ಮೈಸೂರು(ಫೆ.17): ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇದೆ ಫೆ.24ಕ್ಕೆ ನಿಗಧಿಯಾಗಿದೆ. ಈ ಬಾರಿ ಕುತೂಹಲ ಮೂಡಿಸಿದ ಪಾಲಿಕೆ ಮೇಯರ್ ಚುನಾವಣೆ ಯಾರ ಜೊತೆಗಿನ ಹೊಂದಾಣಿಕೆಯಲ್ಲಿ ನಡೆಯಲಿದೆ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ. ಯಾವುದೇ ಪಕ್ಷದಲ್ಲೂ ಸ್ಪಷ್ಟ ಬಹುಮತ ಇಲ್ಲದ ಕಾರಣ, ಹೊಂದಾಣಿಕೆ ಮೂಲಕವೇ ಮೇಯರ್ ಪಟ್ಟಕ್ಕೇರಬೇಕಿರುವ ಮೂರು ಪಕ್ಷಗಳು ಇದೀಗ ರಾಜಕೀಯ ಮೇಲಾಟಗಳಿಗೆ ವೇದಿಕೆ ಸೃಷ್ಟಿ ಮಾಡುತ್ತಿವೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೇಯರ್ ಪಟ್ಟಕ್ಕೆ ಬಿಜೆಪಿ ಏರುವ ಆಸೆ ಹೊಂದಿದ್ದು, ಈ ಬಾರಿ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಜೆಡಿಎಸ್ ಜೊತೆ ಹೊಂದಾಣಿಕೆ ಮೂಲಕ ಮೇಯರ್ ಪಟ್ಟಕ್ಕೇರುವ ಸಾಧ್ಯತೆಯ ಸುಳಿವು ನೀಡುತ್ತಿದೆ.
ಬಿಜೆಪಿ ಮಹಿಳಾ ಪಾಲಿಕೆ ಸದಸ್ಯೆಯೇ ಈ ಬಾರಿ ಮೈಸೂರು ಪಾಲಿಕೆ ಮೇಯರ್ ಆಗುವ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದ್ದು, ವಾರ್ಡ್ ನಂ 59 ರ ಸದಸ್ಯೆ ಸುನಂದ ಪಾಲನೇತ್ರರಿಗೆ ಮೇಯರ್ ಸ್ಥಾನ ಒಲಿಯುವ ಸಾಧ್ಯತೆ ಇದೆ. ಸಿಎಂ ಬಿಎಸ್‌ವೈ ಸಂಬಂಧಿಯೂ ಆಗಿರುವ ಸುನಂದ ಪಾಲನೇತ್ರ 3ನೇ ಬಾರಿಗೆ ಪಾಲಿಕೆ ಸದಸ್ಯೆಯಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಈ ಬಾರಿಯ ಮೇಯರ್ ಸ್ಥಾನದ ಮೀಸಲಾತಿಯನ್ನ ವೀರಶೈವ ಸಮುದಾಯಕ್ಕೆ ಸೇರಿದ ಸುನಂದಾಗೆ ನೀಡಲು ಬಿಜೆಪಿ ಸಜ್ಜಾಗಿದೆ. ಈ ಬಗ್ಗೆ ಎಲ್ಲ ಹಂತದಲ್ಲು ಮಾತುಕತೆ ಮುಗಿಸಿರುವ ಸಿಎಂ ಬಿಎಸ್‌ವೈ. ಶಾಸಕ ಸಾ.ರಾ.ಮಹೇಶ್ ಜೊತೆ ಮಾತುಕತೆ ನಡೆಸಿ ತಮಗೆ ಸಹಕಾರ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ಈ ವಿಚಾರ ಗೊತ್ತಾಗುತ್ತದ್ದಂತೆ ಮೈಸೂರು ಪಾಲಿಕೆ ಮೇಯರ್ ಮೈತ್ರಿ ಕಸರತ್ತು ಮತ್ತಷ್ಟು ಹೆಚ್ಚಾಗಿದ್ದು ಇಂದು ಶಾಸಕ ಸಾ.ರಾ.ಮಹೇಶ್ ಭೇಟಿಯಾದ ತನ್ವೀರ್ ಸೇಠ್ ಮತ್ತೆ ಜೆ.ಡಿ.ಎಸ್ ಜೊತೆ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ನೇರವಾಗಿ ಸಾ.ರಾ.ಮಹೇಶ್ ಕಚೇರಿಗೆ ಆಗಮಿಸಿ ಮಾತುಕತೆ ನಡೆಸಿದ ತನ್ವೀರ್ ನೂರಕ್ಕೆ ನೂರು ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಆಗುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾ.ರಾ.ಮಹೇಶ್ ಭೇಟಿ ನಂತರ ಮಾತನಾಡಿದ ಶಾಸಕ ತನ್ವೀರ್ ಸೇಠ್ ಮೇಯರ್ ಸ್ಥಾನ ನಮಗೆ ಬೇಕು ಅನ್ನೋದೇನಿಲ್ಲ , ನಮಗೆ ಜನರಿಗೆ ಕೊಟ್ಟ ಭರವಸೆ ಈಡೇರಿಸಲು ವೇದಿಕೆ ಬೇಕು ಅಷ್ಟೆ. ಎರಡು ಪಕ್ಷದವರು ಕುಳಿತು ಚರ್ಚಿಸಿ ಮುಂದಿನ ತೀರ್ಮಾನ ಮಾಡ್ತಿವಿ. ಕೆಲವೊಂದು ವಿಚಾರಗಳನ್ನ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಜನತಾದಳ ವರಿಷ್ಠರ ಬಳಿ ಮಾತುಕತೆ ನಡೆಸಲಿದ್ದಾರೆ. ಆ ನಂತರ ಮೈಸೂರಿನಲ್ಲಿ ಕಾಂಗ್ರೆಸ್ ಜೆಡಿಎಸ್ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ ಎಲ್ಲರ ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಆಗಲಿದೆ. ನಗರದ ಜನರ ಕೊಟ್ಟ ಭರವಸೆ ಈಡೇರಿಸುವ ಸಲುವಾಗಿ ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದೇವೆ. ಬೇರೆಯವರ ಮಾತಿಗೆ ಉತ್ತರ ಕೊಡಬೇಕಾಗಿಲ್ಲ ಎಂದು ತಿಳಿಸಿದರು. ಹೊಂದಾಣಿಕೆ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ರಾಜ್ಯಮಟ್ಟಕ್ಕೆ ಸಂಬಂಧಿಸಿದ್ದು, ಸ್ಥಳಿಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಅವರ ಅಭ್ಯಂತರ ಇಲ್ಲ ಅಂತಲೂ ಸ್ಪಷ್ಟನೆ ನೀಡಿದರು.
ಇನ್ನು ಸಿಎಂ ಯಡಿಯೂರಪ್ಪರನ್ನ ಸಾ.ರ.ಮಹೇಶ್ ಭೇಟಿ ವಿಚಾರವಾಗಿ, ನಾನು ಯಡಿಯೂರಪ್ಪರನ್ನ ಭೇಟಿ ಮಾಡಿದ್ದು ನಿಜ ಖಾಸಗಿಯಾಗಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ ಅಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಅಂತ ಶಾಸಕ ಸಾ.ರಾ.ಮಹೇಶ್ ಸ್ಪಷ್ಟನೆ ನೀಡಿದ್ದಾರೆ. ನಾವೇಲ್ಲ ಸ್ಥಳಿಯವಾಗಿ ಚೆನ್ನಾಗಿದ್ದೇವೆ ನಮ್ಮ ನಡುವೆ ಯಾವುದೇ ಸಮನ್ವಯದ ಕೊರತೆ ಇಲ್ಲ. ಆದ್ರೆ ರಾಜ್ಯಮಟ್ಟದಲ್ಲಿ ಸ್ವಲ್ಪ ತಿಕ್ಕಾಟ ಇದೆ ಆ ತಿಕ್ಕಾಟದಿಂದಲೇ ಈಗ ಮೇಯರ್ ಸ್ಥಾನದ ತಿಕ್ಕಾಟವು ನಡೆಯುತ್ತಿದೆ. ಹಾಗಾಗಿ ನಾವೆಲ್ಲ ಜೆಡಿಎಸ್ ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ತಿಳಿಸುತ್ತೇವೆ. ವರಿಷ್ಠರ ತೀರ್ಮಾನದಂತೆ ಮುಂದಿನ ನಿರ್ಧಾರ ಆಗಲಿದೆ. ರಾಜ್ಯಮಟ್ಟದಲ್ಲಿ ಉಪಸಭಾಪತಿ ಸ್ಥಾನವನ್ನ ಕೊಟ್ಟದ್ದಕ್ಕೆ ಅವರು ಸಭಾಪತಿ ಕೊಟ್ಟಿದ್ದು, ಇಲ್ಲಿಯೂ ಅಷ್ಟೆ ಕೊಟ್ಟು ತಗೋಬೇಕಾಗಿದೆ ಅದನ್ನ ಬಿಟ್ಟರೆ ಮತ್ತೇನು ಇಲ್ಲ. ಕೆಲವರು ಜೆಡಿಎಸ್ ಎಲ್ಲಿದೆ ಅಂತಾರೆ? ಇನ್ನು ಕೆಲವರು ನಾವು ಯಾರೊಂದಿಗೂ ಹೋಗೋದೆ ಇಲ್ಲ ಅಂತಾರೆ. ಆ ಮಾತುಗಳಿಂದಲೇ ಗೊಂದಲ ಸೃಷ್ಟಿಯಾಗಿದೆ. ಆದ್ರೆ ಇವೆಲ್ಲವನ್ನ ವರಿಷ್ಠರ ಗಮನಕ್ಕೆ ತಂದು ಎಲ್ಲವನ್ನು ನಿರ್ಧಾರ ಮಾಡ್ತಿವಿ ಅಂತ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ