ಎಂದು ಭಾವಿಸಿದ್ದೇನೆ ಎಂದರು.
ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಎಸ್ ಎಂ ಕೃಷ್ಣ
ಇದೇ ವೇಳೆ, ಎಸ್.ಎಂ.ಕೃಷ್ಣ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಮೈಸೂರಿಗೆ 10ನೇ ವಯಸ್ಸಿನಲ್ಲಿ ಬಂದೆ, ಇಲ್ಲಿ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣ ಪಡೆದೆ. ಮೈಸೂರು ಜೊತೆಯಲ್ಲಿ ನಾನು ಬೆಳೆದೆ. ಮೈಸೂರಿನಿಂದ ಪ್ರತಿದಿನ ಚಾಮುಂಡಿಬೆಟ್ಟ ನೋಡುತ್ತಿದ್ದೆ. ಕೈಮುಗಿದು ಅಲ್ಲಿಂದಲೇ ನಮಿಸುತ್ತಿದ್ದೆ. ಆಗೆಲ್ಲಾ ದಸರಾ ಮಹಾಸಡಗರಿಂದ ನಡೆಯುತ್ತಿದ್ದ ಕಾಲವದು. ವಿಜಯದಶಮಿ ದಿನ ಮಂಡ್ಯ, ಚಾಮರಾಜನಗರ, ಬೆಂಗಳೂರು ಹಾಗೂ ವಿದೇಶಗಳಿಂದ ಜನರು ಆಗಮಿಸುತ್ತಿದ್ದರು. ದಸರಾ ಹಬ್ಬದ ಸೊಗಡನ್ನು ನೋಡಿ ಸಂಭ್ರಮಿಸುತ್ತಿದ್ದರು ಎಂದರು.
ಮೈಸೂರು ಕುಸ್ತಿಗೆ ಹೆಸರುವಾಸಿ. ದಸರಾದಷ್ಟೇ ವಿಶ್ವವಿಖ್ಯಾತ ವಸ್ತು ಪ್ರದರ್ಶನ ಇರುತ್ತಿತ್ತು. ಸಂಜೆ ಓಡಾಡಿ ನಾವು ಅದನ್ನು ಸಂಭ್ರಮಿಸುತ್ತಿದ್ದೇವೆ. ನಮ್ಮನ್ನು ಪುಳಕಿತಗೊಳಿಸುವ ಘಟನೆ ದಸರಾದಲ್ಲಿ ನಡೆಯುತ್ತಿತ್ತು ಎಂದು ಸ್ಮರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ