ಮೈಸೂರು(ಜು.14): ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಕೆಆರ್‌ಎಸ್ ಕಲಹ ಕಾವೇರುತ್ತಲೇ ಇದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವೆ ಪರಸ್ಪರ ವಾಗ್ವಾದಗಳು ನಡೆಯುತ್ತಿವೆ. ಜೆಡಿಎಸ್ ನಾಯಕರು ಸುಮಲತಾ ವಿರುದ್ಧ ವಾಕ್ಸಮರ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸಂಸದೆ ಸುಮಲತಾ ಇಂದು ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತ ಹೇಳಿಲ್ಲ. ಬಿರುಕು ಬಿಟ್ಟಿದೆಯಾ ಅಂತ ಸಭೆಯಲ್ಲಿ ಕೇಳಿದ್ದೇನೆ ಎಂದು ಕೆಆರ್‌ಎಸ್ ಕಲಹ ವಿಚಾರಕ್ಕೆ ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ.
ಮುಂದುವರೆದ ಅವರು, ನನಗೆ ಈಗಲೂ ಶೇಕಡ 50ರಷ್ಟು ಆತಂಕ ಇದೆ. ಗಣಿಗಾರಿಕೆಯಿಂದ ಕೆಆರ್‌ಎಸ್ ಬಿರುಕಾಗುತ್ತೆ ಎಂಬ ಆತಂಕ ಇದೆ. ನಾನು ಇದನ್ನೇ ದಿಶಾ ಸಭೆಯಲ್ಲಿ ಕೇಳಿರೋದು. ಆದರೆ ಅದನ್ನೇ ಹೊರಗೆ ಬೇರೆ ರೀತಿಯಲ್ಲಿ ಅರ್ಥೈಸಿ ಇಷ್ಟೆಲ್ಲ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಗಣಿ ಅಧಿಕಾರಿಗಳು ಕೂಡ ಏನೂ ಆಗಿಲ್ಲ ಎನ್ನುವಂತೆ ಮಾತನಾಡುತ್ತಾರೆ. ಅವರ ಮೇಲೂ ಒತ್ತಡಗಳು ಇರಬಹುದು. ಈಗಾಗಿ ಸ್ವತಂತ್ರ ತನಿಯಾಗಬೇಕು. ರಾಜ್ಯದ ಅಧಿಕಾರಿಗಳಿಂದ ಸಾಧ್ಯವಾಗದಿದ್ದರೆ ಸಿಬಿಐ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಬೋಳು ತಲೆಯವ್ರಿಗೆ ಗುಡ್ ನ್ಯೂಸ್ ! ಪ್ರತಿದಿನ ತಪ್ಪದೇ ಇದನ್ನ ತಿಂದ್ರೆ 100% ಕೂದಲು ಹುಟ್ಟುತ್ತಂತೆ !
ಇದೇ ವೇಳೆ, ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1200ಕೋಟಿ ನಷ್ಟ ಆಗಿದೆ. ಇಷ್ಟು ರಾಜಧನ ವಸೂಲಿ ಮಾಡಿದ್ರೆ ಮಂಡ್ಯ ಅಭಿವೃದ್ಧಿಗೆ ಬಳಸಬಹುದಿತ್ತು. ಈಗ ಗಣಿ ಅಧಿಕಾರಿಗಳು ಡ್ರೋಣ್ ಸರ್ವೆಗೂ ಹಣ ಇಲ್ಲ ಎನ್ನುತ್ತಿದ್ದಾರೆ. ನಾನು ಗಣಿ ಸಚಿವ ಮುರುಗೇಶ್ ನಿರಾಣಿಗೆ ಎಲ್ಲವನ್ನು ಹೇಳಿದ್ದೇನೆ. ಮೊದಲು ಅವರನ್ನು ಭೇಟಿ ಬೆಟ್ಟ ಸುತ್ತಮುತ್ತಲಿನ ಗಣಿಗಾರಿಕೆ ಪ್ರದೇಶಕ್ಕೆ ಕರೆದುಕೊಂಡು ಬರುವೆ. ನಂತರ ವಸ್ತು ಸ್ಥಿತಿಗತಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸುವೆ ಎಂದು ಹೇಳಿದರು.
ಮುಂದುವರೆದ ಅವರು, ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಎಕ್ಸ್‌ಪೋಸ್ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಕೆಆರ್‌ಎಸ್ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ಈ ಪ್ರದೇಶದಲ್ಲಿ ಅಕ್ರಮ, ಸಕ್ರಮ ಅನ್ನುವ ಪ್ರಶ್ನೆಯೇ ಬರೋದಿಲ್ಲ. ಗಣಿಗಾರಿಕೆಯಿಂದಾಗಿ ಕೆಆರ್‌ಎಸ್ ಡ್ಯಾಂನಲ್ಲಿ ಕಂಪನ ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳೂ ಇವೆ. ಆದ್ದರಿಂದ ಗಣಿಗಾರಿಕೆ ನಿಲ್ಲಬೇಕು ಅಂತ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ
ಸರ್ಕಾರವನ್ನಾಗಲೀ, ಮತ್ಯಾರನ್ನೋ ಆಗಲಿ ಚಾರ್ಜ್ ಮಾಡೋದು ನನ್ನ ಉದ್ದೇಶ ಅಲ್ಲ. ವಿರೋಧ ಪಕ್ಷದವರನ್ನೂ ಎಳೆತಂದು ಇದಕ್ಕೆ ರಾಜಕೀಯ ರೂಪ ಕೊಡೋದಕ್ಕೂ ನಾನು ಬಯಸಲ್ಲ. ಆದರೆ ಅಕ್ರಮದ ಬಗ್ಗೆ ಹೋರಾಡುವ ಮನಸ್ಥಿತಿ ಇರುವ ಎಲ್ಲರ ಸಹಕಾರ ಕೇಳುತ್ತೇನೆ. ಇದನ್ನು ತಾರ್ಕಿಕ ಅಂತ್ಯ ಮುಟ್ಟಿಸುವವರೆಗೂ ಹೋರಾಟ ಮಾಡುತ್ತೇನೆ ಎಂದರು.
ಬಳಿಕ, ಸಂಸದೆ ಸುಮಲತಾ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಜೊತೆಗೆ ಶ್ರೀಗಳ ಕುಶಲೋಪರಿ ವಿಚಾರಿಸಿದರು. ಶ್ರೀಗಳ ಪೂರ್ವಾಶ್ರಮದ ತಾಯಿ ನಿಧನರಾದ ಹಿನ್ನೆಲೆ, ಶ್ರೀಗಳನ್ನು ಸೌಜನ್ಯಯುತ ಭೇಟಿ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ