ಮೈಸೂರು: ಸಂಸ್ಕೃತ (Sanskrit) ವಿವಿಗೆ ಹಣ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕರವೇ ನಾರಾಯಣ ಗೌಡ ಅವರಿಗೆ (Karave Narayana Gowda) ಸಂಸದ ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದರು. ನಾರಾಯಣ್ + ಗೌಡ ಅವರ ಹೆಸರಿನಲ್ಲೇ ಸಂಸ್ಕೃತ ಅಡಗಿದೆ. ಹಾಗಂತ ನಾರಾಯಣ ಗೌಡರು ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರಾ? ಸಂಸ್ಕೃತ ಬಹಳ ಪ್ರಾಚೀನ ಭಾಷೆ. ಹೀಗಾಗಿಯೇ ರಾಷ್ಟ್ರೀಯ ಭಾಷೆ ಮಾಡಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಪ್ರಸ್ತಾವನೆ ಸಲ್ಲಿಸಿದ್ರು. ಅಂಬೇಡ್ಕರ್ ಅವರಿಗಿಂತ ಯಾರೂ ಮೇಧಾವಿಗಳು ಇಲ್ಲ ಎಂದು ನಾನು ಭಾವಿಸಿದ್ದೇನೆ. ತ್ರಿಭಾಷಾ ಸೂತ್ರವನ್ನ ಜಾರಿ ಮಾಡಿದ್ದೇ ಇಂದಿರಾ ಗಾಂಧಿ. ಟಿಪ್ಪು ವಿವಿ ಸ್ಥಾಪನೆ ವಿಚಾರ ಜಾರಿಗೆ ಬಂದಾಗ ಇವರು ಯಾಕೆ ಮೌನವಾಗಿದ್ದರು. ಅವರು ಚುನಾವಣೆಗೆ ನಿಂತಾಗ ರೇಡ್ ಆಗಿತ್ತು, ಅವರ ಬಳಿ ಹಣ ಸಿಕ್ಕಿದ್ದು ಎಲ್ಲರಿಗೂ ಗೊತ್ತಿದೆ. ಪ್ರಧಾನಿ ಮೋದಿಯನ್ನ ವಿರೋಧಿಸುವುದನ್ನ ಬಿಡಿ. ಸಂಸ್ಕೃತ-ಕನ್ನಡ ಭಾಷೆ ಜೊತೆಗೆ ಬೆರೆತಿದೆ. ಹುಟ್ಟು, ಸಾವು, ನಾಮಕರಣ ಎಲ್ಲದ್ರಲ್ಲೂ ಸಂಸ್ಕೃತ ಬೆರೆತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ಕೊಟ್ಟರು.
ಇದನ್ನೂ ಓದಿ: Belagavi: ಸಿಬ್ಬಂದಿ ಬೇಜವಾಬ್ದಾರಿಯಿಂದಲೇ ಮೂರು ಮಕ್ಕಳ ದಾರುಣ ಸಾವು.. ಇಬ್ಬರು ಅಧಿಕಾರಿಗಳು ಸಸ್ಪೆಂಡ್
ಲಾಕ್ಡೌನ್ ಬೇಡ ಎಂದು ಸರ್ಕಾರಕ್ಕೆ ಒತ್ತಾಯ
ಇನ್ನು ಕೊರೊನಾ ಮೂರನೇ ಅಲೆಯ ಸಂಬಂಧ ಲಾಕ್ ಡೌನ್ನಂತಹ ಕಠಿಣ ನಿಯಮಗಳನ್ನ ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಜನ ಜೀವ ಉಳಿಸಿಕೊಂಡಿದ್ದಾರೆ, ಜೀವನ ದುಸ್ಥರವಾಗಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಕಠಿಣ ನಿಯಮ ಬೇಡ. ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಿ, ಸೋಂಕು ಹರಡದಂತೆ ಎಚ್ಚರ ವಹಿಸಿ. ಮೊದಲನೇ ಅಲೆಯಲ್ಲಿ ಆಸ್ಪತ್ರೆ ಸಮಸ್ಯೆ, ಎರಡನೇ ಅಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇತ್ತು. ಈವಾಗ ಎಲ್ಲಾ ಸಮಸ್ಯೆ ಬಗೆಹರಿದಿದೆ. ಆ ಕಾನೂನು ಈ ಕಾನೂನು ಅಂತಾ ಜನ್ರನ್ನ ಸಂಕಷ್ಟಕ್ಕೆ ಸಿಲುಕಿಸಬೇಡಿ ಎಂದು ತಮ್ಮದೇ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಕಾಂಗ್ರೆಸ್ ವಿರುದ್ಧ ಕಿಡಿ
ಇನ್ನು ಮೇಕೆದಾಟು ಪಾದಯಾತ್ರೆ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮೇಕೆದಾಟು ಬಂದೂಬಸ್ತ್ ಗೆ ತೆರಳಿದ ಪೊಲೀಸರಿಗೆ ಕೊರೊನಾ ಬಂದಿದೆ. ಮೇಕೆದಾಟು ವೇಳೆ ಮುಖ್ಯಮಂತ್ರಿಗಳು ಮನವಿ ಮಾಡಿದ್ರೂ, ದೇಶಾದ್ಯಂತ ರ್ಯಾಲಿ ಮಾಡಲು ಸೂಕ್ತ ಕಾಲ ಅಲ್ಲ ಅಂತಾ ಹೇಳಿದ್ರು ಕೇಳಲಿಲ್ಲ. ಕಾಂಗ್ರೆಸ್ನವರು ಮೇಕೆದಾಟು ಯೋಜನೆ ಅಂತಾ ದೊಡ್ಡ ಜಾತ್ರೆ ಮಾಡಿದ್ರು , ಮುಂದೆಯಾದರೂ ಸ್ವಲ್ಪ ಜವಾಬ್ದಾರಿಯುವತಾಗಿ ವರ್ತಿಸಬೇಕು. ಯಾತ್ರೆ ಮೂಲಕ ಜಾತ್ರೆ ಮಾಡಿ ಜನರಿಗೆ ಮನವರಿಕೆ ಮಾಡಿಸುವುದಲ್ಲ. ಯೋಗ್ಯ ವಿಚಾರ, ಜನರ ಪರವಾಗಿದೆ ಅಂದ್ರೆ ಮಾಧ್ಯಮಗಳ ಮೂಲಕವೂ ಮನವರಿಕೆ ಮಾಡಿಕೊಡಬಹುದು ಎಂದು ಕಾಂಗ್ರೆಸ್ ಪಾದಯಾತ್ರೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.
ಇದನ್ನೂ ಓದಿ: Omicron: ರಾಜ್ಯದ 6 ಜಿಲ್ಲೆಗಳಲ್ಲಿ ಶಾಲೆಗಳು ಬಂದ್.. ಪರೀಕ್ಷೆ ಬರ್ತಿದೆ ಸ್ಕೂಲ್ ಓಪನ್ ಮಾಡ್ಸಿ ಅಂತ `ರುಪ್ಸಾ’ ಮನವಿ!
ಇಂದು ಸಿಎಂ ಮಹತ್ವದ ಸಭೆ
ಫೆಬ್ರವರಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆ ಇಂದು ಸಂಜೆ 4 ಗಂಟೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೋವಿಡ್ ಸಿದ್ಧತೆಯ ಕುರಿತು ಚರ್ಚೆಗಳು ನಡೆಯಲಿವೆ. ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಆರೋಗ್ಯ ಸಚಿವ ಸುಧಾಕರ್, ಆರ್ ಅಶೋಕ್, ಅಶ್ವಥ್ ನಾರಾಯಣ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿ ಸಿ ನಾಗೇಶ್ ಸೇರಿದಂತೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಅಧಿಕಾರಿಗಳು ಮತ್ತು ಸಚಿವರು ಮಾಹಿತಿ ನೀಡಲಿದ್ದಾರೆ. ಎಲ್ಲಾ ಜಿಲ್ಲೆಯ ಕೊರೊನಾ ಸ್ಥಿತಿ ಬಗ್ಗೆ ಸಿಎಂ ವರದಿ ಪಡೆಯಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ